Vidhana Soudha  
ಸುದ್ದಿಗಳು

ಖಾಸಗಿ ವಲಯದ ಉದ್ದಿಮೆಗಳಲ್ಲಿ ಕನ್ನಡಿಗರಿಗೆ ಮೀಸಲಾತಿ ಕಲ್ಪಿಸುವ ವಿಧೇಯಕವನ್ನು ತಾತ್ಕಾಲಿಕವಾಗಿ ತಡೆ ಹಿಡಿದ ಸರ್ಕಾರ

ಕರ್ನಾಟಕದ ಕೈಗಾರಿಕೆಗಳು, ಫ್ಯಾಕ್ಟರಿ ಮತ್ತು ಇತರೆ ಸಂಸ್ಥೆಗಳು ಮ್ಯಾನೇಜ್‌ಮೆಂಟ್‌ ವಿಭಾಗದಲ್ಲಿ ಶೇ 50ರಷ್ಟು ಮತ್ತು ಮ್ಯಾನೇಜ್‌ಮೆಂಟೇತರ ವಿಭಾಗದಲ್ಲಿ ಶೇ.75ರಷ್ಟು ಮಂದಿಯನ್ನು ನೇಮಕ ಮಾಡಬೇಕು ಎಂಬ ಮಸೂದೆಗೆ ಒಪ್ಪಿಗೆ ನೀಡಲಾಗಿತ್ತು.

Bar & Bench

ಕನ್ನಡಿಗರಿಗೆ ಖಾಸಗಿ ವಲಯದ ಸಂಸ್ಥೆಗಳು, ಕೈಗಾರಿಕೆಗಳು ಹಾಗೂ ಉದ್ದಿಮೆಗಳಲ್ಲಿ ಮೀಸಲಾತಿ ಕಲ್ಪಿಸುವ ಸಂಬಂಧ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದ್ದ ವಿಧೇಯಕವನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ ಎಂದು ಮುಖ್ಯಮಂತ್ರಿ ಕಚೇರಿ ಬುಧವಾರ ತಿಳಿಸಿದೆ.

ಮುಂದಿನ ಸಂಪುಟ ಸಭೆಯಲ್ಲಿ ಈ ಬಗ್ಗೆ ಸುದೀರ್ಘವಾಗಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಕಚೇರಿ ತಿಳಿಸಿದೆ.

ಕರ್ನಾಟಕದ ಕೈಗಾರಿಕೆಗಳು, ಫ್ಯಾಕ್ಟರಿ ಮತ್ತು ಇತರೆ ಸಂಸ್ಥೆಗಳು ಮ್ಯಾನೇಜ್‌ಮೆಂಟ್‌ ವಿಭಾಗದಲ್ಲಿ ಶೇ 50ರಷ್ಟು ಮತ್ತು ಮ್ಯಾನೇಜ್‌ಮೆಂಟೇತರ ವಿಭಾಗದಲ್ಲಿ ಶೇ.75ರಷ್ಟು ಮಂದಿಯನ್ನು ನೇಮಕ ಮಾಡಬೇಕು ಎಂಬ ಮಸೂದೆಯನ್ನು ವಿಧಾನ ಮಂಡಲ ಅಧಿವೇಶದಲ್ಲಿ ಜಾರಿಗೊಳಿಸಲು ಸಚಿವ ಸಂಪುಟವು ಈಚೆಗೆ ಒಪ್ಪಿಗೆ ನೀಡಿತ್ತು.

10ನೇ ತರಗತಿಯವರೆಗೆ ಕನ್ನಡ ಅಧ್ಯಯನ ಮಾಡದಿರುವ ಅಭ್ಯರ್ಥಿಗಳು ನೋಡಲ್‌ ಏಜೆನ್ಸಿ ಉಲ್ಲೇಖಿಸಿರುವ ಕನ್ನಡ ಪ್ರಾವೀಣ್ಯತೆ (ಪ್ರೊಫೆಶಿಯನ್ಸಿ) ಪರೀಕ್ಷೆ ಪಾಸು ಮಾಡಬೇಕು ಎಂದು ವಿಧೇಯಕದಲ್ಲಿ ಹೇಳಲಾಗಿತ್ತು.

ಅಗತ್ಯವಾದಷ್ಟು ಸ್ಥಳೀಯ ಅಭ್ಯರ್ಥಿಗಳು ಸಿಗದಿದ್ದರೆ ಕೈಗಾರಿಕೆ, ಫ್ಯಾಕ್ಟರಿ ಮತ್ತು ಇತರೆ ಸಂಸ್ಥೆಗಳು ಈ ಕಾಯಿದೆಯಲ್ಲಿನ ನಿಬಂಧನೆಯಲ್ಲಿ ವಿನಾಯಿತಿ ಕೋರಬಹುದು. ತನಿಖೆಯ ನಂತರ ಸರ್ಕಾರವು ಸೂಕ್ತ ಆದೇಶ ಮಾಡಬಹುದಾಗಿದ್ದು, ಸರ್ಕಾರ ಹೊರಡಿಸುವ ಆದೇಶ ಅಂತಿಮವಾಗಿರುತ್ತದೆ.

ಮ್ಯಾನೇಜ್‌ಮೆಂಟ್‌ ವಿಭಾಗದಲ್ಲಿ ವಿನಾಯಿತಿಯು ಶೇ.75ಕ್ಕಿಂತ ಕಡಿಮೆ ಇರಬಾರದು. ಮ್ಯಾನೇಜ್‌ಮೆಂಟೇತರ ವಿಭಾಗದಲ್ಲಿ ಶೇ. 50ಕ್ಕಿಂತ ಕಡಿಮೆ ಇರಬಾರದು.

ಪ್ರತಿಯೊಂದು ಕಾರ್ಖಾನೆ, ಫ್ಯಾಕ್ಟರಿ ಅಥವಾ ಸಂಸ್ಥೆಯು ಅನುಪಾಲನಾ ವರದಿಯನ್ನು ನೋಡಲ್‌ ಏಜೆನ್ಸಿಗೆ ತಿಳಿಸಬೇಕು.