Darshan and Karnataka HC 
ಸುದ್ದಿಗಳು

ದರ್ಶನ್‌ ಮನೆಯೂಟ ಕೋರಿಕೆ ತಿರಸ್ಕೃತ: ಹೈಕೋರ್ಟ್‌ಗೆ ಸರ್ಕಾರದ ಮಾಹಿತಿ

Bar & Bench

ಮನೆಯೂಟ ಪೂರೈಕೆಗೆ ಅನುಮತಿಸುವಂತೆ ನಟ ದರ್ಶನ್‌ ಸಲ್ಲಿಸಿದ್ದ ಮನವಿಯನ್ನು ತಿರಸ್ಕರಿಸಲಾಗಿದೆ ಎಂದು ರಾಜ್ಯ ಸರ್ಕಾರ ಕರ್ನಾಟಕ ಹೈಕೋರ್ಟ್‌ಗೆ ಮಂಗಳವಾರ ತಿಳಿಸಿದೆ. ಈ ಹಿನ್ನೆಲೆಯಲ್ಲಿ ಸರ್ಕಾರದ ತಿರಸ್ಕಾರ ಆದೇಶ ಪರಿಶೀಲಿಸಿ ವಾದಿಸಲು ದರ್ಶನ್‌ ಪರ ವಕೀಲರಿಗೆ ನ್ಯಾಯಾಲಯ ಅನುಮತಿಸಿದೆ.

ಮನೆ ಊಟ ಪಡೆಯಲು ನಿರ್ದೇಶನ ಕೋರಿದ್ದ ಅರ್ಜಿಯನ್ನು ವಿಚಾರಣಾಧೀನ ನ್ಯಾಯಾಲಯ ತಿರಸ್ಕರಿಸಿದ್ದನ್ನು ಪ್ರಶ್ನಿಸಿ ನಟ ದರ್ಶನ್‌ ತೂಗುದೀಪ ಶ್ರೀನಿವಾಸ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ವಿಚಾರಣೆಗೆ ಹಾಜರಾಗಿದ್ದ ವಿಶೇಷ ಸರ್ಕಾರಿ ಅಭಿಯೋಜಕ-1 ಬಿ ಎ ಬೆಳ್ಳಿಯಪ್ಪ ಅವರು “ದರ್ಶನ್‌ ಮನವಿಯನ್ನು ಆಗಸ್ಟ್‌ 14ರಂದು ತಿರಸ್ಕರಿಸಲಾಗಿದೆ. ಈ ವಿಚಾರವನ್ನು ಅಂದೇ ಅರ್ಜಿದಾರರಿಗೆ ತಿಳಿಸಲಾಗಿದೆ” ಎಂದರು.

ಆಗ ದರ್ಶನ್‌ ಪರ ವಕೀಲೆ ಸಂಜೀವಿನಿ ನಾವದಗಿ ಅವರು “ನಮ್ಮ ಕೋರಿಕೆಯನ್ನು ತಿರಸ್ಕರಿಸಿರುವ ಆದೇಶವನ್ನು ಪರಿಶೀಲಿಸಿಲ್ಲ. ಅದನ್ನು ನೋಡಿ ಮೆರಿಟ್‌ ಮೇಲೆ ವಾದಿಸಲಾಗುವುದು. ನ್ಯಾಯಾಲಯ ಸಮಯ ನಿಗದಿಪಡಿಸಬಹುದು” ಎಂದರು.

