ಸಂಚಾರ ದಟ್ಟಣೆ ತಪ್ಪಿಸುವ ಉದ್ದೇಶದಿಂದ ಬೆಂಗಳೂರು ನಗರದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಬಳ್ಳಾರಿ ರಸ್ತೆಯ ಅಗಲೀಕರಣಕ್ಕೆ ಕೈಗೊಂಡಿರುವ ಕ್ರಮಗಳನ್ನು ವಿವರಿಸಿ ರಾಜ್ಯ ಸರ್ಕಾರವು ಮಂಗಳವಾರ ಕರ್ನಾಟಕ ಹೈಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದೆ.
ಬಳ್ಳಾರಿ ರಸ್ತೆ ಅಗಲೀಕರಣ ಮಾಡಲು ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಸಮರ್ಪಣ ಸಾಂಸ್ಕೃತಿಕ ಮತ್ತು ಸಾಮಾಜಿಕ ಸಂಘಟನೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.
ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಅಡ್ವೋಕೇಟ್ ಜನರಲ್ ಧ್ಯಾನ್ ಚಿನ್ನಪ್ಪ ಅವರು ಅರ್ಜಿ ಸಂಬಂಧ 2022ರ ಸೆಪ್ಟೆಂಬರ್ 21ರಂದು ಹೈಕೋರ್ಟ್ ನೀಡಿದ ನಿರ್ದೇಶನಗಳ ಅನ್ವಯ ಬಳ್ಳಾರಿ ರಸ್ತೆಯಲ್ಲಿ ಎಲ್ಲೆಲ್ಲಿ ಹಾಗೂ ಎಷ್ಟು ವಿಸ್ತೀರ್ಣದಷ್ಟು ರಸ್ತೆ ಅಗಲೀಕರಣ ಮಾಡಲು ಉದ್ದೇಶಿಸಲಾಗಿದೆ ಎಂಬುದನ್ನು ವಿವರಿಸಿ ರಾಜ್ಯ ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಸಲ್ಲಿಸಿರುವ ಅಫಿಡವಿಟ್ ಅನ್ನು ಪೀಠಕ್ಕೆ ಸಲ್ಲಿಸಿದರು.
ಅಗಲೀಕರಣಕ್ಕೆ ಉದ್ದೇಶಿಸಿರುವ ರಸ್ತೆಯು ಬಿಬಿಎಂಪಿ ವ್ಯಾಪ್ತಿಗೆ ಬರಲಿದೆ. ರಸ್ತೆ ಅಗಲೀಕರಣ ಮಾಡಲು ಬಿಬಿಎಂಪಿಯ ಸಹಕಾರ ಹಾಗೂ ನೆರವು ಸರ್ಕಾರಕ್ಕೆ ಅಗತ್ಯವಾಗಿದೆ. ಆದ್ದರಿಂದ, ಬಿಬಿಎಂಪಿ ಯಾವ ರೀತಿಯಲ್ಲಿ ಸಹಕಾರ ಹಾಗೂ ನೆರವು ನೀಡಲಿದೆ ಎಂಬುದನ್ನು ವಿವರಿಸಿ, ಪಾಲಿಕೆ ಆಯುಕ್ತರು ಮುಂದಿನ ಎರಡು ವಾರದಲ್ಲಿ ಅಫಿಡವಿಟ್ ಸಲ್ಲಿಸಬೇಕು ಎಂದು ನಿರ್ದೇಶಿಸಿ ಪೀಠವು ವಿಚಾರಣೆ ಮುಂದೂಡಿತು.
ಅಫಿಡವಿಟ್‌ನಲ್ಲಿ ಏನಿದೆ?: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸೆಪ್ಟೆಂಬರ್ 16ರಂದು ನಡೆದ ಉನ್ನತ ಮಟ್ಟದ ಸಭೆಯಲ್ಲಿ ಬಳ್ಳಾರಿ ರಸ್ತೆಯಲ್ಲಿ ಸಂಚಾರ ದಟ್ಟಣೆ ತಪ್ಪಿಸಲು ತೀರ್ಮಾನಿಸಲಾಗಿದೆ. ಇದರ ಭಾಗವಾಗಿ ಬಳ್ಳಾರಿ ರಸ್ತೆಯಲ್ಲಿ ಕಾವೇರಿ ಜಂಕ್ಷನ್‌ನಿಂದ ಮೇಕ್ರಿ ವೃತ್ತದವರೆಗೆ ಲಭ್ಯವಿರುವ ಭೂಮಿಯನ್ನೇ ಬಳಸಿಕೊಂಡು ರಸ್ತೆ ಅಗಲೀಕರಣ ಮಾಡಲು ಉದ್ದೇಶಿಸಲಾಗಿದೆ. ಅಂದರೆ ಮೇಖ್ರಿ ವೃತ್ತದಿಂದ ಗಾಯತ್ರಿ ವಿಹಾರ (ಅರಮನೆ ಮೈದಾನ ಗೇಟ್-4) ವರೆಗೆ ಆರು ಪಥ ರಸ್ತೆಯಿದೆ. ಗಾಯತ್ರಿ ವಿಹಾರದಿಂದ ಕಾವೇರಿ ಚಿತ್ರಮಂದಿರದವರೆಗೂ ಮೂರು ಪಥದಿಂದ ಎರಡು ಪಥ ರಸ್ತೆಯಾಗಲಿದೆ. ಅರಮನೆ ರಸ್ತೆಯ ನಾಲ್ಕನೇ ದ್ವಾರದಿಂದ ಕಾವೇರಿ ಚಿತ್ರಮಂದಿರದವರೆಗೆ ಎರಡು ಪಥ ರಸ್ತೆಯನ್ನು ಮೂರು ಪಥ ರಸ್ತೆಯಾಗಿ ಅಗಲೀಕರಣ ಮಾಡಬೇಕಿದೆ ಎಂದು ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ.
