Vidhana Soudha
Vidhana Soudha  
ಸುದ್ದಿಗಳು

ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ ಹಣ ದುರ್ಬಳಕೆ: ಸಿಬಿಐ ತನಿಖೆಗೆ ಒಪ್ಪಿಸಿದ ರಾಜ್ಯ ಸರ್ಕಾರ

Bar & Bench

ಬೆಂಗಳೂರಿನ ಶ್ರೀಗುರು ರಾಘವೇಂದ್ರ ಸಹಕಾರಿ ಬ್ಯಾಂಕ್, ವಶಿಷ್ಠ ಕ್ರೆಡಿಟ್‌ ಸೌಹಾರ್ದ ಸಹಕಾರ ಲಿಮಿಟೆಡ್‌, ಗುರು ಸಾರ್ವಭೌಮ ಸೌಹಾರ್ದ ಕ್ರೆಡಿಟ್‌ ಸಹಕಾರ ಬ್ಯಾಂಕ್‌ನಲ್ಲಿ ನಡೆದಿದ್ದ ಬಹುಕೋಟಿ ಹಗರಣವನ್ನು ರಾಜ್ಯ ಸರ್ಕಾರವು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ವಹಿಸಿ ಶನಿವಾರ ಆದೇಶಿಸಿದೆ.

ಹಗರಣದ ಸಂಬಂಧ ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ಠೇವಣಿದಾರರ ಸಂಘವು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು, ಪ್ರಕರಣವು ವಿಚಾರಣಾ ಹಂತದಲ್ಲಿದೆ. ಗುರು ರಾಘವೇಂದ್ರ ಸಹಕಾರ ಬ್ಯಾಂಕ್ ನಿಯಮಿತದಿಂದ ಕೋಟ್ಯಂತರ ರೂಪಾಯಿ ಸಾಲ ಪಡೆದು ಮರು ಪಾವತಿಸದ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ಚಲನಚಿತ್ರ ನಿರ್ಮಾಪಕ ಹಾಗೂ ಉದ್ಯಮಿ ಜಿ ರಘುನಾಥ್ ಅವರಿಗೆ ಹೈಕೋರ್ಟ್‌ ಜಾಮೀನು ನಿರಾಕರಿಸಿತ್ತು. ಬ್ಯಾಂಕ್‌ನ ಆಡಳಿತ ಮಂಡಳಿಯ ಹಲವರು ಬಂಧನಕ್ಕೆ ಒಳಗಾಗಿದ್ದು, ಪ್ರಕರಣಗಳು ವಿವಿಧ ನ್ಯಾಯಾಲಯಗಳಲ್ಲಿ ವಿಚಾರಣಾ ಹಂತದಲ್ಲಿವೆ.

ಈ ಮಧ್ಯೆ, ದೆಹಲಿ ವಿಶೇಷ ಪೊಲೀಸ್‌ ಸ್ಥಾಪನಾ ಕಾಯಿದೆ ಸೆಕ್ಷನ್‌ 6ರ ಅಡಿ ತನಿಖೆ ನಡೆಸಲು ಸಿಬಿಐಗೆ ರಾಜ್ಯ ಸರ್ಕಾರವು ಅನುಮತಿಸಿದೆ. ಬೆಂಗಳೂರಿನ ಶ್ರೀಗುರು ರಾಘವೇಂದ್ರ ಸಹಕಾರಿ ಬ್ಯಾಂಕ್, ವಶಿಷ್ಠ ಕ್ರೆಡಿಟ್‌ ಸೌಹಾರ್ದ ಸಹಕಾರ ಲಿಮಿಟೆಡ್‌, ಗುರು ಸಾರ್ವಭೌಮ ಸೌಹಾರ್ದ ಕ್ರೆಡಿಟ್‌ ಸಹಕಾರ ಬ್ಯಾಂಕ್‌ನಲ್ಲಿ ಗುರುತು ಪತ್ತೆ ಮಾಡಿ, ತನಿಖೆ ನಡೆಸಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ.

ಸಂಬಂಧಿತ ಇಲಾಖೆಯ ಅಧಿಕಾರಿಗಳು ದತ್ತಾಂಶ/ಮಾಹಿತಿ/ದಾಖಲೆಗಳು ಅಗತ್ಯ ಮಾನವ ಸಂಪನ್ಮೂಲವನ್ನು ಸಿಬಿಐಗೆ ನೀಡಬೇಕು ಎಂದು ಆದೇಶದಲ್ಲಿ ವಿವರಿಸಲಾಗಿದೆ.  

