ಕೇರಳದ ವಕೀಲರ ಪರಿಷತ್ತುಮತ್ತು ಕೇರಳ ವಕೀಲರ ಕಲ್ಯಾಣ ನಿಧಿ ಟ್ರಸ್ಟ್ ಸಮಿತಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೇರಳದ ಕಿರಿಯ ವಕೀಲರಿಗೆ ಮಾಸಿಕ ₹ 3,000 ಸ್ಟೈಪೆಂಡ್ ನೀಡುವ ಯೋಜನೆಗೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಶನಿವಾರ ಚಾಲನೆ ನೀಡಿದರು.
ಕೇರಳದ 30 ವರ್ಷಕ್ಕಿಂತ ಕಡಿಮೆ ವಯಸ್ಸಿನ ವಕೀಲರು, 3 ವರ್ಷಕ್ಕಿಂತ ಕಡಿಮೆ ಅವಧಿ ಪ್ರಾಕ್ಟೀಸ್ ಮಾಡಿರುವವರು ಹಾಗೂ ವಾರ್ಷಿಕ ಆದಾಯ ₹ 1 ಲಕ್ಷಕ್ಕಿಂತ ಕಡಿಮೆ ಇರುವವರು ತಿಂಗಳಿಗೆ ₹ 3,000 ಪಡೆಯಲು ಅರ್ಹರಾಗಿರುತ್ತಾರೆ.
ರಾಜ್ಯ ಸರ್ಕಾರ ತಾನು ಮಾರ್ಚ್ 2018ರಲ್ಲಿ ಹೊರಡಿಸಿದ್ದ ಆದೇಶದಂತೆ ಯೋಜನೆಯನ್ನು ಘೋಷಿಸಿ 2018ರ ಅಧಿಸೂಚನೆಯಲ್ಲಿ ಕಿರಿಯ ವಕೀಲರಿಗೆ ತಿಂಗಳಿಗೆ ₹5,000 ವೇತನ ನೀಡಲು ಯೋಜಿಸಲಾಗಿತ್ತು. ಆದರೆ 3 ವರ್ಷ ಕಳೆದರೂ ಯೋಜನೆ ಕಾರ್ಯಗತಗೊಳ್ಳದೇ ಇದ್ದುದರಿಂದ ವಕೀಲರೊಬ್ಬರು ಕೇರಳ ಹೈಕೋರ್ಟ್ ಮೊರೆ ಹೋಗಿದ್ದರು. ಆದೇಶ ಜಾರಿಗೆ ತರಲು ವಿಳಂಬ ಮಾಡಿದ್ದಕ್ಕಾಗಿ ವಕೀಲರ ಪರಿಷತ್ತನ್ನು ನ್ಯಾಯಾಲಯ ತರಾಟೆಗೆ ತೆಗೆದುಕೊಂಡಿತ್ತು.
ವಕೀಲ ವರ್ಗದಲ್ಲಿ ಮೂರು ವರ್ಷಕ್ಕಿಂತ ಕಡಿಮೆ ಪ್ರಾಕ್ಟೀಸ್ ಮಾಡಿರುವ ಮತ್ತು ವಾರ್ಷಿಕ ಆದಾಯ ₹1 ಲಕ್ಷವನ್ನು ಮೀರದ ವಕೀಲರಿಗೆ ತಿಂಗಳಿಗೆ ₹ 5,000 ವರೆಗೆ ಸ್ಟೈಪೆಂಡ್ ನೀಡಲು ಮಾರ್ಗಸೂಚಿಗಳನ್ನು ಡಿಸೆಂಬರ್ 2021ರಲ್ಲಿ ಪರಿಷತ್ತು ʼಕೇರಳ ವಕೀಲರ ಸ್ಟೈಪೆಂಡ್ ನಿಯಮಾವಳಿʼಗಳನ್ನು ಹೊರಡಿಸಿತ್ತು.
ಕೇರಳ ವಕೀಲರ ಕಲ್ಯಾಣ ನಿಧಿ ಕಾಯಿದೆ, 1980ರ ಸೆಕ್ಷನ್ 9ರ ಅಡಿಯಲ್ಲಿ ಇದನ್ನು ಮಾಡಲು ಅಧಿಕಾರ ಇರುವ ಟ್ರಸ್ಟಿ ಸಮಿತಿಯು ಕೇರಳ ವಕೀಲರ ಕಲ್ಯಾಣ ನಿಧಿಯಿಂದ ಸ್ಟೈಪೆಂಡ್ ಅನ್ನು ವಿತರಿಸಬಹುದು ಎಂದು ಷರತ್ತು ವಿಧಿಸಿತು.
ಈ ನಿಯಮಗಳನ್ನು ಸೂಚಿಸಿದ ನಂತರ, ಟ್ರಸ್ಟಿ ಸಮಿತಿಯು ರಾಜ್ಯ ಸರ್ಕಾರಕ್ಕೆ ಕೆಲವು ಶಿಫಾರಸುಗಳನ್ನು ಮಾಡಿತು. ಅವುಗಳ ಆಧಾರದ ಮೇಲೆ 3 ವರ್ಷಕ್ಕಿಂತ ಕಡಿಮೆ ವೃತ್ತಿ ಅನುಭವ ಇರುವ ವಕೀಲರಿಗೆ ಹಾಗೂ ₹1 ಲಕ್ಷಕ್ಕಿಂತ ಕಡಿಮೆ ವಾರ್ಷಿಕ ಆದಾಯ ಇರುವವರಿಗೆ ₹3,000 ಸ್ಟೈಪೆಂಡ್ ಪಾವತಿಸಲು ಜೂನ್ 2022 ರಲ್ಲಿ ಮತ್ತೊಂದು ಸರ್ಕಾರಿ ಆದೇಶ ಹೊರಡಿಸಲಾಯಿತು.ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಸೇರಿದವರಿಗೆ ವಾರ್ಷಿಕ ಆದಾಯ ಮಿತಿ ₹1 ಲಕ್ಷ ಅನ್ವಯಿಸುವುದಿಲ್ಲ ಎಂದು ಸರ್ಕಾರಿ ಆದೇಶ ಸ್ಪಷ್ಟಪಡಿಸಿತ್ತು.
ಅದಾದ 7 ತಿಂಗಳ ನಂತರ, ಅಂದರೆ ಇಂದು (ಶನಿವಾರ) ಯೋಜನೆಯನ್ನು ಉದ್ಘಾಟಿಸಲಾಯಿತು. ಸಮಾರಂಭದಲ್ಲಿ ಕೇರಳ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಮಣಿಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ರಾಜ್ಯ ಸರ್ಕಾರದ ಕಾನೂನು ಸಚಿವ ಪಿ.ರಾಜೀವ್ ಹಾಗೂ ರಾಜ್ಯ ಕಂದಾಯ ಸಚಿವ ಕೆ.ರಾಜನ್ ಗೌರವ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.