Madurai Bench of Madras High Court  Madras High Court website
ಸುದ್ದಿಗಳು

ಕುಟುಂಬದ ಬೆಂಬಲ ಇಲ್ಲದ ವಯಸ್ಕ ವಿಶೇಷ ಚೇತನರಿಗೆ ಪ್ರಭುತ್ವ ಪೋಷಕನಾಗಬೇಕು: ಮದ್ರಾಸ್‌ ಹೈಕೋರ್ಟ್‌

20 ವರ್ಷದ ಮಾನಸಿಕ ಅಸ್ವಸ್ಥ ವ್ಯಕ್ತಿಗೆ ಆಜೀವ ಪರ್ಯಂತ ವಸತಿ ಮತ್ತು ವೈದ್ಯಕೀಯ ಸೇವೆ ಒದಗಿಸುವಂತೆ ನ್ಯಾಯಮೂರ್ತಿ ಜಿ ಆರ್ ಸ್ವಾಮಿನಾಥನ್ ಅವರು ತಮಿಳುನಾಡು ಸರ್ಕಾರಕ್ಕೆ ನಿರ್ದೇಶನ ನೀಡಿದ್ದಾರೆ.

Bar & Bench

ಪ್ರಭುತ್ವ ತನ್ನ ಪೋಷಣೆಯ ಅಧಿಕಾರ ವ್ಯಾಪ್ತಿಯನ್ನು ಕುಟುಂಬದ ಬೆಂಬಲ ಇಲ್ಲದ ಮಾನಸಿಕ ಕಾಯಿಲೆಗಳಿಂದ ಬಳಲುತ್ತಿರುವ ವಯಸ್ಕರಿಗೂ ವಿಸ್ತರಿಸಿ ಅವರನ್ನು ನೋಡಿಕೊಳ್ಳುವ ಕರ್ತವ್ಯ ನಿರ್ವಹಿಸಬೇಕು ಎಂದು ಮದ್ರಾಸ್‌ ಹೈಕೋರ್ಟ್‌ ಈಚೆಗೆ ಹೇಳಿದೆ.

ಪ್ಯಾರೆನ್ಸ್ ಪ್ಯಾಟ್ರಿಯಾ (ರಾಷ್ಟ್ರ ಪೋಷಕರು) ಸಿದ್ಧಾಂತದ ಪ್ರಕಾರ, ಅನಾಥ ಮಕ್ಕಳು, ವಿಕಲಚೇತನರು, ಹಿರಿಯ ನಾಗರಿಕರು ಮುಂತಾದ ತಮ್ಮನ್ನು ತಾವು ನೋಡಿಕೊಳ್ಳಲು ಸಾಧ್ಯವಾಗದ ವ್ಯಕ್ತಿಗಳನ್ನು ಸಲಹುವ ಜವಾಬ್ದಾರಿ ಪ್ರಭುತ್ವದ್ದಾಗಿದೆ.

20 ವರ್ಷದ ಮಾನಸಿಕ ಅಸ್ವಸ್ಥ ವ್ಯಕ್ತಿಗೆ ಆಜೀವ ಪರ್ಯಂತ ವಸತಿ ಮತ್ತು ವೈದ್ಯಕೀಯ ಸೇವೆ ಒದಗಿಸುವಂತೆ ನ್ಯಾಯಮೂರ್ತಿ ಜಿ ಆರ್ ಸ್ವಾಮಿನಾಥನ್ ಅವರು ಜೂನ್ 10ರಂದು ಹೊರಡಿಸಿದ ಆದೇಶದಲ್ಲಿ ತಮಿಳುನಾಡು ಸರ್ಕಾರಕ್ಕೆ ನಿರ್ದೇಶನ ನೀಡಿದ್ದಾರೆ.

 ಮಾನಸಿಕ ಅಸ್ವಸ್ಥ ವ್ಯಕ್ತಿಯ ಪೋಷಕರು (ವೃತ್ತಿಯಿಂದ ದಿನಗೂಲಿ ನೌಕರರು) ಸಲ್ಲಿಸಿದ್ದ ಅರ್ಜಿಯ ವಿಚಾರಣೆ  ನ್ಯಾಯಾಲಯದಲ್ಲಿ ನಡೆಯಿತು.. ತಮ್ಮ ಮಗನನ್ನು ನೋಡಿಕೊಳ್ಳಲು ಆರ್ಥಿಕ ಸಂಪನ್ಮೂಲವಾಗಲೀ ಅಥವಾ ಭಾವನಾತ್ಮಕ ಸಾಮರ್ಥ್ಯವಾಗಲೀ ಇಲ್ಲ ಎಂದು ಅರ್ಜಿದಾರರು ನ್ಯಾಯಾಲಯಕ್ಕೆ ತಿಳಿಸಿದ್ದರು.