ಬೆಂಗಳೂರಿನ ಶ್ರೀ ಗುರು ರಾಘವೇಂದ್ರ ಸಹಕಾರ ಬ್ಯಾಂಕ್‌ನಲ್ಲಿ 44 ಸಾವಿರ ಹಾಗೂ ಗುರು ಸಾರ್ವಭೌಮ ಸೌಹಾರ್ದ ಕ್ರೆಡಿಟ್ ಕೋ-ಆಪರೇಟಿವ್ ಲಿಮಿಟೆಡ್‌ನಲ್ಲಿ 3,300 ಠೇವಣಿದಾರ ಸದಸ್ಯರಿದ್ದು, ಒಟ್ಟು 253 ಕೋಟಿ ರೂಪಾಯಿ ಠೇವಣಿ ಹಣ ಇತ್ತು. ಯಾವುದೇ ಅಡಮಾನ ಅಥವಾ ಖಾತರಿ ಇಲ್ಲದೇ ಅನುಮಾನಾಸ್ಪದ ವ್ಯಕ್ತಿಗಳು ಮತ್ತು ನಕಲಿ ಖಾತೆದಾರರಿಗೆ 1,650 ಕೋಟಿ ರೂಪಾಯಿ ಸಾಲ ನೀಡಲಾಗಿದೆ. ಇದರಿಂದಾಗಿ ಅರ್ಹ ಠೇವಣಿದಾರರು ತೊಂದರೆ ಅನುಭವಿಸುವಂತಾಗಿದೆ. ಹಗರಣದಲ್ಲಿ ಬ್ಯಾಂಕ್ ಮತ್ತು ಕ್ರೆಡಿಟ್ ಸೂಸೈಟಿಯ ಪದಾಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಆರೋಪಿಸಲಾಗಿತ್ತು.

ಈ ಸಂಬಂಧ ಎಕ್ಸ್‌ನಲ್ಲಿ ಟ್ವೀಟ್‌ ಮಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು “ಸಾವಿರಾರು ಮಂದಿ ಠೇವಣಿದಾರರು ತಮ್ಮ ನಿವೃತ್ತಿ ಜೀವನಕ್ಕೆ ಆಧಾರವಾಗಲೆಂದು, ಮಕ್ಕಳ ಮದುವೆ, ಸ್ವಂತ ಮನೆ ಖರೀದಿ ಮುಂತಾದ ಕನಸುಗಳನ್ನು ಇಟ್ಟುಕೊಂಡು ತಮ್ಮ ಜೀವಮಾನದ ಉಳಿತಾಯವನ್ನೆಲ್ಲ ಬ್ಯಾಂಕಿನಲ್ಲಿ ಹೂಡಿಕೆ ಮಾಡಿದ್ದರು. ಬ್ಯಾಂಕಿನವರ ವಂಚನೆಯಿಂದಾಗಿ ಅವರೆಲ್ಲರೂ ಮುಂದಿನ ತಮ್ಮ ಜೀವನದ ಬಗ್ಗೆ ದಿಕ್ಕು ತೋಚದಂತಾಗಿದ್ದಾರೆ” ಎಂದು ತಿಳಿಸಿದ್ದಾರೆ.

“ವಂಚನೆಗೊಳಗಾದ ಠೇವಣಿದಾರರಿಗೆ ನ್ಯಾಯ ದೊರಕಿಸಿಕೊಡಬೇಕೆಂದು ಈ ಹಿಂದೆ ಪ್ರತಿಪಕ್ಷ ನಾಯಕನಾಗಿದ್ದ ಸಂದರ್ಭದಲ್ಲಿಯೂ ಸದನದ ಒಳಗೆ ಮತ್ತು ಹೊರಗೆ ಧ್ವನಿಯೆತ್ತಿದ್ದೆ, ಪ್ರತಿಭಟನೆಗಳಲ್ಲಿ ಪಾಲ್ಗೊಂಡಿದ್ದೆ. ಆಗಲೂ ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂಬುದು ನಮ್ಮ ಒತ್ತಾಯವಾಗಿತ್ತು. ಠೇವಣಿ ಹಣ ಕಳೆದುಕೊಂಡವರ ಹತಾಶೆ, ಸಂಕಟವನ್ನು ಕಣ್ಣಾರೆ ಕಂಡಿದ್ದೇನೆ. ಈ ಕಾರಣಕ್ಕಾಗಿ ಸೂಕ್ತ ತನಿಖೆ ನಡೆದು, ಎಲ್ಲ ಸಂತ್ರಸ್ತರಿಗೂ ನ್ಯಾಯ ಸಿಗಲಿ ಎಂಬ ಉದ್ದೇಶದಿಂದ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸುತ್ತಿದ್ದೇನೆ” ಎಂದು ಬರೆದುಕೊಂಡಿದ್ದಾರೆ.