ದೇಶದ ಸಂವಿಧಾನ ಅಂಗೀಕಾರವಾಗಿ 75 ವರ್ಷಗಳು ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ನ್ಯಾಯಾಲಯದ ಕಾರ್ಯಕ್ರಮಗಳಲ್ಲಿ ಧಾರ್ಮಿಕ ಆಚರಣೆಗಳನ್ನು ಕೊನೆಗೊಳಿಸುವಂತೆ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಅಭಯ್ ಎಸ್ ಓಕಾ ಕರೆ ನೀಡಿದ್ದಾರೆ.
ಪುಣೆ ಜಿಲ್ಲೆಯ ಪಿಂಪ್ರಿ-ಚಿಂಚವಾಡದಲ್ಲಿ ಈಚೆಗೆ ನಡೆದ ನೂತನ ನ್ಯಾಯಾಲಯ ಕಟ್ಟಡದ ಶಂಕುಸ್ಥಾಪನೆ ಸಮಾರಂಭದ ವೇಳೆ, ಈ ಹಿಂದೆ ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯೂ ಆಗಿದ್ದ ಅವರು ಮಾತನಾಡಿದರು.
ಸಂವಿಧಾನದಲ್ಲಿರುವ ಜಾತ್ಯತೀತತೆಯ ಕಲ್ಪನೆಯನ್ನು ಪ್ರೋತ್ಸಾಹಿಸಬೇಕು ಮತ್ತು ನ್ಯಾಯಾಲಯ ಸಂಬಂಧಿತ ಕಾರ್ಯಕ್ರಮಗಳನ್ನು ಸಂವಿಧಾನ ಪೀಠಿಕೆಗೆ ನಮಿಸಿ ಆರಂಭಿಸಬಹುದು ಎಂದು ಸಲಹೆ ನೀಡಿದರು.
ನ್ಯಾ. ಓಕಾ ಅವರ ಭಾಷಣದ ಪ್ರಮುಖಾಂಶಗಳು
ಕೆಲವೊಮ್ಮೆ ನ್ಯಾಯಾಧೀಶರು ಅಹಿತಕರ ವಿಷಯಗಳನ್ನು ಹೇಳಬೇಕಾಗುತ್ತದೆ. ನಾನು ಸ್ವಲ್ಪ ಅಹಿತಕರವಾದದ್ದನ್ನು ಹೇಳಲಿದ್ದೇನೆ. ನ್ಯಾಯಾಲಯಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುವ ವೇಳೆ ನಾವು ಪೂಜೆ-ಅರ್ಚನೆಗಳನ್ನು ನಿಲ್ಲಿಸಬೇಕು.
ಬದಲಾಗಿ ಸಂವಿಧಾನದ ಪ್ರಸ್ತಾವನೆಯ ಪಟವನ್ನು ಇರಿಸಿಕೊಂಡು ಕಾರ್ಯಕ್ರಮ ಆರಂಭಕ್ಕೂ ಮುನ್ನ ಅದಕ್ಕೆ ನಮಿಸಬೇಕು.
ಸಂವಿಧಾನ 75 ವರ್ಷಗಳನ್ನು ಪೂರೈಸುತ್ತಿರುವ ಈ ಸಂದರ್ಭದಲ್ಲಿ ಅದರ ಘನತೆಯನ್ನು ಕಾಪಾಡಿಕೊಳ್ಳುವುದಕ್ಕಾಗಿ ನಾವು ಈ ಹೊಸ ರೂಢಿಯನ್ನು ಆರಂಭಿಸಬೇಕು.
ಸಂವಿಧಾನದ ಪೀಠಿಕೆಯಲ್ಲಿ 'ಜಾತ್ಯತೀತ' ಮತ್ತು 'ಪ್ರಜಾಪ್ರಭುತ್ವ' ಎಂಬ ಪದಗಳು ನನಗೆ ಬಹಳ ಮುಖ್ಯ.
ಡಾ. ಅಂಬೇಡ್ಕರ್ ಅವರು ನಮಗೆ ಆದರ್ಶನೀಯ ಸಂವಿಧಾನ ನೀಡಿದ್ದು ಅದರಲ್ಲಿ ಜಾತ್ಯತೀತತೆಯ ಉಲ್ಲೇಖವಿದೆ.
ನ್ಯಾಯಾಲಯ ವ್ಯವಸ್ಥೆ ಬ್ರಿಟಿಷರು ರೂಪುಗೊಳಿಸಿದ್ದರೂ ಅದು ಸಂವಿಧಾನದಿಂದ ನಡೆಯಲಿದ್ದು ನ್ಯಾಯಾಲಯಗಳನ್ನು ಸಂವಿಧಾನ ನೀಡಿದೆ.
ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿದ್ದ ಅವಧಿಯಲ್ಲಿ, ನ್ಯಾಯಾಲಯದ ಆವರಣದಲ್ಲಿ ಇಂತಹ ಧಾರ್ಮಿಕ ಆಚರಣೆಗಳನ್ನು ಕಡಿಮೆ ಮಾಡಲು ಯತ್ನಿಸಿದ್ದೆ. ಆದರೆ ಸಂಪೂರ್ಣ ತಡೆಯಲು ಸಾಧ್ಯವಾಗಲಿಲ್ಲ. ಆದರೆ ಸಂವಿಧಾನ ಅಂಗೀಕಾರವಾಗಿ 75 ವರ್ಷಗಳಾಗುತ್ತಿರುವ ಈ ಸಂದರ್ಭ ಜಾತ್ಯತೀತತೆಯನ್ನು ಮುನ್ನಡೆಸಲು ಸಕಾಲವಾಗಿದೆ.