ವಿಕಲಚೇತನರ ಹಕ್ಕುಗಳ ಕಾಯಿದೆ- 2016ರ  ಪ್ರಕಾರ, ತಂದೆ- ತಾಯಿ, ವಿಸ್ತೃತ ಕುಟುಂಬ ಅಥವಾ ಪೋಷಕರನ್ನು ಹೊಂದಿರದ ವಿಕಲಾಂಗ ಮಕ್ಕಳನ್ನು ನೋಡಿಕೊಳ್ಳುವುದು ಪ್ರಭುತ್ವ ಬದ್ಧವಾಗಿರಬೇಕು ಎಂದು ವಿಕಲಚೇತನರ ಹಕ್ಕುಗಳ ಕಾಯಿದೆ- 2016 ಹೇಳುತ್ತದೆ ಎಂಬುದಾಗಿ ನ್ಯಾಯಾಲಯ ತಿಳಿಸಿದೆ.

ಆ ಸೆಕ್ಷನ್ ಅನ್ನು ಕುಟುಂಬದ ಬೆಂಬಲವಿಲ್ಲದ ವಿಕಲಾಂಗ ವಯಸ್ಕರಿಗೂ ವಿಸ್ತರಿಸಬಹುದು ಎಂದು ನ್ಯಾ. ಸ್ವಾಮಿನಾಥನ್ ಹೇಳಿದ್ದಾರೆ.

ಪ್ರಸ್ತುತ ಪ್ರಕರಣದಲ್ಲಿ, ತಮ್ಮ ವಯಸ್ಕ ಮಗನನ್ನು ಬೆಳೆಸುವ ಜವಾಬ್ದಾರಿಯನ್ನು ಪ್ರಭುತ್ವ ವಹಿಸಿಕೊಳ್ಳಬೇಕು ಎಂದು ಪೋಷಕರು ಬಯಸುತ್ತಾರೆ ಎಂಬುದನ್ನು ನ್ಯಾಯಾಲಯದ ಗಮನಕ್ಕೆ ತರಲಾಯಿತು.

ಅಂಗವಿಕಲರ ಹಕ್ಕುಗಳ ಕಾಯಿದೆ- 2017ರ ಮಾನಸಿಕ ಆರೋಗ್ಯ ಕಾಯಿದೆ ಹಾಗೂ ಸ್ವಲೀನತೆ, ಸೆರೆಬ್ರಲ್ ಪಾಲ್ಸಿ, ಮಾನಸಿಕ ಕುಂಠಿತತೆ ಮತ್ತು ಬಹು ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳ ಕಲ್ಯಾಣಕ್ಕಾಗಿ ರಾಷ್ಟ್ರೀಯ ಟ್ರಸ್ಟ್ ಕಾಯಿದೆ- 1999, ಇವೆಲ್ಲವೂ ಪ್ರಭುತ್ವಕ್ಕೆ ಕೆಲ ಹೊಣೆಗಾರಿಕೆ ವಿಧಿಸುತ್ತವೆ. ಈ ಹಿನ್ನೆಲೆಯಲ್ಲಿ ಅರ್ಜಿದಾರರ ಮನವಿಯನ್ನು ಪುರಸ್ಕರಿಸಬಹುದು ಎಂದು ನ್ಯಾ. ಸ್ವಾಮಿನಾಥನ್‌ ತಿಳಿಸಿದರು.

 “ಅರ್ಜಿದಾರರು ತಮ್ಮ ಮಗನ ಪೋಷಣೆಯ ಜವಾಬ್ದಾರಿಯನ್ನು ಪ್ರಭುತ್ವ ವಹಿಸಿಕೊಳ್ಳಬೇಕೆಂದು ಬಯಸುತ್ತಾರೆ. ಇಂತಹ ಪ್ರಕರಣಗಳಲ್ಲಿ ಪ್ರಭುತ್ವಕ್ಕೆ ಹೊಣೆಗಾರಿಕೆ ನೀಡಬಹುದೇ ಎಂಬುದು ಪರಿಗಣಿಸಬೇಕಾದ ಪ್ರಮುಖ ಪ್ರಶ್ನೆಯಾಗಿದೆ. ನನ್ನ ಉತ್ತರ "ಹೌದು". ಕೌಟುಂಬಿಕ ಬೆಂಬಲವಿಲ್ಲದ ಮಾನಸಿಕ ವಿಕಲಚೇತನರ ವಿಷಯದಲ್ಲಿ ಪ್ರಭುತ್ವ ತನ್ನ ಪೋಷಣೆಯ ಅಧಿಕಾರ ವ್ಯಾಪ್ತಿ ಚಲಾಯಿಸಬೇಕು” ಎಂದು ನ್ಯಾ. ಸ್ವಾಮಿನಾಥನ್ ಹೇಳಿದರು.

ದೈಹಿಕ ವಿಕಲಚೇತನರು ಹಾಗೂ ಮಾನಸಿಕ ಆರೋಗ್ಯದ ಕಾಯಿಲೆ ಇರುವ ವ್ಯಕ್ತಿಗಳಿಗೆ ಸಾಕಷ್ಟು ಮೂಲಸೌಕರ್ಯ ಸೌಲಭ್ಯಗಳು ಮತ್ತು ವೈದ್ಯಕೀಯ ಆರೈಕೆಯನ್ನು ಒದಗಿಸುವಂತೆ ತಮಿಳುನಾಡು ಸರ್ಕಾರ ಮತ್ತು ಕೇಂದ್ರ ಸರ್ಕಾರ ಎರಡಕ್ಕೂ ನ್ಯಾಯಾಲಯ ನಿರ್ದೇಶನಗಳನ್ನು ನೀಡಿತು.