ಸುಬ್ರಮಣಿಯನ್ ಸ್ವಾಮಿ, ದೆಹಲಿ ಹೈಕೋರ್ಟ್ 
ಸುದ್ದಿಗಳು

ಆಕ್ಸಿಸ್ ಬ್ಯಾಂಕ್- ಮ್ಯಾಕ್ಸ್‌ ಲೈಫ್‌ ₹ 5,100 ಕೋಟಿ ಹಗರಣ: ದೆಹಲಿ ಹೈಕೋರ್ಟ್ ಮೆಟ್ಟಿಲೇರಿದ ಸುಬ್ರಮಣಿಯನ್ ಸ್ವಾಮಿ

ವಂಚನೆಯ ಬಗ್ಗೆ ತಜ್ಞರ ಸಮಿತಿ ತನಿಖೆ ನಡೆಸಬೇಕೆಂದು ಸ್ವಾಮಿ ಕೋರಿದ್ದಾರೆ.

Bar & Bench

ಮ್ಯಾಕ್ಸ್ ಲೈಫ್ ಇನ್ಶೂರೆನ್ಸ್ ಷೇರುಗಳ ವಹಿವಾಟಿನ ಮೂಲಕ ಆಕ್ಸಿಸ್ ಬ್ಯಾಂಕ್‌ನಲ್ಲಿ ಸುಮಾರು 5,100 ಕೋಟಿ ರೂಪಾಯಿ ಹಗರಣ ನಡೆದಿದೆ ಎಂದು ಆರೋಪಿಸಿ ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಅವರು ದೆಹಲಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದಾರೆ (ಡಾ.ಸುಬ್ರಮಣಿಯನ್ ಸ್ವಾಮಿ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ).

ಮ್ಯಾಕ್ಸ್ ಲೈಫ್ ಇನ್ಶೂರೆನ್ಸ್ ಮತ್ತು ಮ್ಯಾಕ್ಸ್ ಫೈನಾನ್ಷಿಯಲ್ ಸರ್ವೀಸಸ್ ತಮ್ಮ ಷೇರುದಾರರಾದ ಆಕ್ಸಿಸ್ ಬ್ಯಾಂಕ್ ಲಿಮಿಟೆಡ್ ಮತ್ತು ಅದರ ಸಮೂಹ ಕಂಪನಿಗಳಾದ ಆಕ್ಸಿಸ್ ಸೆಕ್ಯುರಿಟೀಸ್ ಲಿಮಿಟೆಡ್ ಹಾಗೂ ಆಕ್ಸಿಸ್ ಕ್ಯಾಪಿಟಲ್ ಲಿಮಿಟೆಡ್‌ಗೆ ಮ್ಯಾಕ್ಸ್ ಲೈಫ್‌ನ ಈಕ್ವಿಟಿ ಷೇರುಗಳ ಖರೀದಿ ಮತ್ತು ಮಾರಾಟದಿಂದ ಅನಗತ್ಯ ಲಾಭ ಗಳಿಸಲು ಅವಕಾಶ ಮಾಡಿಕೊಟ್ಟಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಈ ವಹಿವಾಟುಗಳು ಭಾರತೀಯ ವಿಮಾ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ (ಐಆರ್‌ಡಿಎಐ) ಕಡ್ಡಾಯ ನಿರ್ದೇಶನಗಳನ್ನು ಉಲ್ಲಂಘಿಸಿವೆ. ಆದ್ದರಿಂದ, ವಂಚನೆಯ ಬಗ್ಗೆ ತಜ್ಞರ ಸಮಿತಿ ತನಿಖೆ ನಡೆಸಬೇಕೆಂದು ಸ್ವಾಮಿ ಕೋರಿದ್ದಾರೆ.

ಹಂಗಾಮಿ ಮುಖ್ಯ ನ್ಯಾಯಮೂರ್ತಿ ಮನಮೋಹನ್ ಮತ್ತು ನ್ಯಾಯಮೂರ್ತಿ ಮನ್‌ಮೀತ್‌ ಪ್ರೀತಮ್ ಸಿಂಗ್ ಅರೋರಾ ಅವರಿದ್ದ ವಿಭಾಗೀಯ ಪೀಠ ಇಂದು ಅರ್ಜಿಯ ವಿಚಾರಣೆ ನಡೆಸಿತು.

ಸ್ವಾಮಿ ಪರ ವಾದ ಮಂಡಿಸಿದ ಹಿರಿಯ ವಕೀಲ ರಾಜಶೇಖರ್ ರಾವ್ , ಸಣ್ಣ ಅಪರಾಧಗಳಿಗೂ ಕ್ರಮ ಕೈಗೊಳ್ಳುವ ಜಾರಿ ನಿರ್ದೇಶನಾಲಯ (ಇ ಡಿ) ಒಟ್ಟು ರೂ 5,100 ಕೋಟಿಗಿಂತ ಹೆಚ್ಚಿನ ಮೊತ್ತದ ಈ ಹಗರಣಕ್ಕೆ ಸಂಬಂಧಿಸಿದಂತೆ ಏನನ್ನೂ ಮಾಡಿಲ್ಲ ಎಂದು ವಾದಿಸಿದರು.

ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆ ಇರುವ ಷೇರುಗಳನ್ನು ಪ್ರತಿ ಷೇರಿಗೆ ರೂ.31.51/ರೂ.32.12 ಬೆಲೆಗೆ ಆಕ್ಸಿಸ್‌ ಸಮೂಹ ಸಂಸ್ಥೆಗಳು ರೂ.736 ಕೋಟಿ ನೀಡಿ ಖರೀದಿಸಿವೆ. ಶೇ.12 ಪ್ರಮಾಣದಷ್ಟು ಷೇರುಗಳನ್ನು ಈ ಬೆಲೆಗೆ ಖರೀದಿಸಲಾಗಿದೆ. ಹೀಗೆ ಅಪಾರದರ್ಶಕ ಖರೀದಿಯ ಮೂಲಕ ಸುಮಾರು 4000 ಕೋಟಿ ರೂಪಾಯಿಗಳ ಲಾಭವನ್ನು ಅಕ್ರಮವಾಗಿ ಹೊಂದಲಾಗಿದೆ ಎಂದು ಆರೋಪಿಸಿದರು.

ಆಕ್ಸಿಸ್ ಬ್ಯಾಂಕ್ ಪರವಾಗಿ ಹಾಜರಾದ ಹಿರಿಯ ವಕೀಲ ಮುಕುಲ್ ರೋಹಟಗಿ , ಅರ್ಜಿಯ ಪ್ರತಿಯನ್ನು ತನಗೆ ನೀಡಿಲ್ಲ ಎಂದು ಹೇಳಿದರು.

ಮನವಿಯ ಪ್ರತಿಯನ್ನು ರೋಹಟಗಿ ಅವರಿಗೆ ಒದಗಿಸುವಂತೆ ಸ್ವಾಮಿ ಪರ ವಕೀಲರಿಗೆ ಸೂಚಿಸಿದ ನ್ಯಾಯಾಲಯ ಪ್ರಕರಣವನ್ನು ಮಾರ್ಚ್ 13ಕ್ಕೆ ಮುಂದೂಡಿತು.