Dileep with Kerala HC 
ಸುದ್ದಿಗಳು

ನಟಿ ಸಾಮೂಹಿಕ ಅತ್ಯಾಚಾರ ಪ್ರಕರಣ: ನಟ ದಿಲೀಪ್‌ ಖುಲಾಸೆ ಪ್ರಶ್ನಿಸಿ ಕೇರಳ ಹೈಕೋರ್ಟ್‌ಗೆ ಮೇಲ್ಮನವಿ

ನ್ಯಾಯಾಧೀಶೆ ಹನಿ ಎಂ ವರ್ಗೀಸ್ ಅವರು ಪ್ರಕರಣದ ಆರು ಮಂದಿ ದೋಷಿಗಳೆಂದು ತೀರ್ಪು ಪ್ರಕಟಿಸಿದ್ದರು. ಆದರೆ ದಿಲೀಪ್‌ ಅವರನ್ನು ಖುಲಾಸೆಗೊಳಿಸಿದ್ದರು.

Bar & Bench

ಮಲಯಾಳಂ ಮೂಲದ ಬಹುಭಾಷಾ ನಟಿ ಮೇಲೆ 2017ರಲ್ಲಿ ನಡೆದಿದ್ದ ಲೈಂಗಿಕ ದೌರ್ಜನ್ಯ, ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದಿಲೀಪ್‌ ಅವರನ್ನು ಖುಲಾಸೆಗೊಳಸಿ ವಿಚಾರಣಾ ನ್ಯಾಯಾಲಯ ಕೆಲ ತಿಂಗಳುಗಳ ಹಿಂದೆ ಪ್ರಕಟಿಸಿದ್ದ ತೀರ್ಪನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಕೇರಳ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದೆ.

2025ರ ಡಿಸೆಂಬರ್‌ನಲ್ಲಿ ಬಹು ನಿರೀಕ್ಷಿತ ತೀರ್ಪನ್ನು ಪ್ರಕಟಿಸಿದ್ದ ಎರ್ನಾಕುಲಂ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶೆ  ಹನಿ ಎಂ ವರ್ಗೀಸ್ ಅವರು ಪ್ರಕರಣದ ಆರು ಮಂದಿ ದೋಷಿಗಳೆಂದು ತೀರ್ಪು ಪ್ರಕಟಿಸಿದ್ದರು. ಆದರೆ ದಿಲೀಪ್‌ ಅವರನ್ನು ಖುಲಾಸೆಗೊಳಿಸಿದ್ದರು. ಆರು ಮಂದಿಗೆ ಐಪಿಸಿ ಸೆಕ್ಷನ್‌ 376ರ (ಸಾಮೂಹಿಕ ಅತ್ಯಾಚಾರ) ಅಡಿಇಪ್ಪತ್ತು ವರ್ಷಗಳ ಕಠಿಣ ಜೈಲು ಶಿಕ್ಷೆ ವಿಧಿಸಿತ್ತು.

ದಿಲೀಪ್ ಅವರ ಖುಲಾಸೆ ಹಾಗೂ ಕನಿಷ್ಠ ಶಿಕ್ಷೆ ವಿಧಿಸಿರುವ ಬಗ್ಗೆ ತೀವ್ರ ಟೀಕೆ ವ್ಯಕ್ತವಾಗಿದ್ದು, ಕಾನೂನು ಸಚಿವ ಪಿ. ರಾಜೀವ್ ಅವರು ಡಿಸೆಂಬರ್ 8ರಂದು ತೀರ್ಪಿನ ದಿನವೇ ರಾಜ್ಯ ಸರ್ಕಾರ ಮೇಲ್ಮನವಿ ಸಲ್ಲಿಸಿ ಸಂತ್ರಸ್ತೆಯ ಪರ ನಿಲ್ಲುವುದಾಗಿ ಘೋಷಿಸಿದ್ದರು.

ದಿಲೀಪ್ ಸೇರಿದಂತೆ ಖುಲಾಸೆಯಾದ ಇನ್ನೂ ಮೂವರು ಆರೋಪಿಗಳು (ಚಾರ್ಲಿ ಥಾಮಸ್, ಸನಿಲ್‌ಕುಮಾರ್ ಅಕಾ ಮೆಸ್ತಿರಿ ಸನಿಲ್, ಸರತ್ ಜಿ. ನಾಯರ್) ವಿರುದ್ಧವೂ ದೋಷಾರೋಪಣೆ ಮಾಡಿ ಶಿಕ್ಷೆ ವಿಧಿಸಬೇಕು ಎಂದು ರಾಜ್ಯ ಸರ್ಕಾರದ ಮೇಲ್ಮನವಿ ತಿಳಿಸಿದೆ.

ವಿಚಾರಣಾ ನ್ಯಾಯಾಲಯವು ಆರು ಮಂದಿಗೆ ವಿಧಿಸಿದ ಕಠಿಣ ಕಾರಾಗೃಹ ಸಜೆ ಸಾಲದು. ಶಿಕ್ಷೆಯ ಪ್ರಮಾಣವನ್ನು ಇನ್ನಷ್ಟು ಹೆಚ್ಚಿಸಬೇಕು. ಅಲ್ಲದೆ ವಿಚಾರಣಾ ನ್ಯಾಯಾಲಯ ಪ್ರಕರಣದ ಸಾಕ್ಷ್ಯಾಧಾರಗಳನ್ನು ಸಮರ್ಪಕವಾಗಿ ಮೌಲ್ಯಮಾಪನ ಮಾಡಿಲ್ಲ ಎಂದು ಸರ್ಕಾರ ತಿಳಿಸಿದೆ. ಸಂತ್ರಸ್ತೆಗೆ ನ್ಯಾಯ ದೊರಕಿಸಿಕೊಡಲು ತಾನು ಮೇಲ್ಮನವಿ ಸಲ್ಲಿಸಿದ್ದು ಖುಲಾಸೆ ತೀರ್ಪು ರದ್ದುಗೊಳಿಸಿ ಸೂಕ್ತ ಶಿಕ್ಷೆ ವಿಧಿಸಬೇಕು ಎಂದು ಸರ್ಕಾರ ಕೋರಿದೆ.