ಬೀದಿ ಬದಿ ಆಹಾರ ವ್ಯಾಪಾರಿಗಳು ಹಾಗೂ ರೆಸ್ಟರಂಟ್‌ಗಳು ಆರೋಗ್ಯ ಮತ್ತು ಸುರಕ್ಷತಾ ಮಾನದಂಡ ನಿಯಮಗಳನ್ನು ಚಾಚೂ ತಪ್ಪದೆ ಅನುಸರಣೆ ಮಾಡುವಂತಾಗಬೇಕು ಮತ್ತು ಈ ನಿಯಮಗಳ ಕಟ್ಟುನಿಟ್ಟಿನ ಅನುಷ್ಠಾನದ ಬಗ್ಗೆ ನಿಗಾ ಇರಿಸುವುದಕ್ಕೆ ಸೂಕ್ತ ಕಾರ್ಯ ವಿಧಾನವೊಂದನ್ನು ರೂಪಿಸಬೇಕು ಎಂದು ಈಚೆಗೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಮಹತ್ವದ ನಿರ್ದೇಶನ ನೀಡಿದೆ.
ಕರ್ನಾಟಕ ಪ್ರದೇಶ ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳ ಸಂಘದ ಗೌರವ ಕಾರ್ಯದರ್ಶಿ ನಾಗರಾಜ ಧನ್ಯ ಮತ್ತು ಬೃಹತ್ ಬೆಂಗಳೂರು ಹೋಟೆಲ್‌ಗಳ ಸಂಘದ ಅಧ್ಯಕ್ಷ ಕೆ ಎನ್ ವಾಸುದೇವ ಅಡಿಗ ಸಲ್ಲಿಸಿದ್ದಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ಇತ್ಯರ್ಥಪಡಿಸಿದೆ.
“ಆರೋಗ್ಯ ಮಾನದಂಡಗಳ ಅವಶ್ಯಕತೆ ಮತ್ತು ಆರೋಗ್ಯ ಅಪಾಯಗಳ ಎಚ್ಚರಿಕೆಯ ಕಾರಣದಿಂದಾಗಿ, ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಕಾಯಿದೆ-2006ರ ನಿಯಮಗಳ ಅಡಿಯಲ್ಲಿ ಸಣ್ಣ, ಮಧ್ಯಮ ಮತ್ತು ಬೃಹತ್ ರೆಸ್ಟರಂಟ್‌ಗಳಿಗೆ ತ್ರಿಪಕ್ಷೀಯ ಮಾರ್ಗಸೂಚಿ ರೂಪಿಸಬೇಕು” ಎಂದು ಪೀಠ ತಾಕೀತು ಮಾಡಿದೆ.
“ಭಾರತದಲ್ಲಿ ಬೀದಿ ಬದಿ ಆಹಾರಕ್ಕೆ ಅದರದೇ ಆದ ಅಪರೂಪದ ಸಾಂಸ್ಕೃತಿಕ ಆಯಾಮವಿದೆ. ರಸ್ತೆಬದಿಯ ಸಾಮಾನ್ಯ ಅಂಗಡಿಗಳಿಂದ ಹಿಡಿದು ಆಧುನಿಕ ರೆಸ್ಟರಂಟ್‌ಗಳು, ಭಾರತೀಯ ಪಾಕಪದ್ಧತಿಯ ವಿಶೇಷ ಸ್ವಾದ ಹೊಂದಿದ್ದು ಚೈತನ್ಯಶೀಲ ಅಭಿವೃದ್ಧಿ ಉದ್ಯಮದ ಸಂಕೇತವಾಗಿದೆ. ಆದ್ದರಿಂದ, ಆಹಾರ ವ್ಯವಹಾರಗಳ ಪರವಾನಗಿ ಮತ್ತು ನೋಂದಣಿ ನಿಯಮಗಳು-2011 ಈ ಎಲ್ಲಾ ಉದ್ಯಮಗಳ ವಾರ್ಷಿಕ ವಹಿವಾಟಿನ ಆಧಾರದಲ್ಲಿ ಸಣ್ಣ ವ್ಯವಹಾರವನ್ನು ದೊಡ್ಡ ರೆಸ್ಟರಂಟ್‌ನಿಂದ ಆರ್ಥಿಕ ಮಾನದಂಡದ ಮೂಲಕ ಪ್ರತ್ಯೇಕಿಸುತ್ತವೆ ಎಂಬುದು ಗಮನಾರ್ಹ" ಎಂದು ಪೀಠ ತೀರ್ಪಿನಲ್ಲಿ ಉಲ್ಲೇಖಿಸಿದೆ.
