A1
A1
ಸುದ್ದಿಗಳು

ಎಫ್ಐಆರ್ ಒಗ್ಗೂಡಿಸಲು ಸುಲ್ಲಿ ಡೀಲ್ಸ್ ಆರೋಪಿ ಕೋರಿಕೆ: ವಿವಿಧ ರಾಜ್ಯ ಸರ್ಕಾರಗಳ ಪ್ರತಿಕ್ರಿಯೆ ಕೇಳಿದ ಸುಪ್ರೀಂ ಕೋರ್ಟ್

Bar & Bench

ಸುಲ್ಲಿ ಡೀಲ್ಸ್‌ ಮೊಬೈಲ್‌ ಅಪ್ಲಿಕೇಷನ್‌ ಮೂಲಕ ವಿವಿಧ ಗುಂಪುಗಳ ನಡುವೆ ದ್ವೇಷ ಪ್ರಚೋದನೆ ಮಾಡಿದ ಆರೋಪ ಎದುರಿಸುತ್ತಿದ್ದ ಓಂಕಾರೇಶ್ವರ್‌ ಠಾಕೂರ್‌ ಮನವಿಗೆ ಸಂಬಂಧಿಸಿದಂತೆ ಶುಕ್ರವಾರ ದೆಹಲಿ, ಉತ್ತರ ಪ್ರದೇಶ ಮತ್ತು ಮಹಾರಾಷ್ಟ್ರ ರಾಜ್ಯ ಸರ್ಕಾರಗಳು ಪ್ರತಿಕ್ರಿಯಿಸುವಂತೆ ಸುಪ್ರೀಂ ಕೋರ್ಟ್‌ ಕೇಳಿದೆ.

ಸುಲ್ಲಿ ಡೀಲ್ಸ್ ಮತ್ತು ಬುಲ್ಲಿ ಬಾಯಿ ಎಂಬ ಎರಡು ಅಪ್ಲಿಕೇಷನ್‌ ರಚಿಸಿ ವಿಭಿನ್ನ ಕೃತ್ಯಗಳಿಗಾಗಿ ಬೇರೆ ಬೇರೆ ಸೆಕ್ಷನ್‌ಗಳಡಿ ಆರೋಪ ಹೊರಿಸಿರುವುದರಿಂದ ಅರ್ಜಿಯನ್ನು ಪುರಸ್ಕರಿಸಬಹುದೇ ಎಂದು ನ್ಯಾಯಾಲಯ ಅಚ್ಚರಿ ವ್ಯಕ್ತಪಡಿಸಿತು. ಎಲ್ಲಾ ಎಫ್‌ಐಆರ್‌ಗಳು ವಿಭಿನ್ನವಾಗಿವೆ ಎಂದು ಅದು ಹೇಳಿತು.

ಅಂತಿಮವಾಗಿ ನೋಟಿಸ್‌ ನೀಡಿದ ನ್ಯಾಯಾಲಯ ತನಿಖೆಗೆ ತಡೆ ನೀಡಲು ನಿರಾಕರಿಸಿತು. ತನ್ನ ವಿರುದ್ಧದ ಎಫ್‌ಐಆರ್‌ಗಳನ್ನು ಒಗ್ಗೂಡಿಸಿ ತನಿಖೆ ನಡೆಸಬೇಕು ಎಂದು ಠಾಕೂರ್‌ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದ. ಮುಸ್ಲಿಂ ಮಹಿಳೆಯರ ಛಾಯಾಚಿತ್ರಗಳು ಮತ್ತು ವೈಯಕ್ತಿಕ ಮಾಹಿತಿಯನ್ನು ಹೊಂದಿರುವ ಓಪನ್ ಸೋರ್ಸ್ ಅಪ್ಲಿಕೇಶನ್ ರೂಪಿಸಿದ ಆರೋಪ ಠಾಕೂರ್‌ ಮೇಲಿದೆ. ಸುಲ್ಲಿ ಡೀಲ್ ಪ್ರಕರಣದಲ್ಲಿ ಆತನಿಗೆ ದೆಹಲಿ ನ್ಯಾಯಾಲಯ ಈ ಹಿಂದೆ ಜಾಮೀನು ನೀಡಿತ್ತು.

ಪ್ರತಿಷ್ಠಿತ ಮುಸ್ಲಿಂ ಮಹಿಳೆಯರ ಛಾಯಾಚಿತ್ರಗಳನ್ನು ಅಕ್ರಮವಾಗಿ ಬಳಸಿ ಅವರನ್ನು ಹರಾಜಿಗಿರಿಸಿರುವುದಾಗಿ ಬಿಂಬಿಸಿದ್ದ ಬುಲ್ಲಿಬಾಯ್‌ ಅಪ್ಲಿಕೇಷನ್‌ ರೂಪಿಸಿದ ಪ್ರಕರಣದಲ್ಲಿಯೂ ಠಾಕೂರ್‌ ಆರೋಪಿಯಾಗಿದ್ದಾನೆ.