ಸುದ್ದಿಗಳು

ಕಾಲ್ತುಳಿತ ಪ್ರಕರಣ: ಮುಚ್ಚಿದ ಲಕೋಟೆಯಲ್ಲಿ ನ್ಯಾ. ಕುನ್ಹಾ ವರದಿಯನ್ನು ಹೈಕೋರ್ಟ್‌ಗೆ ಸಲ್ಲಿಸಿದ ಸರ್ಕಾರ

ನ್ಯಾ.ಕುನ್ಹಾ ಆಯೋಗದ ವರದಿ ರದ್ದತಿಗೆ ಕೋರಿ ಡಿಎನ್‌ಎ ಎಂಟರ್‌ಟೈನ್‌ಮೆಂಟ್‌ ನೆಟ್‌ವರ್ಕ್ಸ್‌ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಜಯಂತ್ ಬ್ಯಾನರ್ಜಿ ಮತ್ತು ಉಮೇಶ್ ಎಂ.ಅಡಿಗ ಅವರ ವಿಭಾಗೀಯ ಪೀಠ ನಡೆಸಿತು.

Bar & Bench

ಆರ್‌ಸಿಬಿ ವಿಜಯೋತ್ಸವ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಕಾಲ್ತುಳಿತ ಘಟನೆಗೆ ಸಂಬಂಧಿಸಿದ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕೆಲ್ ಕುನ್ಹಾ ಅವರ ಆಯೋಗದ ವರದಿಯ ಪ್ರತಿಯನ್ನು ರಾಜ್ಯ ಸರ್ಕಾರವು ಗುರುವಾರ ಕರ್ನಾಟಕ ಹೈಕೋರ್ಟ್‌ಗೆ ಸಲ್ಲಿಸಿತು.

ನ್ಯಾ.ಕುನ್ಹಾ ಅವರ ಆಯೋಗದ ವರದಿ ರದ್ದತಿಗೆ ಕೋರಿ ಡಿಎನ್‌ಎ ಎಂಟರ್‌ಟೈನ್‌ಮೆಂಟ್‌ ನೆಟ್‌ವರ್ಕ್ಸ್‌ ಪ್ರೈವೇಟ್‌ ಲಿಮಿಟೆಡ್‌ ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಜಯಂತ್ ಬ್ಯಾನರ್ಜಿ ಮತ್ತು ಉಮೇಶ್ ಎಂ.ಅಡಿಗ ಅವರ ವಿಭಾಗೀಯ ಪೀಠ ನಡೆಸಿತು.

ಸರ್ಕಾರದ ಪರ ರಾಜ್ಯ ಅಡ್ವೋಕೇಟ್‌ ಜನರಲ್‌ ಕೆ ಶಶಿಕಿರಣ್‌ ಶೆಟ್ಟಿ ಅವರು ನ್ಯಾ. ಕುನ್ಹಾ ಅವರ ವರದಿಯ ಎರಡು ಪ್ರತಿಗಳನ್ನು ಮುಚ್ಚಿದ ಲಕೋಟೆಯಲ್ಲಿ ಪೀಠಕ್ಕೆ ಸಲ್ಲಿಸಿದರು. ಆ ವರದಿ ಪರಿಶೀಲಿಸಿದ ಪೀಠವು "ಡಿಎನ್‌ಎ ಪರ ಜುಲೈ 4ರಂದು ಆಯೋಗದ ಮುಂದೆ ಹಾಜರಾಗಿರುವ ಕಿರಣ್‌ ಕುಮಾರ್‌ ಯಾರು? ವಕೀಲರ ಜೊತೆಗೆ ವಿಚಾರಣಾ ಆಯೋಗದ ಮುಂದೆ ಕಿರಣ್‌ ಹಾಜರಾಗಲು ಡಿಎನ್‌ಎ ಆಡಳಿತ ಮಂಡಳಿಯು ಅನುಮತಿಸಿತ್ತೇ?” ಎಂದು ಅರ್ಜಿದಾರರ ಪರ ವಕೀಲರನ್ನು ಪ್ರಶ್ನಿಸಿತು.

ಅರ್ಜಿದಾರರ ಪರ ಹಿರಿಯ ವಕೀಲ ಬಿ ಕೆ ಸಂಪತ್‌ ಕುಮಾರ್‌ ಅವರು "ಕಿರಣ್‌ ಕುಮಾರ್‌ ಡಿಎನ್‌ಎ ಸಂಸ್ಥೆಯ ಉದ್ಯೋಗಿ. ಆಡಳಿತ ಮಂಡಳಿಯು ಅವರಿಗೆ ವಕೀಲರ ಜೊತೆ ಹಾಜರಾಗಲು ಅನುಮತಿಸಿತ್ತು ಎನ್ನುತ್ತದೆ. ಈ ಕುರಿತು ಸೂಚನೆ ಪಡೆಯಬೇಕಿದೆ” ಎಂದರು. ಇದನ್ನು ಪರಿಗಣಿಸಿದ ಪೀಠವು ಮುಚ್ಚಿದ ಲಕೋಟೆಯಲ್ಲಿ ಸರ್ಕಾರ ವರದಿ ಸಲ್ಲಿಸಿರುವುದನ್ನು ದಾಖಲೆಯಲ್ಲಿ ಸ್ವೀಕರಿಸಲಾಗಿದೆ. ಸೂಚನೆ ಪಡೆದು ಮಾಹಿತಿ ಪಡೆಯಲು ಅರ್ಜಿದಾರರ ಪರ ವಕೀಲರಿಗೆ ಅನುಮತಿಸಿ” ಅರ್ಜಿ ವಿಚಾರಣೆಯನ್ನು ಆಗಸ್ಟ್‌ 12ಕ್ಕೆ ಮುಂದೂಡಿತು.