Justice Ashok Kinagi 
ಸುದ್ದಿಗಳು

ಸಾರಿಗೆ ನೌಕರರ ಸೇವಾನುಭವ ನೈಜತೆ ಪರಿಶೀಲನೆಗೆ ನೇಮಿಸಿದ್ದ ಜಿಲ್ಲಾ ನಿವೃತ್ತ ನ್ಯಾಯಾಧೀಶರ ಸಮಿತಿ ಆದೇಶಕ್ಕೆ ತಡೆ

ಒಂದೇ ವಿಷಯಕ್ಕೆ ಎರಡು ತನಿಖಾ ಸಮಿತಿ ರಚಿಸಿರುವುದರಿಂದ ಪ್ರಕರಣವನ್ನು ವಿಚಾರಣೆಗೊಳಪಡಿಸುವ ಅವಶ್ಯಕತೆಯಿದ್ದು, ಏಕಸದಸ್ಯ ತನಿಖಾ ಸಮಿತಿ ರಚಿಸಿ ಸಾರಿಗೆ ಇಲಾಖೆ 2026ರ ಜುಲೈ 10ರಂದು ಹೊರಡಿಸಿರುವ ಆದೇಶಕ್ಕೆ ತಡೆ ನೀಡಲಾಗುವುದು ಎಂದ ಪೀಠ.

Bar & Bench

ಸಾರಿಗೆ ಇಲಾಖೆಯ ಸಿ ಗ್ರೂಪ್ ನೌಕರರು ಸಂಜೆ ಕಾಲೇಜುಗಳಲ್ಲಿ ಅರೆಕಾಲಿಕ ಡಿಪ್ಲೋಮಾ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಸಲ್ಲಿಸಿರುವ ಸೇವಾನುಭವ ಪ್ರಮಾಣ ಪತ್ರಗಳ ನೈಜತೆ ಬಗ್ಗೆ ತನಿಖೆ ನಡೆಸಲು ಜಿಲ್ಲಾ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಏಕಸದಸ್ಯ ಸಮಿತಿಯನ್ನು ರಚಿಸಿ ಸಾರಿಗೆ ಇಲಾಖೆ  ಹೊರಡಿಸಿರುವ ಆದೇಶಕ್ಕೆ ಕರ್ನಾಟಕ ಹೈಕೋರ್ಟ್ ಬುಧವಾರ ತಡೆ ನೀಡಿದೆ.

ಸಾರಿಗೆ ಇಲಾಖೆಯ ಆದೇಶ ಪ್ರಶ್ನಿಸಿ ಸಾರಿಗೆ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಶಶಿಕುಮಾರ್ ಸೇರಿ 2023--24ನೇ ಸಾಲಿನಲ್ಲಿ ಬೆಂಗಳೂರಿನ ಆಕ್ಸ್ ಪರ್ಡ್ ಪಾಲಿಟೆಕ್ನಿಕ್ (ಸಂಜೆ) ಕಾಲೇಜಿನಲ್ಲಿ ಡಿಪ್ಲೋಮಾ ಆಟೋಮೊಬೈಲ್ ಕೋರ್ಸ್‌ಗೆ ಪ್ರವೇಶ ಪಡೆದಿದ್ದ 11 ಮಂದಿ ಸಿ ಗ್ರೂಪ್ ನೌಕರರು ಸಲ್ಲಿಸಿದ ಅರ್ಜಿಯನ್ನು ನ್ಯಾಯಮೂರ್ತಿ ಅಶೋಕ್ ಎಸ್. ಕಿಣಗಿ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ದೂರು ಬಂದ ಹಿನ್ನೆಲೆಯಲ್ಲಿ ಇದೇ ವಿಚಾರವಾಗಿ ತಾಂತ್ರಿಕ ಶಿಕ್ಷಣ ಇಲಾಖೆಯ ನಿರ್ದೇಶಕರು 2025ರ ಜುಲೈ 18ರಂದು ತ್ರಿಸದಸ್ಯರ ಸಮಿತಿ ರಚಿಸಿದ್ದರು. ದಾಖಲೆಗಳನ್ನು ಪರಿಶೀಲಿಸಿದ್ದ ಸಮಿತಿಯು ಅರ್ಜಿದಾರರ ಪರವಾಗಿ ವರದಿ ಕೊಟ್ಟಿದೆ. ಆದರೆ, ಈಗ ಪುನಾ ನಿವೃತ್ತ ಜಿಲ್ಲಾ ನ್ಯಾಯಾಧೀಶರ ನೇತೃತ್ವದಲ್ಲಿ ಏಕಸದಸ್ಯ ತನಿಖಾ ಸಮಿತಿಯನ್ನು ಸಾರಿಗೆ ಆಯುಕ್ತರು ರಚಿಸಿದ್ದಾರೆ. ಹೀಗಾಗಿ,  ಒಂದೇ ವಿಷಯಕ್ಕೆ ಎರಡು ತನಿಖಾ ಸಮಿತಿಗಳನ್ನು ರಚಿಸಲಾಗಿರುವುದರಿಂದ ಪ್ರಕರಣವನ್ನು ವಿಚಾರಣೆಗೆ ಒಳಪಡಿಸುವ ಅವಶ್ಯಕತೆಯಿದ್ದು, ಮುಂದಿನ ವಿಚಾರಣೆವರೆಗೆ ಏಕಸದಸ್ಯ ತನಿಖಾ ಸಮಿತಿ ರಚಿಸಿ ಸಾರಿಗೆ ಇಲಾಖೆ 2026ರ ಜುಲೈ 10ರಂದು ಹೊರಡಿಸಿರುವ ಆದೇಶಕ್ಕೆ ತಡೆ ನೀಡಲಾಗುವುದು ಎಂದು ಪೀಠ ಹೇಳಿತು.