“ಮಾನವನ ಆಹಾರ ಸೇವನೆ ಎಲ್ಲಿಯವರೆಗೆ ಜೀವಂತವಾಗಿರುತ್ತದೆಯೋ ಅಲ್ಲಿಯವರೆಗೂ ಸೇವಿಸುವ ಆಹಾರ ಆರೋಗ್ಯಕರವಾಗಿ ಇರಬೇಕು. ಆರೋಗ್ಯ ಕಾರಣಗಳಿಗಾಗಿ, ಪ್ರತಿಯೊಬ್ಬ ನಾಗರಿಕನಿಗೂ ಆಹಾರದ ಗುಣಮಟ್ಟವನ್ನು ಕಾಪಾಡಿಕೊಳ್ಳುವುದು ಅತ್ಯಗತ್ಯ” ಎಂದು ಪೀಠ ಅಭಿಪ್ರಾಯಪಟ್ಟಿದೆ.
“ಹೀಗಾಗಿ, ಅರ್ಜಿದಾರರು ಆಕ್ಷೇಪಿಸಿರುವ ನಿಬಂಧನೆಗಳನ್ನು ಅಸಾಂವಿಧಾನಿಕ ಎಂದು ನಿರ್ಣಯಿಸಿ ಅವುಗಳನ್ನು ರದ್ದುಗೊಳಿಸಲು ಯಾವುದೇ ಕಾರಣ ಇಲ್ಲ” ಎಂದು ಸ್ಪಷ್ಟಪಡಿಸಿದೆ.
ಆಹಾರ ಸುರಕ್ಷತೆ ದೃಷ್ಟಿಯಿಂದ ನಿಯಮಗಳನ್ನು ರಚಿಸಬೇಕು ಮತ್ತು ಈ ನಿಟ್ಟಿನಲ್ಲಿ ಸೂಕ್ತ ಮಾರ್ಗಸೂಚಿಗಳನ್ನು ರೂಪಿಸಬೇಕು ಎಂದು ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳಿಗೆ ನಿರ್ದೇಶನ ನೀಡಿತ್ತು. ಈ ಸಂಬಂಧ ಆಹಾರ ಸುರಕ್ಷಾ ಆಯುಕ್ತ ಮತ್ತು ಆರೋಗ್ಯ, ಕುಟುಂಬ ಕಲ್ಯಾಣ ಸೇವೆಗಳ ಇಲಾಖೆ 2012ರ ಮಾರ್ಚ್ 13ರಂದು ಅಧಿಸೂಚನೆ ಹೊರಡಿಸಿತ್ತು. ಈ ಅಧಿಸೂಚನೆಯನ್ನು ರದ್ದುಪಡಿಸಬೇಕು ಎಂದು ಕೋರಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಆಹಾರ ಸುರಕ್ಷತೆ ಮತ್ತು ಮಾನದಂಡಗಳ ನಿಯಂತ್ರಣ, (ಪ್ಯಾಕೇಜಿಂಗ್ ಮತ್ತು ಲೇಬಲಿಂಗ್) ನಿಯಮಗಳು-2011, ಆಹಾರ ಸುರಕ್ಷತೆ ಮತ್ತು ಮಾನದಂಡಗಳು (ಆಹಾರ ಉತ್ಪನ್ನಗಳ ಮಾನದಂಡಗಳು ಮತ್ತು ಆಹಾರ ಸೇರ್ಪಡೆಗಳ ನಿಯಮಗಳು-2011) ಮತ್ತು ಆಹಾರ ಸುರಕ್ಷತೆ ಮತ್ತು ಪ್ರಮಾಣಿತ ಕಾಯಿದೆ-2006ರ 50 ರಿಂದ 65 ರವರೆಗಿನ ಸೆಕ್ಷನ್‌ಗಳು ಅಸಾಂವಿಧಾನಿಕ ಎಂದು ಆಕ್ಷೇಪಿಸಿದ್ದರು. ಮಾನದಂಡಗಳನ್ಮು ಅನ್ವಯಿಸಲು ನಮಗೆ ಸಾಧ್ಯವಿಲ್ಲ ಎಂದು ಅರ್ಜಿದಾರ ಹೋಟೆಲ್ ಸಂಘಗಳು ಪ್ರತಿಪಾದಿಸಿದ್ದವು.