Meat  
ಸುದ್ದಿಗಳು

ರಾಜ್ಯವು ಮಾಡಬೇಕಾದ ಉತ್ತಮ ಕೆಲಸಗಳಿವೆ: ಗೋಮಾಂಸ ಸಾಗಣೆ ಬೆಂಬತ್ತಿದ ಅಸ್ಸಾಂ ಸರ್ಕಾರಕ್ಕೆ ತಿವಿದ ಸುಪ್ರೀಂ ಕೋರ್ಟ್‌

ಓರ್ವ ಸಾಮಾನ್ಯ ವ್ಯಕ್ತಿಗೆ ವಿವಿಧ ಪ್ರಾಣಿಗಳ ಹಸಿ ಮಾಂಸವನ್ನು ಕೇವಲ ಕಣ್ಣೋಟದ ಮೂಲಕವೇ ಪ್ರತ್ಯೇಕಿಸಿ ಗುರುತಿಸಲು ಸಾಧ್ಯವಿಲ್ಲ ಎಂದ ನ್ಯಾಯಾಲಯ.

Bar & Bench

ಮಾಂಸ ಸಾಗಣೆಯಲ್ಲಿ ತೊಡಗಿರುವ ಜನರನ್ನು ಬೆಂಬತ್ತುವ ಬದಲಿಗೆ ತನ್ನ ಸಂಪನ್ಮೂಲ ಹಾಗೂ ಸಮಯವನ್ನು ಇತರ ಉತ್ಪಾದಕ ಕೆಲಸಗಳಿಗೆ ಬಳಸಿಕೊಳ್ಳುವಂತೆ ಸುಪ್ರೀಂ ಕೋರ್ಟ್‌ ಅಸ್ಸಾಂ ಸರ್ಕಾರದ ಕಿವಿಹಿಂಡಿದೆ.

ಪ್ಯಾಕ್ ಮಾಡಲಾದ ಹಸಿ ಮಾಂಸದ ಸಾಗಣೆ ಮಾಡಿದ್ದಕ್ಕಾಗಿ ಸಾಗಣೆದಾರನೋರ್ವನ ವಿರುದ್ಧ ಹೂಡಲಾಗಿದ್ದ ದಾವೆಯ ವಿಚಾರಣೆ ವೇಳೆ ನ್ಯಾಯಮೂರ್ತಿಗಳಾದ ಎ ಎಸ್ ಓಕಾ ಮತ್ತು ಉಜ್ಜಲ್ ಭುಯಾನ್ ಅವರ ಪೀಠವು ಈ ಅವಲೋಕನ ಮಾಡಿತು. ಇದೇ ವೇಳೆ, ಮಧ್ಯಂತರ ಆದೇಶ ನೀಡಿದ ನ್ಯಾಯಾಲಯವು ಸಾಗಣೆದಾರನ ವಿರುದ್ಧದ ಕ್ರಿಮಿನಲ್‌ ಪ್ರಕ್ರಿಯೆಯನ್ನು ತಡೆಹಿಡಿಯಿತು.

ವಿಚಾರಣೆ ವೇಳೆ ಪೀಠವು ಅಸ್ಸಾಂ ರಾಜ್ಯ ಸರ್ಕಾರವನ್ನು ಉದ್ದೇಶಿಸಿ, "ಇಂತಹ ಜನರ ಬೆನ್ನಹಿಂದೆ ಬೀಳುವುದಕ್ಕಿಂತ ರಾಜ್ಯ ಸರ್ಕಾರಕ್ಕೆ ಮಾಡಬೇಕಾದ ಉತ್ತಮ ಕೆಲಸಗಳಿವೆ" ಎಂದು ಮೌಖಿಕವಾಗಿ ಟೀಕಿಸಿತು.

ಇಂತಹ ಜನರ ಬೆನ್ನಹಿಂದೆ ಬೀಳುವುದಕ್ಕಿಂತ ರಾಜ್ಯ ಸರ್ಕಾರಕ್ಕೆ ಮಾಡಬೇಕಾದ ಉತ್ತಮ ಕೆಲಸಗಳಿವೆ
ಸುಪ್ರೀಂ ಕೋರ್ಟ್‌

"ಈ ಅರ್ಜಿಯನ್ನು ಅಂತಿಮವಾಗಿ ಆಲಿಸಬೇಕಿದೆ. ಈ ಉದ್ದೇಶಕ್ಕಾಗಿ ಅರ್ಜಿಯನ್ನು ಏಪ್ರಿಲ್ 16ರಂದು ಪಟ್ಟಿ ಮಾಡಲಾಗುವುದು. ಮುಂದಿನ ಆದೇಶದವರೆಗೆ ಮಧ್ಯಂತರ ಪರಿಹಾರವನ್ನು ಮುಂದುವರೆಸಲಾಗುವುದು. ಮಧ್ಯಂತರ ಪರಿಹಾರದ ದೃಷ್ಟಿಯಿಂದ, ಮುಂದಿನ ಆದೇಶದವರೆಗೆ ಎಫ್‌ಐಆರ್ ಆಧರಿಸಿ ಪ್ರಕರಣವನ್ನು ಮುಂದುವರಿಸಬಾರದು ಎಂದು ನಾವು ನಿರ್ದೇಶಿಸುತ್ತೇವೆ" ಎಂದು ನ್ಯಾಯಾಲಯ ಆದೇಶಿಸಿತು.

