Gujarat High Court 
ಸುದ್ದಿಗಳು

ಖಾಸಗಿ ಭೂಮಿ ಸ್ವಾಧೀನಪಡಿಸಿಕೊಂಡು ಪರಿಹಾರ ನೀಡುವುದಿಲ್ಲ ಎಂದು ಸರ್ಕಾರ ಹೇಳುವಂತಿಲ್ಲ: ಗುಜರಾತ್ ಹೈಕೋರ್ಟ್

ಕಾಲುವೆ ನಿರ್ಮಾಣಕ್ಕಾಗಿ 1983ರಲ್ಲಿ ಭೂಮಿ ನೀಡಿ ಹಣ ದೊರೆಯದೆ ಪರಿತಪಿಸಿದ್ದ ರೈತನಿಗೆ ತ್ವರಿತ ಪರಿಹಾರ ನೀಡುವಂತೆ ಮುಖ್ಯ ನ್ಯಾಯಮೂರ್ತಿ ಅರವಿಂದ್ ಕುಮಾರ್ ನೇತೃತ್ವದ ಪೀಠ ಅಧಿಕಾರಿಗಳಿಗೆ ಆದೇಶಿಸಿತು.

Bar & Bench

ಸರ್ಕಾರಿ ಅಧಿಕಾರಿಗಳು ಸಾರ್ವಜನಿಕ ಯೋಜನೆಗಾಗಿ ಖಾಸಗಿ ಭೂಮಿ ಸ್ವಾಧೀನಪಡಿಸಿಕೊಂಡು ಸಂಬಂಧಪಟ್ಟವರಿಗೆ ಪರಿಹಾರ ನೀಡದೆ ಇರುವಂತಿಲ್ಲ ಎಂದು ಗುಜರಾತ್‌ ಹೈಕೋರ್ಟ್‌ ಇತ್ತೀಚೆಗೆ ತಿಳಿಸಿದೆ.

ಕಾಲುವೆ ನಿರ್ಮಾಣಕ್ಕಾಗಿ 1983ರಲ್ಲಿ ತನ್ನ ಜಮೀನಿನ ಭಾಗವನ್ನು ಬಳಸಿಕೊಂಡಿದ್ದರೂ ಪರಿಹಾರ ನೀಡಿಲ್ಲ ಎಂದು ನ್ಯಾಯಾಲಯದಲ್ಲಿ ಅಳಲು ತೋಡಿಕೊಂಡಿದ್ದ ರೈತನೊಬ್ಬನ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅರವಿಂದ್ ಕುಮಾರ್ ನ್ಯಾಯಮೂರ್ತಿ ಅಶುತೋಷ್ ಜೆ ಶಾಸ್ತ್ರಿ  ಅವರಿದ್ದ ಪೀಠ ಆಲಿಸಿತು.

“ಸಾರ್ವಜನಿಕ ಉದ್ದೇಶಕ್ಕೆ ಖಾಸಗಿ ಭೂಮಿ ಸ್ವಾಧೀನಪಡಿಸಿಕೊಂಡು ಪರಿಹಾರ ನೀಡಲಾಗದು ಎಂದು ಸರ್ಕಾರ ಹೇಳುವಂತಿಲ್ಲ. ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲು ಬಯಸಿದರೆ ಅದು ಸೂಕ್ತ ಮತ್ತು ನ್ಯಾಯಯುತ ಪರಿಹಾರ ನೀಡಬೇಕು. ಪ್ರಸ್ತುತ ಪ್ರಕರಣದಲ್ಲಿ ಅಧಿಕಾರಿಗಳು ಮಾಡಿದ ಅಕ್ರಮದಿಂದ ಅರ್ಜಿದಾರರು ತಮ್ಮ ಬೆಲೆಬಾಳುವ ಭೂಮಿ ಇಲ್ಲದೆ ಇಷ್ಟು ವರ್ಷ ಪರಿತಪಿಸುವಂತಾಯಿತು” ಎಂದು ನ್ಯಾಯಾಲಯ ಹೇಳಿದೆ.

