K Sudhakar and Pradeep Eshwar 
ಸುದ್ದಿಗಳು

ಪ್ರದೀಪ್‌ ಈಶ್ವರ್‌ ವಿರುದ್ಧ ಮಾನಹಾನಿ ದಾವೆ ದಾಖಲಿಸಲು ನ್ಯಾಯಾಲಯದ ಮೆಟ್ಟಿಲೇರಿದ ಮಾಜಿ ಸಚಿವ ಸುಧಾಕರ್

ಪ್ರದೀಪ್‌ ಈಶ್ವರ್‌ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 36, 37, 109, 112, 113, 114, 117, 120ಬಿ, 388, 500, 501. 504, 505, 506 ಅಡಿ ಪ್ರಕರಣ ದಾಖಲಿಸಲು ಆದೇಶಿಸಬೇಕು ಎಂದು ಸುಧಾಕರ್‌ ಕೋರಿದ್ದಾರೆ.

Siddesh M S

ತನ್ನ ವಿರುದ್ಧ ಸಾರ್ವಜನಿಕವಾಗಿ ಇಲ್ಲಸಲ್ಲದ, ಪ್ರಚೋದನಾಕಾರಿ ಹೇಳಿಕೆ ನೀಡುವ ಮೂಲಕ ಮಾನಹಾನಿ ಮಾಡುತ್ತಿರುವ ಕಾಂಗ್ರೆಸ್‌ ಶಾಸಕ ಪ್ರದೀಪ್‌ ಈಶ್ವರ್‌ ಅಯ್ಯರ್‌ ಪಿ ಇ ಅವರ ವಿರುದ್ದ ಕ್ರಿಮಿನಲ್‌ ಮಾನಹಾನಿ ಸೇರಿದಂತೆ ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಿಬೇಕು ಎಂದು ಕೋರಿ ಮಾಜಿ ಸಚಿವ ಡಾ. ಕೆ ಸುಧಾಕರ್‌ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ (ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌) ಖಾಸಗಿ ದೂರು ದಾಖಲಿಸಿದ್ದಾರೆ. ಅರ್ಜಿಯು ಇನ್ನಷ್ಟೇ ವಿಚಾರಣೆಗೆ ನಿಗದಿಯಾಗಬೇಕಿದೆ.

ಪ್ರದೀಪ್‌ ಈಶ್ವರ್‌ ಪದೇಪದೇ ಸಾರ್ವಜನಿಕವಾಗಿ ತನ್ನ ವಿರುದ್ಧ ಹಗೆತನದಿಂದ ಕೂಡಿದ, ನಿರಾಧಾರ ಆರೋಪಗಳನ್ನು ಮಾಡುತ್ತಿದ್ದಾರೆ. ಆ ಮೂಲಕ ದಂಗೆ ಎಬ್ಬಿಸಿ ತನ್ನ ಬದುಕು, ವ್ಯಕ್ತಿತ್ವಕ್ಕೆ ಹಾನಿ ಮಾಡುವ ಉದ್ದೇಶ ಹೊಂದಿದ್ದಾರೆ. ಇದು ಭಾರತೀಯ ದಂಡ ಸಂಹಿತೆ ಮತ್ತು ಇತರೆ ಕಾನೂನುಗಳ ಅಡಿ ಅಪರಾಧವಾಗಿದೆ ಎಂದು ಸುಧಾಕರ್‌ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ರಾಜಕೀಯ ಕ್ಷೇತ್ರದಲ್ಲಿ ಈಗಷ್ಟೇ ಮೇಲೆ ಬರುತ್ತಿರುವ ಪ್ರದೀಪ್‌ ಈಶ್ವರ್‌, ಜನಪ್ರಿಯತೆ ಗಳಿಸಲು ವಿವಿಧ ವಿಧಾನಗಳನ್ನು ಅನುಸರಿಸುತ್ತಿದ್ದಾರೆ. ಇದರ ಭಾಗವಾಗಿ ತನ್ನ ವಿರುದ್ಧ ಆಧಾರರಹಿತ ಮತ್ತು ದೋಷಪೂರಿತ ಆರೋಪಗಳನ್ನು ಮಾಡುತ್ತಿದ್ದಾರೆ. ಆರಂಭದಲ್ಲಿ ಇದರ ಬಗ್ಗೆ ತಲೆಕೆಡಿಸಿಕೊಳ್ಳದೇ ಇದ್ದರೂ ಪ್ರದೀಪ್‌ ಇದನ್ನು ಮತ್ತೊಂದು ಹಂತಕ್ಕೆ ಕೊಂಡೊಯ್ದು ದುರುದ್ದೇಶಪೂರ್ವಕವಾಗಿ ತಮ್ಮ ವ್ಯಕ್ತಿತ್ವವನ್ನು ಧ್ವಂಸ ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಲಾಗಿದೆ.

ಚುನಾವಣೆಗೂ ಮುನ್ನ ಪ್ರದೀಪ್‌ ಈಶ್ವರ್‌ ಅವರು ಮಾಧ್ಯಮಗೋಷ್ಠಿಗಳಲ್ಲಿ ತಮ್ಮ ಶೈಕ್ಷಣಿಕ ಅರ್ಹತೆ ಮತ್ತು ಬೌದ್ಧಿಕ ಸಾಮರ್ಥ್ಯದ ಬಗ್ಗೆ ಉದ್ದೇಶಪೂರ್ವಕವಾಗಿ ಕ್ರಿಮಿನಲ್‌ ಮಾನಹಾನಿ ಹೇಳಿಕೆ ನೀಡಿದ್ದು, ಕೋವಿಡ್‌ ಸಂದರ್ಭದಲ್ಲಿ ಆರೋಗ್ಯ ಸಚಿವನಾಗಿ ಕೆಲಸ ಮಾಡಿರುವುದರ ಬಗ್ಗೆಯೂ ಆಕ್ಷೇಪಾರ್ಹವಾದ ಹೇಳಿಕೆ ನೀಡಿದ್ದು, ಭ್ರಷ್ಟ ಎಂದು ಜರಿದಿದ್ದಾರೆ. ಚುನಾವಣಾ ಪ್ರಚಾರದ ಸಂದರ್ಭದಲ್ಲಿ ತನ್ನನ್ನು ಸೋಲಿಸುವುದೇ ಗುರಿ ಎಂದು ಪ್ರದೀಪ್‌ ಹೇಳಿದ್ದು, ಇದು ವೈಯಕ್ತಿಕ ಪ್ರತೀಕಾರವಾಗಿದೆ. ಸೋತ ಬಳಿಕ ತಾನು ಜನರ ಬಗ್ಗೆ ಕಾಳಜಿ ತೋರುತ್ತಿದ್ದು, ನಾಲ್ಕು ವರ್ಷಗಳಿಂದ ಜನರಿಗೆ ಏನೂ ಮಾಡಿಲ್ಲ ಎಂದು ಹೇಳುತ್ತಿದ್ದಾರೆ. ಇದು ಸತ್ಯಕ್ಕೆ ದೂರವಾಗಿದೆ ಎಂದು ಸಮರ್ಥಿಸಿದ್ದಾರೆ.

