ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಎಂಟು ವಾರಗಳಲ್ಲಿ ಭರ್ತಿ ಮಾಡಲು ಸುಪ್ರೀಂ ಕೋರ್ಟ್ ಇಂದು ನಿರ್ದೇಶನ ನೀಡಿದೆ.
ಈ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ಸಂಜಯ್ ಕಿಶನ್ ಕೌಲ್ ಮತ್ತು ಹೃಷಿಕೇಶ್ ರಾಯ್ ಅವರಿದ್ದ ಪೀಠ "ಶಾಸನವು ಕಡ್ಡಾಯ ಮಾಡಿರುವಾಗ, ಮಂಜೂರು ಮಾಡುವುದು ಅಥವಾ ಮಾಡದೇ ಇರುವುದು ಗಣನೆಗೆ ಬರುವುದಿಲ್ಲ. ಗಡುವು ವಿಸ್ತರಿಸುವುದಿಲ್ಲ. ಸಮಸ್ಯೆಗಳನ್ನು ಸರಿಪಡಿಸಲು ಸಾಕಷ್ಟು ಸಮಯ ನೀಡಲಾಗಿತ್ತು. ಈಗ ಸಮಯ ನಿಗದಿ ಪಡಿಸಲಾಗುವುದು." ಎಂದು ಹೇಳಿತು.
ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನ್ಯಾಯಾಲಯ ಈ ಕೆಳಗಿನ ನಿರ್ದೇಶನಗಳನ್ನು ನೀಡಿತು:
1. ಗ್ರಾಹಕ ಸಂರಕ್ಷಣಾ ಕಾಯಿದೆಯ ಸೆಕ್ಷನ್ 44ರ ಅಡಿಯಲ್ಲಿ ಕೆಲವು ರಾಜ್ಯಗಳು ನಿಯಮಗಳನ್ನು ಸೂಚಿಸಿಲ್ಲ. ಇಂದಿನಿಂದ ಎರಡು ವಾರಗಳ ಒಳಗೆ ಎಲ್ಲಾ ರಾಜ್ಯ ಕಾರ್ಯದರ್ಶಿಗಳು ನಿಯಮಗಳನ್ನು ನೋಟಿಫೈ ಮಾಡುವಂತೆ ನಾವು ಸೂಚಿಸುತ್ತೇವೆ.
2. ರಾಜ್ಯಗಳು ನಿಯಮಗಳನ್ನು ಸೂಚಿಸಲು ವಿಳಂಬ ಧೋರಣೆ ಅನುಸರಿಸುತ್ತಿವೆ. ಎರಡು ವಾರಗಳಲ್ಲಿ ನಿಯಮಗಳ ಬಗ್ಗೆ ಸೂಚನೆ ಹೊರಡಿಸದಿದ್ದರೆ, ಕೇಂದ್ರ ಸರ್ಕಾರ ಮಾಡಿದ ಮಾದರಿ ನಿಯಮಗಳು ಆಯಾ ಆಯೋಗಗಳಿಗೆ ತಂತಾನೇ ಅನ್ವಯವಾಗುತ್ತವೆ.
3. ಖಾಲಿ ಹುದ್ದೆಗಳು ಸಾಕಷ್ಟು ಸಂಖ್ಯೆಯಲ್ಲಿ ಇರುವ ಹಿನ್ನೆಲೆಯಲ್ಲಿ, ಎರಡು ವಾರಗಳಲ್ಲಿ ನಿಯಮಗಳ ಬಗ್ಗೆ ಸೂಚನೆ ಹೊರಡಿಸದಿದ್ದರೆ, ಅಸ್ತಿತ್ವದಲ್ಲಿರುವ ಮತ್ತು ಸಂಭಾವ್ಯ ಖಾಲಿ ಹುದ್ದೆಗಳಿಗೆ ಜಾಹೀರಾತು ನೀಡುವಂತೆ ನಾವು ನಿರ್ದೇಶಿಸುತ್ತೇವೆ.
4. ಕೆಲವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಆಯ್ಕೆ ಸಮಿತಿಗಳನ್ನು ರಚಿಸಿಲ್ಲ ಎಂದು ತೋರುತ್ತದೆ. ಇಂದಿನಿಂದ ನಾಲ್ಕು ವಾರಗಳಲ್ಲಿ ಇಂತಹ ಸಮಿತಿಗಳನ್ನು ರಚಿಸಲು ರಾಜ್ಯಗಳಿಗೆ ನಿರ್ದೇಶಿಸಲಾಗಿದೆ.
