High Court of Karnataka 
ಸುದ್ದಿಗಳು

5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಮಂಡಳಿ ಪರೀಕ್ಷೆಗೆ ಆಕ್ಷೇಪ; ಮಾ.10ರೊಳಗೆ ಅರ್ಜಿ ಇತ್ಯರ್ಥ ಸಾಧ್ಯತೆ

2022-23ನೇ ಶೈಕ್ಷಣಿಕ ಸಾಲಿನಲ್ಲಿ 5 ಮತ್ತು 8ನೇ ತರಗತಿಗೆ ವಿದ್ಯಾರ್ಥಿಗಳ ಶೈಕ್ಷಣಿಕ ಮೌಲ್ಯಮಾಪನ ವಿಧಾನವನ್ನು ಬದಲಿಸುವ ಕುರಿತಂತೆ 2022ರ ಡಿಸೆಂಬರ್‌ 12 ರಂದು ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶ ಪ್ರಶ್ನೆ.

Bar & Bench

ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ 5 ಮತ್ತು 8ನೇ ತರಗತಿ ವಿದ್ಯಾರ್ಥಿಗಳಿಗೆ ಶಾಲಾ ಮಟ್ಟದ ಮೌಲ್ಯಮಾಪನಕ್ಕೆ ಬದಲಾಗಿ ರಾಜ್ಯ ಮಟ್ಟದ ಮಂಡಳಿ ಪರೀಕ್ಷೆ (ಪಬ್ಲಿಕ್‌ ಪರೀಕ್ಷೆ) ನಡೆಸಲು ರಾಜ್ಯ ಸರ್ಕಾರ ಕೈಗೊಂಡಿರುವ ಕ್ರಮ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯನ್ನು ಮಾರ್ಚ್‌ 10ರೊಳಗೆ ಇತ್ಯರ್ಥಪಡಿಸುವಂತೆ ಕರ್ನಾಟಕ ಹೈಕೋರ್ಟ್‌ನ ಏಕ ಸದಸ್ಯ ಪೀಠಕ್ಕೆ ವಿಭಾಗೀಯ ಪೀಠವು ತಿಳಿಸಿದೆ.

ಕರ್ನಾಟಕ ನೋಂದಾಯಿತ ಅನುದಾನರಹಿತ ಖಾಸಗಿ ಶಾಲೆಗಳ ಸಂಘ ಸಲ್ಲಿಸಿದ್ದ ಮೇಲ್ಮನವಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಅಶೋಕ್‌ ಎಸ್‌. ಕಿಣಗಿ ಅವರ ನೇತೃತ್ವದ ವಿಭಾಗೀಯ ಪೀಠವು ಪ್ರಸಕ್ತ ಶೈಕ್ಷಣಿಕ ಸಾಲಿನ 5 ಮತ್ತು 8ನೇ ತರಗತಿಗಳ ಪರೀಕ್ಷೆಗಳು ಮಾರ್ಚ್‌ 13ರಂದು ನಡೆಯಲಿದೆ. ಹೀಗಾಗಿ, ಅರ್ಜಿಗಳನ್ನು ಶೀಘ್ರ ವಿಚಾರಣೆ ನಡೆಸಿ ಇತ್ಯರ್ಥಪಡಿಸಬೇಕು ಎಂದು ಏಕ ಸದಸ್ಯ ಪೀಠಕ್ಕೆ ತಿಳಿಸಿತು.

ಈ ಆದೇಶದ ಮೇರೆಗೆ ಮಂಗಳವಾರ (ಮಾರ್ಚ್‌ 7ರಂದು) ಸಂಘದ ತಕರಾರು ಅರ್ಜಿಯನ್ನು ನ್ಯಾಯಮೂರ್ತಿ ಪ್ರದೀಪ್ ಸಿಂಗ್ ಯೆರೂರ್ ಅವರ ಏಕ ಸದಸ್ಯ ಪೀಠದ ಮುಂದೆ ವಿಚಾರಣೆಗೆ ನಿಗಿಪಡಿಸಲಾಗಿತ್ತು. ಕೆಲ ಕಾಲ ಅರ್ಜಿ ವಿಚಾರಣೆ ನಡೆಸಿದ ಪೀಠವು ಮಾರ್ಚ್‌ 9ಕ್ಕೆ ವಿಚಾರಣೆ ಮುಂದೂಡಿದೆ.

2022-23ನೇ ಶೈಕ್ಷಣಿಕ ಸಾಲಿನಲ್ಲಿ 5 ಮತ್ತು 8ನೇ ತರಗತಿಗೆ ವಿದ್ಯಾರ್ಥಿಗಳ ಶೈಕ್ಷಣಿಕ ಮೌಲ್ಯಮಾಪನ ವಿಧಾನವನ್ನು ಬದಲಿಸುವ ಕುರಿತಂತೆ 2022ರ ಡಿಸೆಂಬರ್‌ 12 ರಂದು ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶದ ಕ್ರಮ ಪ್ರಶ್ನಿಸಿ ಅರ್ಜಿದಾರ ಸಂಘವು ತಕರಾರು ಅರ್ಜಿ ಸಲ್ಲಿಸಿತ್ತು. ಅದನ್ನು ಫೆಬ್ರವರಿ 23ರಂದು ವಿಚಾರಣೆ ನಡೆಸಿದ್ದ ಏಕ ಸದಸ್ಯ ಪೀಠವು ಸರ್ಕಾರದ ನಿರ್ಧಾರಕ್ಕೆ ಮಧ್ಯಂತರ ತಡೆ ನೀಡಲು ನಿರಾಕರಿಸಿತ್ತು. ಇದರಿಂದ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಲಾಗಿತ್ತು. ಶೈಕ್ಷಣಿಕ ವರ್ಷದ ಅಂತ್ಯದಲ್ಲಿ ಮೌಲ್ಯಮಾಪನ ಬದಲಾವಣೆಗೆ ಸರ್ಕಾರ ಕೈಗೊಂಡಿರುವ ನಿರ್ಣಯವು ವಿದ್ಯಾರ್ಥಿಗಳ ಮತ್ತು ಶಿಕ್ಷಕರ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ ಎಂಬುದು ಸಂಘದ ಆಕ್ಷೇಪಣೆಯಾಗಿದೆ.