DIMHANS, MRI Machines and Karnataka HC 
ಸುದ್ದಿಗಳು

ಡಿಮ್ಹಾನ್ಸ್‌ ಅನ್ನು ಉನ್ನತೀಕರಿಸಿದ ಮನೋವೈದ್ಯಕೀಯ ಚಿಕಿತ್ಸಾ ಕೇಂದ್ರವಾಗಿಸಲು ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ

ಡಿಮ್ಹಾನ್ಸ್‌ ಅನ್ನು ಉನ್ನತೀಕರಿಸಿದ ಮನೋವೈದ್ಯಕೀಯ ಚಿಕಿತ್ಸಾ ಕೇಂದ್ರ ಎಂದು ಘೋಷಿಸಬೇಕು ಮತ್ತು ಈ ಯೋಜನೆಗೆ ರೂ. 75 ಕೋಟಿ ಮೀಸಲಿಡಬೇಕು ಎಂಬುದನ್ನು ಪೀಠವು ಗಮನಿಸಿತು.

Bar & Bench

ಧಾರವಾಡ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆಯನ್ನು (ಡಿಮ್ಹಾನ್ಸ್‌) ಆದಷ್ಟು ಬೇಗ ಮನೋವೈದ್ಯಕೀಯ ಚಿಕಿತ್ಸಾ ಕೇಂದ್ರವನ್ನಾಗಿ ಉನ್ನತೀಕರಿಸುವಂತೆ ಬುಧವಾರ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ನಿರ್ದೇಶಿಸಿದೆ.

ಮಾನಸಿಕ ಶುಶ್ರೂಷೆ ಕಾಯಿದೆ 2017ರ ನಿಬಂಧನೆಗಳನ್ನು ಜಾರಿಗೊಳಿಸುವುದಕ್ಕೆ ಸಂಬಂಧಿಸಿದಂತೆ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿದ್ದ ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

ಕಳೆದ ವಿಚಾರಣೆಯ ಸಂದರ್ಭದಲ್ಲಿ ಪೀಠವು ನೀಡಿದ್ದ ನಿರ್ದೇಶನಕ್ಕೆ ಸಂಬಂಧಿಸಿದಂತೆ ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ನವೀನ್‌ ರಾಜ್‌ ಸಿಂಗ್‌ ಅವರ ಅಫಿಡವಿಟ್‌ ಅನ್ನು ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಅವರು ನ್ಯಾಯಾಲಯಕ್ಕೆ ಸಲ್ಲಿಸಿದರು.

ಡಿಮ್ಹಾನ್ಸ್‌ಗೆ ಎಂಆರ್‌ಐ ಯಂತ್ರಗಳನ್ನು ಪೂರೈಸಲು ಮತ್ತು ಮೂಲಸೌಲಭ್ಯ ಕಲ್ಪಿಸಲು ತಡವಾಗಿರುವುದಕ್ಕೆ ಸಂಬಂಧಿಸಿದಂತೆ ಅಫಿಡವಿಟ್‌ನಲ್ಲಿ ವಿವರಿಸಲಾಗಿದೆ. ಇದನ್ನು ಪರಿಶೀಲಿಸಿದ ಪೀಠವು ವಿವರಣೆಯು ತೃಪ್ತಿದಾಯಕವಾಗಿಲ್ಲ ಎಂದಿತು. ಇದಕ್ಕೆ ಎಎಜಿ ಅವರು ಎಂಆರ್‌ಐ ಯಂತ್ರಗಳನ್ನು ವಿದೇಶದಿಂದ ಆಮದು ಮಾಡಿಕೊಳ್ಳಬೇಕಿದೆ. ಅಲ್ಲಿಂದ ತರಿಸಿ ಅಳವಡಿಸುವುದಕ್ಕೆ ಸಂಬಂಧಿಸಿದಂತೆ ಶೀಘ್ರದಲ್ಲೇ ಎಲ್ಲಾ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದರು.

ಡಿಮ್ಹಾನ್ಸ್‌ ಅನ್ನು ಉನ್ನತೀಕರಿಸಿದ ಮನೋವೈದ್ಯಕೀಯ ಚಿಕಿತ್ಸಾ ಕೇಂದ್ರ ಎಂದು ಘೋಷಿಸಬೇಕು ಮತ್ತು ಈ ಯೋಜನೆಗೆ ರೂ. 75 ಕೋಟಿ ಮೀಸಲಿಡಬೇಕು ಎಂಬುದನ್ನು ಪೀಠವು ಗಮನಿಸಿತು.

“ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ತಮ್ಮ ಅಫಿಡವಿಟ್‌ನಲ್ಲಿ ಉಲ್ಲೇಖಿಸಿರುವಂತೆ 2022ರ ಮಾರ್ಚ್‌ 1ರ ಒಳಗೆ ಎಂಆರ್‌ಐ ಯಂತ್ರಗಳನ್ನು ಅಳವಡಿಸಿ, ಅವು ಕಾರ್ಯನಿರ್ವಹಿಸುವಂತೆ ಮಾಡಬೇಕು. ಧಾರವಾಡದಲ್ಲಿರುವ ಡಿಮ್ಹಾನ್ಸ್‌ ಅನ್ನು ಉನ್ನತೀಕರಿಸಿದ ಮನೋವೈದ್ಯಕೀಯ ಚಿಕಿತ್ಸಾ ಕೇಂದ್ರ ಎಂದು ಘೋಷಿಸಲಾಗುವುದು ಎಂಬುದನ್ನು ಗಮನಿಸಲಾಗಿದ್ದು, ಈ ಸಂಬಂಧ ಪ್ರಸ್ತಾವವನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಉನ್ನತೀಕರಿಸಲು ಸರ್ಕಾರವೇ ಘೋಷಣೆ ಮಾಡಿರುವುದರಿಂದ ಆ ಆಸ್ಪತ್ರೆಯನ್ನು ಶೀಘ್ರದಲ್ಲೇ ಉನ್ನತೀಕರಿಸಿದ ಮನೋವೈದ್ಯಕೀಯ ಕೇಂದ್ರವನ್ನಾಗಿಸಬೇಕು” ಎಂದು ಪೀಠ ಹೇಳಿದ್ದು, ವಿಚಾರಣೆಯನ್ನು ಮುಂದಿನ ವರ್ಷದ ಮಾರ್ಚ್‌ಗೆ ಮುಂದೂಡಿದೆ.