ಮೇಕ್ರಿ ವೃತ್ತದಿಂದ ಅರಮನೆ ರಸ್ತೆಯ ಗಾಯತ್ರಿ ವಿಹಾರ ಪ್ರದೇಶದವರೆಗೆ ಬಲಭಾಗದಲ್ಲಿ 11.50 ಮೀಟರ್ ಮತ್ತು ಎಡ ಭಾಗದಲ್ಲಿ 11.20 ಮೀಟರ್ ವಿಸ್ತೀರ್ಣದ ರಸ್ತೆಯಿದೆ. ಗಾಯತ್ರಿ ವಿಹಾರದಿಂದ ಕಾವೇರಿ ಜಂಕ್ಷನ್‌ವರೆಗೆ 630 ಮೀಟರ್ ಜಾಗವಿದೆ. ಇಲ್ಲಿ ಬಲಗಡೆ 7 ಮೀಟರ್ ಮತ್ತು ಎಡಗಡೆ 7.50 ಮೀಟರ್ ರಸ್ತೆಯಿದೆ. ಇದೀಗ ಎಡಗಡೆ 7 ಮೀಟರ್‌ನಿಂದ 9.50 ಮೀಟರ್ ಮತ್ತು ಬಲಗಡೆ 7.50 ಮೀಟರ್‌ನಿಂದ 9.5 ಮೀಟರ್‌ವರೆಗೆ ರಸ್ತೆ ಅಗಲೀಕರಣ ಮಾಡಲು ಉದ್ದೇಶಿಸಲಾಗಿದೆ ಎಂದು ಅಫಿಡವಿಟ್‌ನಲ್ಲಿ ತಿಳಿಸಲಾಗಿದೆ.
ಅಲ್ಲದೆ, ಈ ಮಾರ್ಗದಲ್ಲಿ ಪಾಲಿಕೆ ಸಿಬ್ಬಂದಿ ಚರಂಡಿಗಳಲ್ಲಿ ಹೂಳು ತೆಗೆಯುವ ಕಾರ್ಯ ಪ್ರಾರಂಭಿಸಿದ್ದು, ಕಾಮಗಾರಿ ಶೀಘ್ರದಲ್ಲಿ ಪ್ರಾರಂಭಿಸಲು ನಿರ್ಧರಿಸಲಾಗಿದೆ. ರಸ್ತೆ ಅಗಲೀಕರಣಕ್ಕಾಗಿ 58 ಮರಗಳನ್ನು ಸ್ಥಳಾಂತರಿಸಲು ಬಿಬಿಎಂಪಿ ಅನುಮತಿ ನೀಡಿದೆ ಎಂದು ತಿಳಿಸಲಾಗಿದೆ.
ಅಂತೆಯೇ, ಮೇಕ್ರಿ ವೃತ್ತದಿಂದ ಕಂಟೋನ್ಮೆಂಟ್ ಮತ್ತು ಜಯ ಮಹಲ್ ರಸ್ತೆಯು ಒಟ್ಟು 2,178 ಮೀಟರ್ ಉದ್ದವಿದೆ. ಜಯ ಮಹಲ್ ರಸ್ತೆಯು ಮೇಕ್ರಿ ವೃತ್ತದಿಂದ ಆರಂಭವಾಗಿ, ಜಯಮಹಲ್ ಹೋಟೆಲ್ ಬಳಿ ಕೊನೆಯಾಗುತ್ತದೆ. ಈ ಮಾರ್ಗವು 2.20 ಕಿ.ಮೀ ಉದ್ದವಿದೆ. ಇಲ್ಲಿ ದಾರಿ ಏಕರೂಪವಾಗಿಲ್ಲ. ಪಾದಚಾರಿ ಮಾರ್ಗದ ಅಗಲದಲ್ಲೂ ವ್ಯತ್ಯಾಸವಿದೆ. ರಸ್ತೆ ವಿಭಜಕವು ಸಹ ರಸ್ತೆ ಮಧ್ಯಭಾಗದಲ್ಲಿ ಇಲ್ಲ ಎಂದು ವಿವರಿಸಲಾಗಿದೆ. ಇದರಿಂದ ಈ ರಸ್ತೆಯನ್ನು ನಾಲ್ಕು ಪಥದ ರಸ್ತೆಯಾಗಿ ಮಾಡಲಾಗುವುದು. ಮೇಕ್ರಿ ವೃತ್ತದಿಂದ ಕಂಟೋನ್ಮೆಟ್ ರಸ್ತೆಯ ಎಡಭಾಗವನ್ನು 7 ಮೀಟರ್‌ನಿಂದ 7.5ಕ್ಕೆ ಮತ್ತು ಬಲಭಾಗವನ್ನು 5 ಮೀಟರ್‌ನಿಂದ 7.5 ಮೀಟರ್‌ಗೆ ಅಗಲೀಕರಣ ಮಾಡಲು ಉದ್ದೇಶಿಲಾಗಿದೆ. ನಾಲ್ಕು ಪಥ ರಸ್ತೆಯ ಮಾಡುವ ಕಾರ್ಯ ಈಗಾಗಲೇ ಚಾಲ್ತಿಯಲ್ಲಿದೆ ಎಂದು ಅಫಿಡವಿಟ್‌ನಲ್ಲಿ ವಿವರಿಸಲಾಗಿದೆ.