ಶಿಕ್ಷಕ ಎಂದು ಹೇಳಿಕೊಳ್ಳುವ ಪ್ರದೀಪ್‌ ಈಶ್ವರ್‌ ಅವರು ಅದನ್ನು ಒಳಿತಿಗೆ ಬಳಸುವ ಬದಲು ತಮ್ಮ ವಿರುದ್ಧ ದ್ವೇಷಕಾರುತ್ತಿದ್ದು, ಯುವಜನರ ಮನಸ್ಸನ್ನು ಹಾಳು ಮಾಡುವ ಮೂಲಕ ಕಾನೂನಿಗೆ ವಿರುದ್ಧವಾಗಿದ್ದಾರೆ. ತಾನು ಎಲ್ಲೇ ಸ್ಪರ್ಧೆ ಮಾಡಿದರೂ ಸೋಲಿಸುವುದಾಗಿ ಹೇಳುವ ಮೂಲಕ ಗಂಭೀರವಾದ ಹೇಳಿಕೆ ನೀಡಿದ್ದಾರೆ. ಇದು ದುರುದ್ದೇಶಪೂರ್ವಕ ಮತ್ತು ಇದರ ಹಿಂದೆ ತನ್ನ ವರ್ಚಸ್ಸಿಗೆ ಧಕ್ಕೆ ಮಾಡಿ, ರಾಜಕೀಯ ಲಾಭ ಪಡೆಯುವ ಉದ್ದೇಶವಿದೆ ಎಂದು ಆಕ್ಷೇಪಿಸಲಾಗಿದೆ.

ಕೆಲವು ಮಾಧ್ಯಮಗಳು ತಾವು ಏನು ಮಾಡಬಾರದೋ ಅದೆಲ್ಲವನ್ನೂ ಅತಿ ರಂಜಿತವಾಗಿ ಮಾಡಿವೆ. ಒಬ್ಬರ ಘನತೆಯನ್ನು ನಾಶ ಮಾಡುವುದು ಮೂಲದಲ್ಲಿ ಅದರ ಹಿಂದೆ ಇರುವವರಿಗಿಂತ ಅದನ್ನು ಪ್ರಚುರ ಮಾಡುವವರ ಕೈಯಲ್ಲಿರುತ್ತದೆ ಎಂಬುದನ್ನು ಉದ್ದೇಶಪೂರ್ವಕವಾಗಿ ಮರೆತಿವೆ. ಮಾಧ್ಯಮಗಳು ಮಾಧ್ಯಮ ಧರ್ಮ ಮರೆತಿವೆ. ಆರೋಪಗಳನ್ನು ಪರಿಶೀಲಿಸಿ ವರದಿ ಮಾಡಬೇಕು ಎಂಬುದನ್ನು ಮರೆತಿವೆ. ವರದಿಗಳಿಗೆ ಬಣ್ಣ ಕಟ್ಟಿ ಪ್ರಸಾರ ಮಾಡುತ್ತಿವೆ. ಈ ಸಂಬಂಧ ಯಾವೆಲ್ಲಾ ಮಾಧ್ಯಮಗಳು ಇದರ ಭಾಗವಾಗಿವೆ ಎಂಬುದಕ್ಕೆ ಸಂಬಂಧಿಸಿದಂತೆ ಮಾಹಿತಿ ಸಂಗ್ರಹಿಸುತ್ತಿದ್ದು, ಮುಂದಿನ ಹಂತದಲ್ಲಿ ಅವರ ವಿರುದ್ಧ ಕ್ರಮಕ್ಕೆ ಮುಂದಾಗಲಾಗುವುದು. ಈ ಜಾಲದ ಭಾಗವಾಗಿರುವ ಮಾಧ್ಯಮಗಳಿಗೆ ಲಂಚ ನೀಡಿ, ಅವರನ್ನು ತಮ್ಮತ್ತ ಸೆಳೆದುಕೊಂಡಿದ್ದು, ಈ ಮೂಲಕ ರಾಜಕೀಯ ಲಾಭ ಪಡೆಯುವ ಕೆಲಸವನ್ನು ಪ್ರದೀಪ್‌ ಈಶ್ವರ್‌ ಮಾಡುತ್ತಿದ್ದಾರೆ. ಈ ಸಂಬಂಧ ಸಲ್ಲಿಸಲಾಗಿರುವ ಸಾಕ್ಷಿಯು ತಮ್ಮ ವ್ಯಕ್ತಿತ್ವ ನಾಶ ಮಾಡುವ ಷಡ್ಯಂತ್ರದ ಹಿಂದೆ ಈಶ್ವರ ಇದ್ದಾರೆ ಎಂಬುದಾಗಿದೆ ಎಂದು ಆರೋಪಿಸಲಾಗಿದೆ.

ಆರೋಪಿಯಿ ನಡತೆಯಿಂದಾಗಿ ತಮ್ಮ ಘನತೆಗೆ ತೀವ್ರ ಹಾನಿಯಾಗಿದ್ದು, ತಮ್ಮ ಸಂಬಂಧಿಗಳು ಹಾಗೂ ಹತ್ತಿರದವರಿಗೆ ಉತ್ತರಿಸಲಾಗದ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ತಾನು ಮತ್ತು ಕುಟುಂಬ ಸದಸ್ಯರು ಮಾನಸಿಕ ಯಾತನೆ ಅನುಭವಿಸುತ್ತಿದ್ದೇವೆ. ಕಾನೂನು ಪ್ರಕ್ರಿಯೆ ಕೈಗೊಳ್ಳಲು ತಮಗೆ ಆಗಿರುವ ಅಂದಾಜು ಹಾನಿ ಲೆಕ್ಕ ಹಾಕಲಾಗುತ್ತಿದೆ ಎಂದು ಸುಧಾಕರ್ ವಿವರಿಸಿದ್ದಾರೆ.

ತಾನು ಅಕ್ರಮವಾಗಿ ಹಣ ಸಂಪಾದಿಸಿದ್ದು, ಭ್ರಷ್ಟ ಎಂದು ಜರಿಯುವ ಮೂಲಕ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಅಡಿ ತನ್ನ ವಿರುದ್ಧ ಕ್ರಿಮಿನಲ್‌ ಪ್ರಕರಣ ದಾಖಲಿಸಲು ಪ್ರಚೋದನೆ ನೀಡಲಾಗುತ್ತಿದೆ. ಇದಲ್ಲದೇ ತಾನು ಪ್ರತಿನಿಧಿಸುವ ಬಿಜೆಪಿಯು ಮುಸ್ಲಿಮ್‌, ದಲಿತ ಮತ್ತೆ ಕೆಲವು ಸಮುದಾಯಗಳ ವಿರೋಧಿ ಎಂದು ಹೇಳಿಕೆ ನೀಡುವ ಮೂಲಕ ತಮ್ಮ ಮತ್ತು ಬಿಜೆಪಿ ವಿರುದ್ಧ ಸಮಾಜದ ವಿವಿಧ ಸಮುದಾಯಗಳಿಗೆ ಪ್ರಚೋದನೆ ನೀಡಲಾಗುತ್ತಿದೆ. ಇದೆಲ್ಲವೂ ಕ್ರಿಮಿನಲ್‌ ಅಪರಾಧಕ್ಕೆ ಸಮನಾಗಿವೆ ಎಂದು ವಿವರಿಸಲಾಗಿದೆ.

ಹೀಗಾಗಿ, ಪ್ರದೀಪ್‌ ಈಶ್ವರ್‌ ವಿರುದ್ಧ ಐಪಿಸಿ ಸೆಕ್ಷನ್‌ಗಳಾದ 36, 37, 109, 112, 113, 114, 117, 120ಬಿ, 388, 500, 501. 504, 505, 506 ಅಡಿ ಪ್ರಕರಣ ದಾಖಲಿಸಲು ಆದೇಶಿಸಬೇಕು ಎಂದು ಸುಧಾಕರ್‌ ಕೋರಿದ್ದಾರೆ. ಸುಧಾಕರ್‌ ಪರವಾಗಿ ವಕೀಲೆ ಪಿ ಎಲ್‌ ವಂದನಾ ವಕಾಲತ್ತು ಹಾಕಿದ್ದಾರೆ.