5. ರಾಜ್ಯ ಗ್ರಾಹಕ ವ್ಯಾಜ್ಯ ಪರಿಹಾರ ಆಯೋಗಗಳಲ್ಲಿನ ಎಲ್ಲಾ ಖಾಲಿ ಹುದ್ದೆಗಳನ್ನು ಇಂದಿನಿಂದ ಗರಿಷ್ಠ 8 ವಾರಗಳ ಒಳಗೆ ಎಲ್ಲಾ 30 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಭರ್ತಿ ಮಾಡಬೇಕು.
ಭಾರತದಾದ್ಯಂತ ವಿವಿಧ ಜಿಲ್ಲಾ ಮತ್ತು ರಾಜ್ಯ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗಗಳ ಅಧ್ಯಕ್ಷರು, ಸದಸ್ಯರು ಮತ್ತು ಆಯಾ ಸಿಬ್ಬಂದಿ ನೇಮಕ ಮಾಡುವಲ್ಲಿ ರಾಜ್ಯ ಸರ್ಕಾರಗಳ ನಿಷ್ಕ್ರಿಯತೆಯ ಬಗ್ಗೆ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದ ನ್ಯಾಯಾಲಯ ಈ ನಿರ್ದೇಶನಗಳನ್ನು ನೀಡಿದೆ.
ಗ್ರಾಹಕ ಸಂರಕ್ಷಣಾ ಕಾಯಿದೆಯ ಸೆಕ್ಷನ್ 42 ರ ಪ್ರಕಾರ, ಪ್ರತಿ ರಾಜ್ಯ ಆಯೋಗವು ಒಬ್ಬ ಅಧ್ಯಕ್ಷರು ಮತ್ತು ನಾಲ್ವರಿಗಿಂತ ಕಡಿಮೆಯಿಲ್ಲದಂತೆ ಸದಸ್ಯರನ್ನು ಹೊಂದಿರಬೇಕು ಎಂದು ಕೋರ್ಟ್ ತಿಳಿಸಿದೆ.
"ಇದು ಶಾಸನಬದ್ಧ ಆದೇಶವಾಗಿದ್ದು ಸಂಖ್ಯೆ ನಾಲ್ಕಕ್ಕಿಂತ ಹೆಚ್ಚಿರಬೇಕಾದಾಗ ಅಂತಹ ಸಂಖ್ಯೆಗಳನ್ನು ಮಾತ್ರ ಕೇಂದ್ರದೊಂದಿಗೆ ಸಮಾಲೋಚಿಸಿ ಸೂಚಿಸಲಾಗುತ್ತದೆ. ರಾಜ್ಯವು ನಾಲ್ಕು ಸಂಖ್ಯೆಯನ್ನು ಹೊಂದಿರಬೇಕು ಎಂದು ಭಾವಿಸಿದರೆ, ಅದು ಅಧ್ಯಕ್ಷರ ನೇಮಕಾತಿಯನ್ನು ಹಳಿ ತಪ್ಪಿಸಲು ಕಾರಣವಾಗಿರುವುದಿಲ್ಲ ಮತ್ತು ನಾಲ್ಕು ಸದಸ್ಯರ ನೇಮಕ ಕಡ್ಡಾಯ"ಎಂದು ಪೀಠವು ತನ್ನ ಆದೇಶದಲ್ಲಿ ಹೇಳಿದೆ.
ಮೂಲಸೌಕರ್ಯದ ವಿಷಯದ ಮೇಲೆ, ಹೆಚ್ಚಿನ ಅಫಿಡವಿಟ್‌ಗಳನ್ನು ಕೊನೆಯ ಕ್ಷಣದಲ್ಲಿ ಪ್ರಸ್ತುತಪಡಿಸಲಾಗಿದೆ ಎಂದು ಕೋರ್ಟ್ ಹೇಳಿದೆ.
"ಕೊನೆಯ ಕ್ಷಣದ ಸಲ್ಲಿಕೆಗಳನ್ನು ನಾವು ಈಗ ಗಮನಿಸಲು ಸಿದ್ಧರಿಲ್ಲ. ಈ ಅಂಶಗಳನ್ನೊಳಗೊಂಡ ನವೀಕರಿಸಿದ ಉಲ್ಲೇಖಗಳನ್ನು ಇಂದಿನಿಂದ 10 ದಿನಗಳ ಒಳಗೆ ಅಮಿಕಸ್ ಕ್ಯೂರಿಗೆ ಒದಗಿಸಬೇಕು ಎಂದು ನಾವು ನಿರ್ದೇಶಿಸುತ್ತೇವೆ." ಎಂಬುದಾಗಿ ಪೀಠ ತಿಳಿಸಿದೆ.