ವಿವಾದಿತ ವಕ್ಫ್ ತಿದ್ದುಪಡಿ ಕಾಯಿದೆ ವಿರೋಧಿಸಿ ಮುಸ್ಲಿಮರು ಪ್ರತಿಭಟನೆ ನಡೆಸಲು ಅನುಮತಿಸುವುದಕ್ಕೂ ಮುನ್ನ ಪ್ರಕರಣವು ಸುಪ್ರೀಂ ಕೋರ್ಟ್ ಪರಿಗಣನೆಯಲ್ಲಿದೆ ಎಂಬುದನ್ನು ರಾಜ್ಯ ಸರ್ಕಾರವು ಗಮನದಲ್ಲಿಟ್ಟುಕೊಳ್ಳಬೇಕು ಎಂದು ಕರ್ನಾಟಕ ಹೈಕೋರ್ಟ್ ಗುರುವಾರ ಆದೇಶಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಫಿರಂಗಿಪೇಟೆಯ ಎ ರಾಜೇಶ್ ಅವರು ಮಂಗಳೂರಿನ ರಾಷ್ಟ್ರೀಯ ಹೆದ್ದಾರಿ 72ರಲ್ಲಿ ಬರುವ ಪಡೀಲ್‌ನಿಂದ ಬಿ ಸಿ ರೋಡ್ ರಸ್ತೆಯನ್ನು ಏಪ್ರಿಲ್ 18ರಂದು ಮಧ್ಯಾಹ್ನ 12ರಿಂದ ರಾತ್ರಿ 9ರವರೆಗೆ ನಿರ್ಬಂಧಿಸಿ ಪೊಲೀಸ್ ಆಯುಕ್ತರು ಹೊರಡಿಸಿರುವ ಸುತ್ತೋಲೆ ಪ್ರಶ್ನಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
“ವಕ್ಫ್ ತಿದ್ದುಪಡಿ ಕಾಯಿದೆಯನ್ನು ವಿರೋಧಿಸಿ ಪ್ರತಿಭಟಿಸಲು ರಾಜ್ಯ ಸರ್ಕಾರದಿಂದ ಅನುಮತಿ ಪಡೆದಿದ್ದರೆ ಮಾತ್ರ ಪ್ರತಿಭಟನೆ ನಡೆಸಬಹುದಾಗಿದೆ. ಯಾವುದೇ ಕಾರಣಕ್ಕೂ ರಸ್ತೆ ನಿರ್ಬಂಧಿಸಿ ಪ್ರತಿಭಟಿಸುವಂತಿಲ್ಲ. ಅನುಮತಿ ನೀಡಿರುವ ನಿರ್ದಿಷ್ಟ ಸ್ಥಳದಲ್ಲಿ ಪ್ರತಿಭಟನೆ ನಡೆಸಬೇಕು. ಅನುಮತಿ ಇಲ್ಲದಿದ್ದರೆ ಪ್ರತಿಭಟನೆ ಮಾಡುವಂತಿಲ್ಲ. ಪ್ರಕರಣ ಸುಪ್ರೀಂ ಕೋರ್ಟ್ ಪರಿಗಣನೆಯಲ್ಲಿದೆ ಎಂಬುದನ್ನು ರಾಜ್ಯ ಸರ್ಕಾರವು ಗಮನದಲ್ಲಿಟ್ಟುಕೊಳ್ಳಬೇಕು” ಎಂದು ನ್ಯಾಯಾಲಯವು ಆದೇಶಿಸಿದೆ.
ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಡಿ ಆರ್ ರವಿಶಂಕರ್ ಅವರು “ವಕ್ಫ್ ತಿದ್ದುಪಡಿ ಕಾಯಿದೆ ವಿರೋಧಿಸಿ ರಾಷ್ಟ್ರೀಯ ಹೆದ್ದಾರಿ 72ರಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಇದಕ್ಕೆ ರಾಜ್ಯ ಸರ್ಕಾರವೇ ಅನುಮತಿಸುತ್ತಿದೆ. ಆ ಹಾದಿಯಲ್ಲಿ ದಿನವೂ ಅರ್ಜಿದಾರರು ಓಡಾಡುತ್ತಾರೆ. ಏಪ್ರಿಲ್ 18ರಂದು ಅಪಾರ ಸಂಖ್ಯೆಯಲ್ಲಿ ಜನರು ನೆರೆಯುವುದರಿಂದ ಖಾಸಗಿ ಮತ್ತು ಸರ್ಕಾರಿ ಬಸ್‌ಗಳ ಓಡಾಟಕ್ಕೆ ನಿರ್ಬಂಧ ವಿಧಿಸಲಾಗಿದೆ. ಪ್ರತಿಭಟನೆಗೆ ಅನುಮತಿಸಿಲ್ಲ ಎಂದು ಹೇಳಲು ಸರ್ಕಾರ ಈಗಲೂ ಸಿದ್ಧವಿಲ್ಲ. ಮೊದಲಿಗೆ ಪ್ರತಿಭಟನೆಗೆ ಅನುಮತಿಯೇ ಇಲ್ಲ” ಎಂದರು.