ಅರ್ಜಿದಾರರು 39 ವರ್ಷಗಳ ವಿಳಂಬದ ನಂತರ ನ್ಯಾಯಾಲಯದ ಮೊರೆ ಹೋಗಿದ್ದಾರೆ ಎಂದು ಸರ್ಕಾರದ ಪರ ವಕೀಲರು ವಾದ ಮಂಡಿಸಿದರೆ  ಸ್ವಾಧೀನ ಪ್ರಕ್ರಿಯೆ ಆರಂಭಿಸದೆ ಸರ್ಕಾರಿ ಅಧಿಕಾರಿಗಳು ಭೂಮಿಯನ್ನು ನೇರವಾಗಿ ಬಳಸಿದ್ದಾರೆ ಮತ್ತು 39 ವರ್ಷಗಳ ಕಾಲ ಅಕ್ರಮ ಎಸಗಿದ್ದಾರೆ ಎಂದು ರೈತನ ಪರ ನ್ಯಾಯವಾದಿಗಳು ಪ್ರತಿಪಾದಿಸಿದ್ದರು.

ಇತ್ತ ಅರ್ಜಿದಾರ ಅನಕ್ಷರಸ್ಥರಾಗಿದ್ದರಿಂದ ಪರಿಹಾರ ಕೋರುವುದು ವಿಳಂಬವಾಯಿತು ಎಂಬ ವಾದವನ್ನು ಪುರಸ್ಕರಿಸದ ನ್ಯಾಯಾಲಯ ಪರಿಹಾರ ಕೊಡುವುದು ವಿಳಂಬವಾದದ್ದಕ್ಕೆ 39 ವರ್ಷಗಳ ಕಾಲ ಶೇ 15ರಷ್ಟು ಪರಿಹಾರ ಒದಗಿಸಬೇಕು ಎಂದು ಪಟ್ಟು ಹಿಡಿಯದಿದ್ದರೆ ಮಾತ್ರ ಮನವಿ ಪರಿಗಣಿಸುವುದಾಗಿ ಹೇಳಿತು.

“ಲೆಕ್ಕ ಹಾಕಿದರೆ  (39 ವರ್ಷಗಳ ಬಡ್ಡಿ) ₹ 70 ಲಕ್ಷ ಆಗುತ್ತದೆ. ಅಸಲಿನ ಮೊತ್ತ ₹ 30 ಲಕ್ಷ. ಇದೊಂದು ಸುರಕ್ಷಿತ ಹೂಡಿಕೆ ಎಂದು ಭಾವಿಸಿ ನಿದ್ದೆಗೆ ಜಾರಿದ್ದಿರಾ? 39 ವರ್ಷಗಳ ನಂತರ ನ್ಯಾಯಾಲಯಕ್ಕೆ ಬಂದಿರುವುದರಿಂದ ತೆರಿಗೆ ಪಾವತಿದಾರರ ಹಣ ಈ ರೀತಿ ವ್ಯರ್ಥವಾಗಲು ನಾವು ಬಿಡುವುದಿಲ್ಲ” ಎಂದು ಪೀಠ ಕುಟುಕಿತು. ಅರ್ಜಿದಾರರು ಕೇವಲ 3 ವರ್ಷಗಳವರೆಗೆ ಬಡ್ಡಿ ಪಡೆಯುವಂತೆ ನ್ಯಾಯಾಲಯ ಸೂಚಿಸಿದಾಗ ಅರ್ಜಿದಾರರ ಪರ ವಕೀಲರು ಇದಕ್ಕೆ ಸಮ್ಮತಿಸಿದರು.

ಆದರೆ ಸುಪ್ರೀಂ ಕೋರ್ಟ್‌ನೀಡಿದ ತೀರ್ಪನ್ನು ಉಲ್ಲೇಖಿಸಿ ಸರ್ಕಾರದ ಪರ ವಕೀಲರು ಈ ನಿರ್ಣಯಕ್ಕೆ ಆಕ್ಷೇಪ ಎತ್ತಿದಾಗ ನ್ಯಾಯಾಲಯ "ಸರಿ. ಹಾಗಾದರೆ ಅಕ್ರಮ ಮುಂದುವರೆಸಬೇಕೆಂದು ನಮ್ಮಿಂದ ನೀವು (ಸರ್ಕಾರ) ಬಯಸುತ್ತೀರಾ? ನೀವು ಅವರ (ಅರ್ಜಿದಾರರ) ಹಕ್ಕುಗಳನ್ನು ಉಲ್ಲಂಘಿಸಿದ್ದೀರಿ" ಎಂದು ತಿಳಿಸಿ ತ್ವರಿತವಾಗಿ ಪರಿಹಾರ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿತು.