Stray dogs
Stray dogs 
ಸುದ್ದಿಗಳು

ಬೀದಿ ನಾಯಿಗಳ ಹಾವಳಿ: ಸಾರ್ವಜನಿಕ ಸ್ಥಳಗಳಲ್ಲಿ ಆಹಾರ ನೀಡುವ ನಾಗರಿಕರಿಗೆ ದಂಡ ವಿಧಿಸಲು ಬಾಂಬೆ ಹೈಕೋರ್ಟ್ ಸೂಚನೆ

Bar & Bench

ಬೀದಿ ನಾಯಿಗಳ ಹಾವಳಿ ತಪ್ಪಿಸುವ ಸಲುವಾಗಿ ರಸ್ತೆ ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಅವುಗಳಿಗೆ ಆಹಾರ ನೀಡುವವರಿಗೆ ₹ 200ಕ್ಕಿಂತ ಹೆಚ್ಚಿಲ್ಲದಂತೆ ದಂಡ ವಿಧಿಸಬೇಕು ಎಂದು ಅಧಿಕಾರಿಗಳಿಗೆ ಬಾಂಬೆ ಹೈಕೋರ್ಟ್‌ ನಾಗಪುರ ಪೀಠ ಇತ್ತೀಚೆಗೆ ಆದೇಶಿಸಿದೆ [ವಿಜಯ ಶಂಕರ್‌ ರಾವ್‌ ತಲೇವರ್‌ ಮತ್ತು ಮಹಾರಾಷ್ಟ್ರ ಸರ್ಕಾರ ನಡುವಣ ಪ್ರಕರಣ].

ಬೀದಿಗಳಲ್ಲಿ ಆಹಾರ ನೀಡುವ ಕೆಲವು ನಾಗರಿಕರ ಬೇಜವಾಬ್ದಾರಿ ವರ್ತನೆಯಿಂದಾಗಿ ಅಧಿಕಾರಿಗಳ ಕ್ರಮದ ಹೊರತಾಗಿಯೂ ನಾಗಪುರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಿದೆ ಎಂದು ನ್ಯಾಯಮೂರ್ತಿಗಳಾದ ಸುನಿಲ್ ಶುಕ್ರೆ ಮತ್ತು ಅನಿಲ್ ಪನ್ಸಾರೆ ಅವರಿದ್ದ ವಿಭಾಗೀಯ ಪೀಠ ಹೇಳಿತು.

“ತಮ್ಮನ್ನು ತಾವು ಬೀದಿ ನಾಯಿಗಳ ಬಗ್ಗೆ ಸಹಾನುಭೂತಿಯುಳ್ಳವರು, ಸ್ನೇಹಿತರು ಎಂದು ಈ ಜನ ಬಿಂಬಿಸಿಕೊಳ್ಳುತ್ತಾರೆ. ಸಮಾಜಕ್ಕೆ ತಾವು ಎಸಗುತ್ತಿರುವ ದೊಡ್ಡ ಹಾನಿ ಲೆಕ್ಕಿಸದೆ ಬೀದಿ ನಾಯಿಗಳಿಗೆ ಆಹಾರ ಮತ್ತಿತರ ಪದಾರ್ಥಗಳನ್ನು ನೀಡುತ್ತಾರೆ. ಈ ಬೀದಿನಾಯಿಗಳ ಪ್ರೇಮಿಗಳು ತಾವು ಮಾಡಿದ ದಾನದ ವಿನಾಶಕಾರಿ ಪರಿಣಾಮ ಅರಿಯುವುದಿಲ್ಲ. ಪ್ರಾಣಿಪ್ರೇಮಿಗಳು ನೀಡುವ ಆಹಾರ ಬಹುತೇಕ ಬೀದಿನಾಯಿಗಳನ್ನು ಉಗ್ರಗೊಳಿಸಿ ಅವು ಮನುಷ್ಯರು ಅದರಲ್ಲಿಯೂ ವಿಶೇಷವಾಗಿ ಮಕ್ಕಳ ಬಗ್ಗೆ ಇನ್ನಷ್ಟು ಹಿಂಸಾತ್ಮಕವಾಗಿ ನಡೆದುಕೊಳ್ಳುವಂತೆ ಮಾಡುತ್ತದೆ ಎಂದು ನ್ಯಾಯಾಲಯ ಹೇಳಿದೆ.

“ಬೀದಿನಾಯಿಗಳ ರಕ್ಷಣೆ ಮತ್ತು ಅವುಗಳ ಒಳಿತಿನ ಬಗ್ಗೆ ಕಾಳಜಿ ಮಾಡುವವರು ಅವುಗಳನ್ನು ದತ್ತುತೆಗೆದುಕೊಂಡು ಮನೆಗೆ ಒಯ್ಯಬೇಕು ಅಥವಾ ಶ್ವಾನ ಕೇಂದ್ರಗಳಲ್ಲಾದರೂ ಇರಿಸಿ ಅವುಗಳ ನೋಂದಣಿ ಮತ್ತು ನಿರ್ವಹಣಾ ವೆಚ್ಚ ಭರಿಸಬೇಕು” ಎಂದು ಪೀಠ ಹೇಳಿದೆ.

“ನಿಜವಾದ ದಾನ ಎಂಬುದು ಸಂಪೂರ್ಣ ಕಾಳಜಿ ವಹಿಸುವುದರಲ್ಲಿ ಇದೆ. ಬರೀ ಆಹಾರ ನೀಡಿ ತಮ್ಮನ್ನು ತಾವೇ ರಕ್ಷಿಸಿಕೊಳ್ಳಲಿ ಎಂದು ಆ ಬಡಪಾಯಿ ಜೀವಿಗಳನ್ನು ಬಿಡುವುದರಲ್ಲಿ ಅಲ್ಲ ಎಂಬುದನ್ನು ಅವರು ಅರ್ಥಮಾಡಿಕೊಳ್ಳಬೇಕಿದೆ. ಬೀದಿ ನಾಯಿಗಳ ಬಗ್ಗೆ ನಿಜವಾದ ಸಹಾನುಭೂತಿ ಇರುವಂತಹ ಪರೋಪಕಾರಿ ಮಾಡಬೇಕಾದ ಮೂಲಭೂತ ಕರ್ತವ್ಯ ಇದು. ಬೀದಿನಾಯಿಗಳ ಗೆಳೆಯರು ಈ ಮೂಲಭೂತ ಕರ್ತವ್ಯ ಮಾಡುವುದಕ್ಕೆ ಹಿಂಜರಿಯುತ್ತಾರೆ. ಪರಿಣಾಮ, ಬೀದಿನಾಯಿಗಳ ಸಂಖ್ಯೆ ಎಗ್ಗಿಲ್ಲದೆ ಬೆಳೆದು ಉಪದ್ರವ ನೀಡುತ್ತವೆ” ಎಂದು ನ್ಯಾಯಮೂರ್ತಿಗಳು ತಿಳಿಸಿದ್ದಾರೆ.

ಹೀಗಾಗಿ ನಾಗಪುರ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಜನ ಸಾರ್ವಜನಿಕ ಸ್ಥಳಗಳು, ಉದ್ಯಾನಗಳು ಇತ್ಯಾದಿಗಳಲ್ಲಿ ಬೀದಿ ನಾಯಿಗಳಿಗೆ ಆಹಾರ ನೀಡಬಾರದು ಎಂದು ಪೀಠ ನಿರ್ದೇಶಿಸಿದೆ.

"ಬೀದಿನಾಯಿಗಳಿಗೆ ಆಹಾರ ನೀಡಲು ಯಾವುದೇ ವ್ಯಕ್ತಿಗೆ ಆಸಕ್ತಿ ಇದ್ದರೆ, ಅವರು ಮೊದಲು ಬೀದಿನಾಯಿಯನ್ನು ದತ್ತು ಪಡೆದು,  ಮನೆಗೆ ಒಯ್ಯಬೇಕು. ಪುರಸಭೆ ಅಧಿಕಾರಿಗಳಲ್ಲಿ ನೋಂದಾಯಿಸಿ ಅಥವಾ ಕೆಲ ಶ್ವಾನ ಆಶ್ರಯ ಗೃಹಗಳಲ್ಲಿ ಇರಿಸಿ ನಂತರ ತಮ್ಮ ಪ್ರೀತಿ- ವಾತ್ಸಲ್ಯ ತೋರಿಸಸಬೇಕು. ನಾಯಿಯ  ಬಗ್ಗೆ ಎಲ್ಲಾ ರೀತಿಯ ವೈಯಕ್ತಿಕ ಕಾಳಜಿ ತೆಗೆದುಕೊಂಡು ಅದನ್ನು ಪೋಷಿಸಬಹುದು. ಈ ನಿರ್ದೇಶನ ಉಲ್ಲಂಘಿಸುವವರಿಗೆ ನಾಗಪುರ ಪಾಲಿಕೆ ಪ್ರತಿ ಉಲ್ಲಂಘನೆಗಾಗಿ ರೂ.200/- ಮೀರದಂತೆ ಸೂಕ್ತ ದಂಡ ವಿಧಿಸಬೇಕು "ಎಂದು ಪೀಠ ಆದೇಶಿಸಿದೆ.

“ಮಹಾರಾಷ್ಟ್ರ ಪೊಲೀಸ್ ಕಾಯಿದೆಯ ಸೆಕ್ಷನ್ 44ರ ಅಡಿಯಲ್ಲಿ (ಅಧಿಕಾರಿಗಳು) ತೆಗೆದುಕೊಳ್ಳಬಹುದಾದ ಕ್ರಮ ಬೀದಿನಾಯಿಗಳನ್ನು ನಾಶಪಡಿಸುವಂತೆ ಇರದೆ ನಿಗದಿತ ಕಾರ್ಯವಿಧಾನ ಬಳಸಿ ಅವುಗಳನ್ನು ಹಿಡಿಯುವಂತಿರಬೇಕು. ಬಳಿಕ ಸೂಕ್ತ ನಿಯೋಜನೆ/ ವಿಲೇವಾರಿಗಾಗಿ ನಿರ್ವಹಣಾ ಸಮಿತಿಗೆ ಅವುಗಳನ್ನು ಹಸ್ತಾಂತರಿಸಬೇಕು” ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.