Bagmane Developers and Karnataka HC 
ಸುದ್ದಿಗಳು

ಬಾಗ್ಮನೆ ಟೆಕ್‌ಪಾರ್ಕ್‌ ಒತ್ತುವರಿ ತೆರವು: ಲೋಕಾಯುಕ್ತ ಆದೇಶ ರದ್ದು ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ ಎಸ್‌ಪಿಎಸ್‌

ಪ್ರಕರಣದಲ್ಲಿ ಲೋಕಾಯುಕ್ತರು ತಮ್ಮ ಅಧಿಕಾರ ವ್ಯಾಪ್ತಿ ಮೀರಿ ಆದೇಶ ಮಾಡಿದ್ದಾರೆ. ಹೀಗಾಗಿ, ಅದನ್ನು ವಜಾ ಮಾಡಬೇಕು. ಅಲ್ಲದೇ, ಲೋಕಾಯುಕ್ತರು ಅಧಿಕಾರ ಬಳಕೆಗೆ ಸಂಬಂಧಿಸಿದಂತೆ ಸ್ಪಷ್ಟವಾದ ಮಾರ್ಗಸೂಚಿಗಳನ್ನು ರೂಪಿಸಬೇಕು ಎಂದು ಕೋರಲಾಗಿದೆ.

Bar & Bench

ಬೆಂಗಳೂರಿನ ಪ್ರತಿಷ್ಠಿತ ಬಾಗ್ಮನೆ ಡೆವಲಪರ್ಸ್‌ ಪ್ರೈವೇಟ್‌ ಲಿಮಿಟೆಡ್‌ (ಬಾಗ್ಮನೆ ಟೆಕ್‌ಪಾರ್ಕ್) ಬಳಿಯ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಮೂರು ವಾರಗಳ ಕಾಲ ಮುಂದೂಡುವಂತೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ಲೋಕಾಯುಕ್ತರು ನೀಡಿದ ನಿರ್ದೇಶನ ಒಳಗೊಂಡು ಎಲ್ಲಾ ಪ್ರಕ್ರಿಯೆ ರದ್ದುಪಡಿಸುವಂತೆ ಕೋರಿ ಕರ್ನಾಟಕ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ.

ಧಾರವಾಡದ ಸಮಾಜ ಪರಿವರ್ತನಾ ಸಮುದಾಯದ (ಎಸ್‌ಪಿಎಸ್) ಸಂಸ್ಥಾಪಕ ಅಧ್ಯಕ್ಷ ಎಸ್ ಆರ್ ಹಿರೇಮಠ ಅವರು ಅರ್ಜಿ ಸಲ್ಲಿಸಿದ್ದು, ಲೋಕಾಯುಕ್ತ ರಿಜಿಸ್ಟ್ರಾರ್, ಬಿಬಿಎಂಪಿ ಆಯುಕ್ತರು, ಪೌರಾಡಳಿತ ಇಲಾಖೆಯ ಕಾರ್ಯದರ್ಶಿ ಮತ್ತು ಬಾಗ್ಮನೆ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್ ಅನ್ನು ಅರ್ಜಿಯಲ್ಲಿ ಪ್ರತಿವಾದಿಗಳನ್ನಾಗಿಸಲಾಗಿದೆ.

ಹಂಗಾಮಿ ಮುಖ್ಯ ನ್ಯಾಯಮೂರ್ತಿ ಅಲೋಕ್ ಅರಾಧೆ ಮತ್ತು ನ್ಯಾಯಮೂರ್ತಿ ಎಸ್‌ ವಿಶ್ವಜಿತ್‌ ಶೆಟ್ಟಿ ಅವರ ನೇತೃತ್ವದ ವಿಭಾಗೀಯ ಪೀಠದ ಮುಂದೆ ಹಾಜರಾದ ಅರ್ಜಿದಾರರ ಪರ ವಕೀಲ ಗೌತಮ್ ರಮೇಶ್ ಅವರು “ಅರ್ಜಿಯನ್ನು ತುರ್ತಾಗಿ ವಿಚಾರಣೆಗೆ ಕೈಗೆತ್ತಿಕೊಳ್ಳಬೇಕು” ಎಂದು ಮನವಿ ಮಾಡಿದರು. ಇದಕ್ಕೆ ಪೀಠವು ಸೆಪ್ಟೆಂಬರ್‌ 26ರಂದು ಅರ್ಜಿ ವಿಚಾರಣೆ ನಡೆಸುವುದಾಗಿ ತಿಳಿಸಿತು.

