High Court of Karnataka 
ಸುದ್ದಿಗಳು

ಗ್ರಾಹಕರ ವ್ಯಾಜ್ಯ ಪರಿಹಾರ ಅಧ್ಯಕ್ಷರು, ಸದಸ್ಯರ ನೇಮಕಕ್ಕೆ ಸಮಿತಿ ರಚಿಸಿದ ಸರ್ಕಾರ: ಪಿಐಎಲ್‌ ಇತ್ಯರ್ಥ

ವೇದಿಕೆಗಳಲ್ಲಿ ಖಾಲಿ ಇರುವ ಅಧ್ಯಕ್ಷರು ಮತ್ತು ಸದಸ್ಯರ ನೇಮಕ ಸಂಬಂಧ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಅಧ್ಯಕ್ಷತೆಯಲ್ಲಿ ಮೂವರು ಸದಸ್ಯರ ಆಯ್ಕೆ ಸಮಿತಿ ರಚನೆ ಮಾಡಲಾಗಿದ್ದು, ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗಿದೆ.

Bar & Bench

ರಾಜ್ಯದಲ್ಲಿ ಖಾಲಿಯಿರುವ ಗ್ರಾಹಕರ ಹಕ್ಕುಗಳ ವ್ಯಾಜ್ಯ ಪರಿಹಾರ ವೇದಿಕೆಯ ಅಧ್ಯಕ್ಷರು, ಸದಸ್ಯರ ಆಯ್ಕೆ ಮತ್ತು ನೇಮಕ ಮಾಡುವ ಸಂಬಂಧ ಹೈಕೋರ್ಟ್‌ ಹಾಲಿ ನ್ಯಾಯಮೂರ್ತಿ ನೇತೃತ್ವದಲ್ಲಿ ಸಮಿತಿ ರಚನೆ ಮಾಡಲಾಗಿದೆ ಎಂದು ರಾಜ್ಯ ಸರ್ಕಾರವು ಸೋಮವಾರ ಕರ್ನಾಟಕ ಹೈಕೋರ್ಟ್‌ಗೆ ವಿವರಿಸಿದ್ದರಿಂದ ಈ ಕುರಿತ ಅರ್ಜಿಯನ್ನು ಇತ್ಯರ್ಥಪಡಿಸಲಾಗಿದೆ.

ಗ್ರಾಹಕರ ಹಕ್ಕುಗಳ ವ್ಯಾಜ್ಯ ಪರಿಹಾರ ವೇದಿಕೆಯ ಅಧ್ಯಕ್ಷರು ಮತ್ತು ಸದಸ್ಯರ ಹುದ್ದೆಗಳು ಖಾಲಿಯಾಗುತ್ತಿದ್ದಂತೆ ನೇಮಕ ಮಾಡಲು ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ಬೆಂಗಳೂರಿನ ವಿ ಆರ್ ರಘುನಾಥನ್ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಎಂ ಐ ಅರುಣ್ ಅವರ  ವಿಭಾಗೀಯ ಪೀಠ ಇತ್ಯರ್ಥಪಡಿಸಿದೆ.

ಸರ್ಕಾರದ ಪರ ವಕೀಲೆ ನಿಲೋಫರ್‌ ಅಕ್ಬರ್‌ ಅವರು “ಗ್ರಾಹಕರ ಹಕ್ಕುಗಳ ವ್ಯಾಜ್ಯ ಪರಿಹಾರ ವೇದಿಕೆಗಳಲ್ಲಿ ಖಾಲಿ ಇರುವ ಅಧ್ಯಕ್ಷರು ಮತ್ತು ಸದಸ್ಯರ ನೇಮಕ ಸಂಬಂಧ ಹೈಕೋರ್ಟ್ ಹಾಲಿ ನ್ಯಾಯಮೂರ್ತಿ ಅಧ್ಯಕ್ಷತೆಯಲ್ಲಿ ಮೂವರು ಸದಸ್ಯರ ಆಯ್ಕೆ ಸಮಿತಿ ರಚನೆ ಮಾಡಲಾಗಿದ್ದು, ನೇಮಕಾತಿ ಪ್ರಕ್ರಿಯೆ ಪ್ರಾರಂಭವಾಗಿದೆ” ಎಂದು ಪೀಠಕ್ಕೆ ಮೆಮೊ ಸಲ್ಲಿಸಿದರು.

ಇದನ್ನು ದಾಖಲಿಸಿಕೊಂಡ ಪೀಠವು ರಾಜ್ಯ ಸರ್ಕಾರ ಸಮಿತಿ ರಚನೆ ಮಾಡಿರುವುದರಿಂದ ಅರ್ಜಿದಾರರ ಮನವಿ ಪರಿಗಣಿಸಿದಂತಾಗಿದೆ. ಆದಷ್ಟು ಬೇಗ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಸರ್ಕಾರಕ್ಕೆ ನಿರ್ದೇಶಿಸಿ, ಅರ್ಜಿ ಇತ್ಯರ್ಥಪಡಿಸಿತು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಗ್ರಾಹಕರ ಹಕ್ಕುಗಳ ಪರಿಹಾರ ವೇದಿಕೆಯಲ್ಲಿ ಅಧ್ಯಕ್ಷರು ಮತ್ತು ಸದಸ್ಯರ ಸ್ಥಾನ ಖಾಲಿಯಾದಂತಹ ಸಂದರ್ಭದಲ್ಲಿ ಮುಂದಿನ ನೇಮಕಾತಿ ಆಗುವವರೆಗೂ ಹಾಲಿ ಇರುವವರನ್ನೇ ಮುಂದುವರಿಸಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ. ಜೂನ್ ತಿಂಗಳಿನಿಂದ ರಾಜ್ಯ ಗ್ರಾಹಕರ ಹಕ್ಕುಗಳ ವ್ಯಾಜ್ಯ ಪರಿಹಾರ ವೇದಿಕೆಯಲ್ಲಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿಲ್ಲ. ಪ್ರಸ್ತುತ 30 ಹುದ್ದೆಗಳು ಖಾಲಿಯಿದ್ದು, ನಿರ್ದಿಷ್ಟ ಸಮಯದಲ್ಲಿ ಪ್ರಕ್ರಿಯೆ ಪೂರ್ಣಗೊಳಿಸಬೇಕು ಎಂದು ಕೋರಿದ್ದರು.