ಸರ್ಕಾರದ ಪರ ವಕೀಲರು “ಮಂಗಳೂರು ಪೊಲೀಸ್ ಆಯುಕ್ತರು ಏಪ್ರಿಲ್ 15ರಂದು ಹೊರಡಿಸಿರುವ ಸುತ್ತೋಲೆಯಲ್ಲಿ ಮಾರ್ಪಾಡು ಮಾಡಿ, ಷರತ್ತನ್ನು ಸಡಿಲಗೊಳಿಸಲಾಗಿದೆ. ಅಲ್ಲಿ ಪ್ರತಿಭಟನೆ ನಡೆಯುತ್ತಿರುವುದರಿಂದ ಪರ್ಯಾಯ ರಸ್ತೆಗಳಲ್ಲಿ ಓಡಾಡುವಂತೆ ಸೂಚಿಸಲಾಗಿದೆ. ಅದ್ಯಾರ್‌ನ ಶಾ ಗಾರ್ಡನ್ ಸಭಾಂಗಣದಲ್ಲಿ ಪ್ರತಿಭಟನೆ ನಡೆಯಲಿದೆ. ಮಧ್ಯಮ ಮತ್ತು ಬೃಹತ್ ಗಾತ್ರದ ವಾಹನಗಳಿಗೆ ಪರ್ಯಾಯ ರಸ್ತೆ ಬಳಕೆ ಮಾಡುವಂತೆ ಸೂಚಿಸಲಾಗಿದೆ. ಅದಾಗ್ಯೂ, ವಿಚಾರವನ್ನು ಪೊಲೀಸ್ ಆಯುಕ್ತರ ಗಮನಕ್ಕೆ ತರಲಾಗುವುದು” ಎಂದರು.
ವಿಚಾರಣೆಯ ಒಂದು ಹಂತದಲ್ಲಿ ಪೀಠವು “ಸುಪ್ರೀಂ ಕೋರ್ಟ್‌ನಲ್ಲಿ ವಕ್ಫ್ ತಿದ್ದುಪಡಿ ಕಾಯಿದೆ ಪ್ರಶ್ನಿಸಿರುವ ಅರ್ಜಿಗಳು ವಿಚಾರಣಾ ಹಂತದಲ್ಲಿವೆ. ಈಗ ನೀವು ಯಾವ ಪ್ರತಿಭಟನೆ ಮಾಡಬೇಕು? ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ ನಡೆಯುತ್ತಿರುವಾಗ ಯಾವ ಪ್ರತಿಭಟನೆಗೆ ಅನುಮತಿಸಿದ್ದೀರಿ? ಮುರ್ಷಿದಾಬಾದ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಯ ಬಗ್ಗೆ ಸುಪ್ರೀಂ ಕೋರ್ಟ್ ಅತೃಪ್ತಿ ವ್ಯಕ್ತಪಡಿಸಿದೆ. ಅದೇ ರೀತಿ ಬಿಂಬಿಸಲು ನೀವು ಬಯಸುತ್ತಿದ್ದೀರಾ? ಸುಪ್ರೀಂ ಕೋರ್ಟ್ ಪ್ರಕರಣವನ್ನು ಪರಿಗಣಿಸಿರುವುದರಿಂದ ಪ್ರತಿಭಟನೆಗೆ ಸರ್ಕಾರ ಅನುಮತಿಸಬಾರದಿತ್ತು” ಎಂದು ಮೌಖಿಕವಾಗಿ ಸರ್ಕಾರಕ್ಕೆ ಹೇಳಿತು.
ಅರ್ಜಿದಾರರ ಪರವಾಗಿ ವಕೀಲ ಹೇಮಂತ್ ರಾವ್ ವಕಾಲತ್ತು ಹಾಕಿದ್ದಾರೆ.