ಬಾಗ್ಮನೆ ಟೆಕ್‌ಪಾರ್ಕ್ ಕಂಪೆನಿಯು ರಾಜಕಾಲುವೆ ಒತ್ತುವರಿ ಮಾಡಿರುವುದನ್ನು ತೆರವು ಮಾಡುವುದಕ್ಕೆ ಬಿಬಿಎಂಪಿ ಗುರುತು ಮಾಡಿತ್ತು. ಈ ಸಂಬಂಧ ಲೋಕಾಯುಕ್ತರಿಗೆ ದೂರು ನೀಡಿದ್ದ ಬಾಗ್ಮನೆ ಟೆಕ್‌ಪಾರ್ಕ್‌, ಅಕ್ರಮ ಕಟ್ಟಡ ತೆರವು ಕಾರ್ಯಾಚರಣೆಗೂ ಮುನ್ನ ಬಿಬಿಎಂಪಿ ನೋಟಿಸ್ ಜಾರಿ ಮಾಡಿಲ್ಲ. ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡಿರುವ ಮತ್ತೊಂದು ರಿಯಲ್ ಎಸ್ಟೇಟ್ ಕಂಪೆನಿಗೆ ಬಿಬಿಎಂಪಿ ಸಾಥ್ ನೀಡಿದೆ. ಬಿಬಿಎಂಪಿಯು ತಾರತಮ್ಯದಿಂದ ಚರಂಡಿ (ಡ್ರೈನ್ಸ್) ತೆರವು ಮಾಡಿದರೆ ಬಾಗ್ಮನೆ ಮತ್ತು ಸಮೀಪದ ಕಂಪೆನಿಗಳಿಗೆ ಪ್ರವಾಹದ ನೀರು ತುಂಬಿಕೊಳ್ಳುವ ಸಾಧ್ಯತೆ ಇದೆ ಎಂದು ಆಕ್ಷೇಪಿಸಿತ್ತು.

ಇದನ್ನು ಪರಿಗಣಿಸಿದ್ದ ಲೋಕಾಯುಕ್ತ ನ್ಯಾ. ಬಿ ಎಸ್ ಪಾಟೀಲ್ ಅವರು “ಅಕ್ರಮ ಕಟ್ಟಡ ತೆರವು ಕಾರ್ಯಾಚರಣೆ ಮುಂದುವರಿಯಲು ಸ್ವಲ್ಪ ಕಾಲಾವಕಾಶಬೇಕಿದೆ. ಸರಿಯಾದ ರೀತಿಯಲ್ಲಿ ಮತ್ತು ತುರ್ತಾಗಿ ತೆರವು ಕಾರ್ಯಾಚರಣೆ ನಡೆಸುವ ನಿಟ್ಟಿನಲ್ಲಿ ದೂರುದಾರರು ಹಾಗೂ ಬಿಬಿಎಂಪಿ ಪರಸ್ಪರ ಸಹಕಾರ ನೀಡಬೇಕು. ತೆರವು ಕಾರ್ಯಾಚರಣೆ ನಡೆಸುವುದಕ್ಕೂ ಮುನ್ನ ಬಿಬಿಎಂಪಿ ಕಾನೂನು ಪ್ರಕ್ರಿಯೆ ಪಾಲಿಸಬೇಕು. ಹೀಗಾಗಿ, ಒತ್ತುವರಿ ಕಾರ್ಯಾಚರಣೆಯನ್ನು ಮೂರು ವಾರ ಮುಂದೂಡಲಾಗಿದೆ” ಎಂದು ತಿಳಿಸಿ ಸೆಪ್ಟೆಂಬರ್‌ 12ರಂದು ಆದೇಶ ಮಾಡಿದ್ದರು. ಈ ನಿರ್ದೇಶನದ ಹಿನ್ನೆಲೆಯಲ್ಲಿ ಬಾಗ್ಮನೆ ಟೆಕ್‌ಪಾರ್ಕ್ ಬಳಿ ಬಿಬಿಎಂಪಿ ಒತ್ತುವರಿ ತೆರವು ಕಾರ್ಯಾಚರಣೆ ಸ್ಥಗಿತಗೊಳಿಸಿತ್ತು.

ಲೋಕಾಯುಕ್ತರ ಆದೇಶವನ್ನು ಪ್ರಶ್ನಿಸಿರುವ ಎಸ್ ಆರ್ ಹಿರೇಮಠ್ ಅವರು ಕರ್ನಾಟಕ ಲೋಕಾಯುಕ್ತ ಕಾಯಿದೆ-1984ರ ಪ್ರಕಾರ ಸಾರ್ವಜನಿಕ ಆಡಳಿತವನ್ನು ಸುಧಾರಿಸುವ ನಿಟ್ಟಿನಲ್ಲಿ ಲೋಕಾಯುಕ್ತರು ಕಾರ್ಯ ನಿರ್ವಹಿಸಬೇಕು. ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಸರ್ಕಾರಿ ನೌಕರರ ವಿರುದ್ಧ ದಾಖಲಾಗುವ ದೂರುಗಳನ್ನು ಆಧರಿಸಿ ಕ್ರಮ ಕೈಗೊಳ್ಳಬೇಕು. ಆದರೆ, ಈ ಪ್ರಕರಣದಲ್ಲಿ ಲೋಕಾಯುಕ್ತರು ತಮ್ಮ ಅಧಿಕಾರ ವ್ಯಾಪ್ತಿ ಮೀರಿ ಆದೇಶ ಮಾಡಿದ್ದಾರೆ. ಹೀಗಾಗಿ, ಅದನ್ನು ವಜಾ ಮಾಡಬೇಕು. ಅಲ್ಲದೇ, ಲೋಕಾಯುಕ್ತರು ಅಧಿಕಾರ ಬಳಕೆಗೆ ಸಂಬಂಧಿಸಿದಂತೆ ಸ್ಪಷ್ಟವಾದ ಮಾರ್ಗಸೂಚಿಗಳನ್ನು ರೂಪಿಸಬೇಕು. ಇದರಿಂದ ಹೈಕೋರ್ಟ್‌ನ ನ್ಯಾಯಾಂಗ ಪರಿಶೀಲನಾ ಅಧಿಕಾರ ಉಲ್ಲಂಘನೆಯಾಗುವುದಿಲ್ಲ ಎಂದು ಹೇಳಲಾಗಿದೆ.