ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯದ ಬಗೆಗಿನ ಕಳವಳ ನಿವಾರಿಸುವುದಕ್ಕಾಗಿ ಮತ್ತು ವಿದ್ಯಾರ್ಥಿಗಳ ಆತ್ಮಹತ್ಯೆಗಳನ್ನು ತಡೆಗಟ್ಟಲು ಹತ್ತು ಸದಸ್ಯರ ರಾಷ್ಟ್ರೀಯ ಕಾರ್ಯಪಡೆ ರಚಿಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ [ಅಮಿತ್ ಕುಮಾರ್ ಮತ್ತು ಭಾರತ ಒಕ್ಕೂಟ ನಡುವಣ ಪ್ರಕರಣ].
ಶಿಕ್ಷಣ ಸಂಸ್ಥೆಗಳಲ್ಲಿ ಹೆಚ್ಚುತ್ತಿರುವ ವಿದ್ಯಾರ್ಥಿಗಳ ಆತ್ಮಹತ್ಯೆ ಪ್ರಕರಣಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳಾದ ಜೆ ಬಿ ಪಾರ್ದಿವಾಲಾ ಮತ್ತು ಆರ್ ಮಹಾದೇವನ್ ಅವರಿದ್ದ ಪೀಠ ವಿದ್ಯಾರ್ಥಿಗಳ ಆತ್ಮಹತ್ಯೆ ಸಂಖ್ಯೆ ರೈತರ ಆತ್ಮಹತ್ಯೆ ಪ್ರಕರಣಗಳನ್ನು ಮೀರಿಸುತ್ತಿದೆ ಎಂದು ಕಳವಳ ವ್ಯಕ್ತಪಡಿಸಿತು.
"2021ರ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋದ ವರದಿಯಲ್ಲಿರುವ ಅಂಕಿಅಂಶಗಳು ದೇಶದಲ್ಲಿ 13,000 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಕಠೋರ ವಾಸ್ತವವನ್ನು ಎತ್ತಿ ತೋರಿಸುತ್ತವೆ. ಇದು ಒಂದು ದಶಕದ ಹಿಂದೆ ಅದಾಗಲೇ ಇದ್ದ ಆತಂಕಕಾರಿ ಸಂಖ್ಯೆಗಿಂತ ಎರಡು ಪಟ್ಟು ಹೆಚ್ಚು. ವಿದ್ಯಾರ್ಥಿಗಳ ಆತ್ಮಹತ್ಯೆ ಸಂಖ್ಯೆ ಈಗ ಕೃಷಿ ಸಂಕಷ್ಟದಿಂದಾಗಿ ಉಂಟಾಗುವ ರೈತರ ಆತ್ಮಹತ್ಯೆಗಳನ್ನು ಮೀರಿದ್ದು 2024ನೇ ಸಾಲೊಂದರಲ್ಲಿಯೇ ಶೇ. ನಾಲ್ಕರಷ್ಟು ಏರಿಕೆಯಾಗಿದೆ " ಎಂದು ನ್ಯಾಯಾಲಯ ಹೇಳಿದೆ.
ಕೃಷಿ ಬಿಕ್ಕಟ್ಟಿನಿಂದಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮಾಣಕ್ಕಿಂತಲೂ ವಿದ್ಯಾರ್ಥಿಗಳ ಆತ್ಮಹತ್ಯೆ ಸಂಖ್ಯೆ ಹೆಚ್ಚಿದೆ.ಸುಪ್ರೀಂ ಕೋರ್ಟ್
ದೆಹಲಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ (ಐಐಟಿ ದೆಹಲಿ) ಹಿಂದುಳಿದ ಸಮುದಾಯಗಳ ಇಬ್ಬರು ವಿದ್ಯಾರ್ಥಿಗಳ ಸಾವಿನ ಪ್ರಕರಣದ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು. ಇವು ಆತ್ಮಹತ್ಯೆಯಲ್ಲಿ, ಕೊಲೆ ಪ್ರಕರಣಗಳು ಎಂದು ಪೋಷಕರು ದೂರಿದ್ದರು. ಎರಡೂ ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್ ಸೋಮವಾರ ಆದೇಶಿಸಿತು.
ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣಗಳು ಪ್ರತ್ಯೇಕ ಘಟನೆಗಳಲ್ಲ ಎಂದ ನ್ಯಾಯಾಲಯ ಸಮಸ್ಯೆ ಪರಿಶೀಲಿಸುವುದಕ್ಕಾಗಿ ಕಾರ್ಯಪಡೆ ರಚಿಸಿತು. ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಸ್ ರವೀಂದ್ರ ಭಟ್ ಕಾರ್ಯಪಡೆಯ ಅಧ್ಯಕ್ಷರಾಗಿದ್ದಾರೆ. ಸದಸ್ಯರ ವಿವರ ಇಂತಿದೆ:
ಡಾ. ಅಲೋಕ್ ಸರಿನ್ , ಮನೋವೈದ್ಯರು, ಸೀತಾರಾಮ್ ಭಾರ್ತಿಯಾ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆ, ನವದೆಹಲಿ;
ಪ್ರೊ. ಮೇರಿ ಇ ಜಾನ್ (ನಿವೃತ್ತ), ಮಾಜಿ ನಿರ್ದೇಶಕಿ, ಮಹಿಳಾ ಅಭಿವೃದ್ಧಿ ಅಧ್ಯಯನ ಕೇಂದ್ರ, ನವದೆಹಲಿ;
ಅರ್ಮಾನ್ ಅಲಿ , ಕಾರ್ಯನಿರ್ವಾಹಕ ನಿರ್ದೇಶಕ, ಅಂಗವಿಕಲರಿಗಾಗಿ ಉದ್ಯೋಗ ಉತ್ತೇಜನ ರಾಷ್ಟ್ರೀಯ ಕೇಂದ್ರ;
ಪ್ರೊ. ರಾಜೇಂದರ್ ಕಚ್ರೂ , ಸ್ಥಾಪಕ, ಅಮನ್ ಸತ್ಯ ಕಚ್ರೂ ಟ್ರಸ್ಟ್;
ನವದೆಹಲಿಯ ಹಮ್ದರ್ದ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಅಂಡ್ ರಿಸರ್ಚ್‌ನಲ್ಲಿ ಸಮುದಾಯ ಔಷಧ ವಿಭಾಗದ ಪ್ರಾಧ್ಯಾಪಕಿ ಡಾ. ಅಕ್ಸಾ ಶೇಖ್ ;
ಡಾ. ಸೀಮಾ ಮೆಹ್ರೋತ್ರಾ , ಕ್ಲಿನಿಕಲ್ ಮನಶಾಸ್ತ್ರ ಪ್ರಾಧ್ಯಾಪಕಿ, ನಿಮ್ಹಾನ್ಸ್;
ನವದೆಹಲಿಯ ಮಾನವ ಅಭಿವೃದ್ಧಿ ಸಂಸ್ಥೆ (IHD)ಯಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿರುವ ಪ್ರೊ. ವರ್ಜೀನಿಯಸ್ ಕ್ಸಾಕ್ಸಾ ;
ನವದೆಹಲಿಯ ರಾಷ್ಟ್ರೀಯ ಶೈಕ್ಷಣಿಕ ಯೋಜನೆ ಮತ್ತು ಆಡಳಿತ ವಿಶ್ವವಿದ್ಯಾಲಯದ ಉನ್ನತ ಶಿಕ್ಷಣ ನೀತಿ ಸಂಶೋಧನಾ ಕೇಂದ್ರದ ಅಸೋಸಿಯೇಟ್ ಪ್ರೊಫೆಸರ್ ಡಾ. ನಿಧಿ ಎಸ್ ಸಭರ್ವಾಲ್ ;
ಹಿರಿಯ ವಕೀಲೆ ಅಪರ್ಣಾ ಭಟ್ (ಪ್ರಕರಣದ ಅಮಿಕಸ್ ಕ್ಯೂರಿ)
ವಿದ್ಯಾರ್ಥಿಗಳ ಆತ್ಮಹತ್ಯೆಗೆ ಕಾರಣಗಳನ್ನು ಗುರುತಿಸಲು ಮತ್ತು ರ‍್ಯಾಗಿಂಗ್, ತಾರತಮ್ಯ ಇತ್ಯಾದಿಗಳನ್ನು ತಡೆಯಲೆಂದು ಇರುವ ಕಾಯಿದೆಗಳ ಪರಿಣಾಮಕಾರಿತ್ವ ಅಳೆಯಲು ಕಾರ್ಯಪಡೆಗೆ ಸೂಚಿಸಲಾಗಿದೆ. ನಾಲ್ಕು ತಿಂಗಳೊಳಗೆ ಮಧ್ಯಂತರ ವರದಿ ಮತ್ತು ನಂತರದ ಎಂಟು ತಿಂಗಳೊಳಗೆ ಅಂತಿಮ ವರದಿ ಸಲ್ಲಿಸುವಂತೆ ನ್ಯಾಯಾಲಯ ಕಾರ್ಯಪಡೆಗೆ ಆದೇಶಿಸಿದೆ.