ಇದಕ್ಕೆ ಒಪ್ಪಿದ ಪೀಠವು “ಎಸ್‌ಪಿಪಿ ಅವರು ದರ್ಶನ್‌ ಸಲ್ಲಿಸಿರುವ ಮನವಿಯು ಪರಿಗಣನೆಯಲ್ಲಿದೆ ಎಂದಿದ್ದರಿಂದ ಅರ್ಜಿಯನ್ನು ಇಂದಿಗೆ ವಿಚಾರಣೆಗೆ ಮುಂದೂಡಲಾಗಿತ್ತು. ಈಗ ಆಗಸ್ಟ್‌ 14ರಂದು ದರ್ಶನ್‌ ಅವರ ಮನವಿಯನ್ನು ತಿರಸ್ಕರಿಸಲಾಗಿದೆ ಎಂದು ಎಸ್‌ಪಿಪಿ ತಿಳಿಸಿದ್ದಾರೆ. ಅಂದೇ ಅದನ್ನು ಅರ್ಜಿದಾರರಿಗೆ ತಿಳಿಸಲಾಗಿದೆ ಎಂದೂ ಹೇಳಿದ್ದಾರೆ. ದರ್ಶನ್‌ ಪರ ವಕೀಲೆ ಸಂಜೀವಿನಿ ಅವರು ವಾದಿಸಲು ಸಮಯ ಕೋರಿದ್ದಾರೆ. ಈ ಹಿನ್ನೆಲೆಯಲ್ಲಿ ಅರ್ಜಿಯ ವಿಚಾರಣೆಯನ್ನು ಸೆಪ್ಟೆಂಬರ್‌ 5ಕ್ಕೆ ಮುಂದೂಡಲಾಗಿದೆ” ಎಂದು ಆದೇಶಿಸಿತು.

ಈ ನಡುವೆ, ಬೆಂಗಳೂರಿನ ಫಾಜಿಲ್‌ ಖಾನ್‌ ಎಂಬ ವಿಚಾರಣಾಧೀನ ಕೈದಿಯು ಮನೆಯೂಟ ಪೂರೈಕೆಗೆ ಅನುಮತಿ ಕೋರಿರುವ ಅರ್ಜಿಯನ್ನು ವಿಚಾರಣೆಗೆ ಉಲ್ಲೇಖಿಸಲಾಯಿತು.

ಫಾಜಿಲ್‌ ಪರ ವಕೀಲರು “ಮೊಬೈಲ್‌, ಗಾಂಜಾ, ಬುಲೆಟ್ಸ್‌ ಮತ್ತು ಗನ್‌ಗಳನ್ನು ಜೈಲಿನಲ್ಲಿ ಪೂರೈಸಲಾಗುತ್ತಿದೆ. ಸುಪಾರಿ ಸಹ ನೀಡಲಾಗುತ್ತಿದೆ” ಎಂದು ಆಕ್ಷೇಪಿಸಿದರು.

ಆಗ ಪೀಠವು “ನೀವು ಊಟದ ಮಿತಿಯನ್ನು ವಿಸ್ತರಿಸುತ್ತಿದ್ದೀರಿ. ಇದು ಜೈಲಿನಲ್ಲಿ ಪರಂಪರಾಗತವಾದ ಸಮಸ್ಯೆಯಾಗಿದೆ. ನಿಮಗೆ ಆಹಾರ ಕೊಡುತ್ತಿಲ್ಲ. ಆದರೆ, ನಿಷೇಧಿತ ವಸ್ತುಗಳ ಪೂರೈಕೆಯಾಗುತ್ತಿದೆ ಎಂಬುದು ನಿಮ್ಮ ಆರೋಪ. ಬೇರೆಯವರಿಗೆ ಬಿರಿಯಾನಿ ಪೂರೈಸಲಾಗುತ್ತಿದೆ. ನಮಗೆ ಇಲ್ಲ ಎಂಬುದು ಅವರ ಆರೋಪ” ಎಂದಿತು.

ಮುಂದುವರೆದು ಪೀಠವು “ಕೈದಿಗಳಿಗೆ ಅಗತ್ಯವಾದಷ್ಟು ಊಟ ಪೂರೈಸಲಾಗುತ್ತಿಲ್ಲ ಎಂದು ವರ್ಷದಿಂದ ಅರ್ಜಿದಾರರು ಆಪಾದಿಸುತ್ತಿದ್ದಾರೆ. ಇದನ್ನೂ ಪರಿಶೀಲಿಸಬೇಕಿದೆ. ಕೈದಿ ಎಂದರೆ ಎಲ್ಲರೂ ಒಂದೇ. ಆಹಾರ ಎಲ್ಲರ ಅವಶ್ಯಕತೆ” ಎಂದಿತು. ಅಲ್ಲದೇ, ಪ್ರಕರಣಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್‌ 5ರಂದು ವಾದಿಸುವಂತೆ ಸೂಚಿಸಿ, ವಿಚಾರಣೆ ಮುಂದೂಡಿತು.