Vehicles 
ಸುದ್ದಿಗಳು

ಬಿಎಚ್ ಸರಣಿಯಲ್ಲಿ ವಾಹನ ನೋಂದಾಯಿಸುವಾಗ ರಾಜ್ಯ ಸರ್ಕಾರಗಳು ತಮ್ಮ ನಿಯಮಗಳ ಅನ್ವಯ ತೆರಿಗೆ ವಿಧಿಸಬಹುದು: ಕೇರಳ ಹೈಕೋರ್ಟ್

ಬಿಎಚ್ ಸರಣಿಯ ನೋಂದಣಿ ಗುರುತು ಹೊಂದಿರುವ ವಾಹನಗಳ ಮಾಲೀಕರು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ನಿವಾಸ ಬದಲಾಯಿಸಿದರೆ ಆಗ ಹೊಸದಾಗಿ ನೋಂದಣಿ ಗುರುತು ಪಡೆಯುವ ಅಗತ್ಯ ಇರುವುದಿಲ್ಲ.

Bar & Bench

ಭಾರತ್ ಸರಣಿಯಡಿ (ಬಿಎಚ್‌ ಸರಣಿ) ಸಾರಿಗೆಯೇತರ ವಾಹನಗಳನ್ನು ನೋಂದಾಯಿಸುವಾಗ ಆಯಾ ರಾಜ್ಯಗಳ ಕಾನೂನುಗಳಡಿ ಸೂಚಿಸಿರುವಂತೆ ತೆರಿಗೆ ವಿಧಿಸಲು ರಾಜ್ಯ ಸರ್ಕಾರಗಳು ಸ್ವತಂತ್ರವಾಗಿವೆ ಎಂದು ಕೇರಳ ಹೈಕೋರ್ಟ್ ಇತ್ತೀಚೆಗೆ ಹೇಳಿದೆ [ಹರೀಶ್ ಕುಮಾರ್ ಕೆಪಿ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ]

ಬಿಎಚ್‌ ಸರಣಿಯ ವಾಹನ ನೋಂದಣಿಯನ್ನು 2021ರಲ್ಲಿ ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವಾಲಯ ಜಾರಿಗೆ ತಂದಿತ್ತು. ಬಿಎಚ್‌ ಸರಣಿಯ ನೋಂದಣಿ ಗುರುತು ಹೊಂದಿರುವ ವಾಹನಗಳ ಮಾಲೀಕರು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ನಿವಾಸ ಬದಲಾಯಿಸಿದರೆ ಆಗ ಹೊಸ ನೋಂದಣಿ ಗುರುತು ಪಡೆಯುವ ಅಗತ್ಯ ಇರುವುದಿಲ್ಲ.

ಸಂವಿಧಾನದ ಏಳನೇ ಶೆಡ್ಯೂಲ್‌ನ ಪಟ್ಟಿ II ರ ನಮೂದು 57ರ 246ನೇ ವಿಧಿಯ ಪ್ರಕಾರ, ತೆರಿಗೆ ದರ ಸೇರಿದಂತೆ ಮೋಟಾರು ವಾಹನಗಳ ಮೇಲಿನ ತೆರಿಗೆಗಳು ರಾಜ್ಯಗಳ ವ್ಯಾಪ್ತಿಗೆ ಬರುತ್ತವೆ ಎಂದು ತಿಳಿಸಿದ ನ್ಯಾಯಮೂರ್ತಿ ದಿನೇಶ್ ಕುಮಾರ್ ಸಿಂಗ್ ಕೇಂದ್ರ ಸರ್ಕಾರದ ಶಾಸಕಾಂಗ ವ್ಯಾಪ್ತಿ ಮೀರುವುದರಿಂದ ಕೇಂದ್ರ ಮೋಟಾರು ವಾಹನ ನಿಯಮಾವಳಿ 51B (2) ಬಿಎಚ್‌ ಸರಣಿಯ ಸಾರಿಗೆಯೇತರ ವಾಹನಗಳಿಗೆ ಸಂವಿಧಾನಾತ್ಮಕವಾಗಿ ತೆರಿಗೆ ವಿಧಿಸಲು ಸಾಧ್ಯವಿಲ್ಲ ಎಂದಿದ್ದಾರೆ.

"ರಾಜ್ಯಗಳು ತಮ್ಮ ಶಾಸನದ ಅಡಿಯಲ್ಲಿ ಸೂಚಿಸಲಾದ ದರದಲ್ಲಿ ತೆರಿಗೆ ವಿಧಿಸಲು ಸ್ವತಂತ್ರವಾಗಿವೆ. ಆದ್ದರಿಂದ, 2021ರ ಬಿಎಚ್‌ ಸರಣಿಯ ಅಡಿಯಲ್ಲಿ ನೋಂದಾಯಿಸಲಾದ ವಾಹನಗಳಿಗೆ ಕೇಂದ್ರ ಮೋಟಾರು ವಾಹನ (ಇಪ್ಪತ್ತನೇ ತಿದ್ದುಪಡಿ) ನಿಯಮಗಳ ನಿಯಮ 51 ಬಿ ಉಪನಿಯಮ (2) ರಲ್ಲಿ ಸೂಚಿಸಿದಂತೆ ತೆರಿಗೆ ದರವನ್ನು ಜಾರಿಗೆ ತರಲು ರಾಜ್ಯಗಳು ಬದ್ಧರಾಗಿರುವುದಿಲ್ಲ" ಎಂದು ನ್ಯಾಯಾಲಯದ ತೀರ್ಪು ಹೇಳಿದೆ.

ಆದರೆ ಮೋಟಾರು ವಾಹನಗಳ ಮೇಲೆ ತೆರಿಗೆ ವಿಧಿಸಲು ಕೇಂದ್ರ ಸರ್ಕಾರ ನಿಯಮಾವಳಿಗಳನ್ನು ವಿಧಿಸಬಹುದಾಗಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ರಾಜ್ಯ ಸಾರಿಗೆ ಅಧಿಕಾರಿಗಳು ತಮ್ಮ ಹೊಸ ವಾಹನಗಳನ್ನು ಬಿಎಚ್‌ ಸರಣಿಯ ಅಡಿಯಲ್ಲಿ ನೋಂದಾಯಿಸಲು ನಿರಾಕರಿಸಿದ ಹಿನ್ನೆಲೆಯಲ್ಲಿ ವಿವಿಧ ವ್ಯಕ್ತಿಗಳು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ವೇಳೆ ಈ ತೀರ್ಪು ಹೊರಬಿದ್ದಿತು.

ಅಂತೆಯೇ ಅರ್ಜಿದಾರರ ವಾಹನಗಳನ್ನು ಬಿಎಚ್‌ ಸರಣಿಯ ಅಡಿಯಲ್ಲಿ ನೋಂದಾಯಿಸಲು ಮತ್ತು ಕೇರಳ ಮೋಟಾರು ವಾಹನ ತೆರಿಗೆ ಕಾಯಿದೆ- 1976 ರ ನಿಬಂಧನೆಗಳ ಪ್ರಕಾರ ತೆರಿಗೆ ವಿಧಿಸಲು ನ್ಯಾಯಾಲಯ ರಾಜ್ಯ ಸರ್ಕಾರದ ಅಧಿಕಾರಿಗಳಿಗೆ ನಿರ್ದೇಶನ ನೀಡಿತು.