ವಿಚಾರಣೆ ವೇಳೆ ನ್ಯಾಯಾಲಯವು, ಓರ್ವ ಸಾಮಾನ್ಯ ವ್ಯಕ್ತಿಯು ವಿವಿಧ ಪ್ರಾಣಿಗಳ ಹಸಿ ಮಾಂಸವನ್ನು ಕೇವಲ ಕಣ್ಣೋಟದ ಮೂಲಕವೇ ಹೇಗೆ ಪ್ರತ್ಯೇಕಿಸಲು ಸಾಧ್ಯ ಎಂದು ಪ್ರಶ್ನಿಸಿತು.

"ಇದು ಮಾಂಸವೇ ಅಥವಾ ಗೋಮಾಂಸವೇ ಎಂದು ವ್ಯಕ್ತಿಯೊಬ್ಬ ಹೇಗೆ ಅರಿಯಲು ಸಾಧ್ಯ? ಬರಿಯ ಕಣ್ಣೋಟದಿಂದ ಇದನ್ನು ಗುರುತಿಸಲು ಸಾಧ್ಯವಿಲ್ಲ," ಎಂದು ನ್ಯಾಯಾಲಯ ಬೆರಳು ಮಾಡಿತು.

ಗೋದಾಮಿನಿಂದ ತಾನು ಕೇವಲ ಹಸಿ ಮಾಂಸವನ್ನು ಸಾಗಿಸುತ್ತಿರುವುದಾಗಿ ಆರೋಪಿ ಸಾಗಣೆದಾರ ನ್ಯಾಯಾಲಯಕ್ಕೆ ಹೇಳಿಕೆ ನೀಡಿದ ಬಳಿಕ ನ್ಯಾಯಾಲಯ ಈ ಅವಲೋಕನವನ್ನು ಮಾಡಿತು.

ಇದು ಮಾಂಸವೇ ಅಥವಾ ಗೋಮಾಂಸವೇ ಎಂದು ವ್ಯಕ್ತಿಯೊಬ್ಬ ಹೇಗೆ ಅರಿಯಲು ಸಾಧ್ಯ? ಬರಿಯ ಕಣ್ಣೋಟದಿಂದ ಇದನ್ನು ಗುರುತಿಸಲು ಸಾಧ್ಯವಿಲ್ಲ.
ಸುಪ್ರೀಂ ಕೋರ್ಟ್

ವಿಚಾರಣೆಯ ಸಂದರ್ಭದಲ್ಲಿ ಅಸ್ಸಾಂ ಸರ್ಕಾರದ ಪರ ವಕೀಲರು , "ಇದು ಪೂರ್ವ ಪ್ಯಾಕೇಜ್‌ ಮಾಡಲಾದ ಮಾಂಸವಲ್ಲ, ಬದಲಿಗೆ ಹಸಿ ಮಾಂಸದ ಪ್ಯಾಕೆಟ್‌ಗಳಾಗಿವೆ. ನಮ್ಮ ಪ್ರಕರಣದಲ್ಲಿ, ಪ್ಯಾಕೇಜಿಂಗ್‌ ಹಾಗೂ ಮಾರಾಟ ಈ ಎರಡನ್ನೂ ಆರೋಪಿಯೇ ಮಾಡಿದ್ದಾನೆ," ಎಂದು ವಾದಿಸಿದರು.

ಆದರೆ, ಅಸ್ಸಾಂನ ಜಾನುವಾರು ಸಂರಕ್ಷಣಾ ಕಾಯಿದೆಯ ಸೆಕ್ಷನ್‌ 8ರ ಅಡಿ ತಾನು ಪ್ಯಾಕೇಜ್‌ ಹಾಗೂ ಸಾಗಣೆ ಮಾಡುತ್ತಿರುವುದು ಗೋಮಾಂಸವನ್ನೇ ಎನ್ನುವ ಅರಿವು ಆರೋಪಿಗೆ ಇದ್ದಾಗ ಮಾತ್ರ ಅದು ಕಾಯಿದೆಯಡಿ ಶಿಕ್ಷೆಗೆ ಕಾರಣವಾಗುತ್ತದೆ ಎನ್ನುವ ಅಂಶವನ್ನು ನ್ಯಾ. ಓಕಾ ವಿವರಿಸಿದರು. ಆರೋಪಿಯು ಗೋದಾಮನ್ನು ಹೊಂದಿದ್ದರೂ ಅಲ್ಲಿನ ಮಾರಾಟದ ವಸ್ತುವಿನ ಉತ್ಪಾದಕ ಅವನಲ್ಲ ಎನ್ನುವ ಅಂಶವನ್ನೂ ಸಹ ನ್ಯಾಯಾಲಯ ಗಮನಸಿತು.

"ನಿಮಗೆ ಯಾರಾದರೂ ಮಾಂಸವನ್ನು ಕೊಟ್ಟರೆ, ಆ ಮಾಂಸವನ್ನು ನೀವು ಇರಿಸಿಕೊಂಡಿದ್ದಾಗ ಅದು ಯಾವ ಪ್ರಾಣಿಯ ಮಾಂಸ ಎನ್ನುವುದು ನಿಮಗೆ ತಿಳಿಯುತ್ತದೆಯೇ," ಎಂದು ನ್ಯಾಯಾಲಯ ಸರ್ಕಾರದ ವಕೀಲರನ್ನು ಪ್ರಶ್ನಿಸಿತು.

ಕೊನೆಯದಾಗಿ ಪೀಠವು ಪ್ರಕರಣದ ಅಂತಿಮ ವಿಚಾರಣೆಯನ್ನು ಏಪ್ರಿಲ್‌ 16ಕ್ಕೆ ಮುಂದೂಡಿತು. ಆರೋಪಿಯ ವಿರುದ್ಧದ ಕ್ರಿಮಿನಲ್‌ ಮೊಕದ್ದಮೆಗೆ ತಡೆ ನೀಡಿತು.