Congress MLA Vinay Kulkarni, ED & Karnataka HC 
ಸುದ್ದಿಗಳು

ಅಕ್ರಮ ಹಣ ವರ್ಗಾವಣೆ ಪ್ರಕರಣ: ಶಾಸಕ ವಿನಯ್‌ ಕುಲಕರ್ಣಿಯಿಂದ ತಡೆಯಾಜ್ಞೆ ಕೋರಿಕೆಗೆ ಇ ಡಿ ಆಕ್ಷೇಪ

ಐಶ್ವರ್ಯಾ ಗೌಡ ಎಂಬಾಕೆ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣ ವಂಚಿಸಿದ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಕಾಯಿದೆ (ಪಿಎಂಎಲ್‌ಎ) ಅಡಿ ವಿನಯ್‌ ಕುಲಕರ್ಣಿಗೆ ಜಾರಿ ನಿರ್ದೇಶನಾಲಯ ಸಮನ್ಸ್‌ ಜಾರಿ ಮಾಡಿದೆ.

Bar & Bench

ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌ ಸಹೋದರ ಹಾಗೂ ಮಾಜಿ ಸಂಸದ ಡಿ ಕೆ ಸುರೇಶ್‌ ಸಹೋದರಿ ಎಂದು ಹೇಳಿಕೊಂಡು ಐಶ್ವರ್ಯಾ ಗೌಡ ಎಂಬಾಕೆ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನಾಭರಣ ವಂಚಿಸಿದ ಪ್ರಕರಣದಲ್ಲಿ ಅಕ್ರಮಹಣ ವರ್ಗಾವಣೆ ಕಾಯಿದೆ (ಪಿಎಂಎಲ್‌ಎ) ಅಡಿ ಸಮನ್ಸ್‌ ಜಾರಿ ಮಾಡಿರುವುದಕ್ಕೆ ಕಾಂಗ್ರೆಸ್‌ ಶಾಸಕ ವಿನಯ್‌ ಕುಲಕರ್ಣಿ ತಡೆಯಾಜ್ಞೆ ಕೋರಿಕೆಗೆ ಜಾರಿ ನಿರ್ದೇಶನಾಲಯವು ಮಂಗಳವಾರ ಮೌಖಿಕವಾಗಿ ವಿರೋಧ ದಾಖಲಿಸಿತು.

ಏಪ್ರಿಲ್‌ 24 ಮತ್ತು 25ರಂದು ನಡೆಸಿರುವ ಶೋಧ ಮತ್ತು ಜಫ್ತಿ ಹಾಗೂ ಪಿಎಂಎಲ್‌ಎ ಕಾಯಿದೆ ಸೆಕ್ಷನ್‌ 17 ಅಡಿ ಹೇಳಿಕೆ ದಾಖಲಿಸಿಕೊಂಡಿರುವುದು ಕಾನೂನುಬಾಹಿರ ಎಂದು ಘೋಷಿಸುವಂತೆ ಕೋರಿ ವಿನಯ್‌ ಕುಲಕರ್ಣಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಶಿವಶಂಕರ್‌ ಅಮರಣ್ಣವರ್‌ ಅವರ ರಜಾಕಾಲೀನ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಜಾರಿ ನಿರ್ದೇಶನಾಲಯ ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಕೆ ಅರವಿಂದ್‌ ಕಾಮತ್‌ ಅವರು “ಇ ಡಿ ಸಮನ್ಸ್‌ ಪ್ರಶ್ನಿಸುವಂತಿಲ್ಲ ಎಂದು ಹೈಕೋರ್ಟ್‌ನ ವಿಭಾಗೀಯ ಪೀಠ ಆದೇಶಿಸಿದೆ. ಪಿಎಂಎಲ್‌ಎ ಅಡಿ ತನಿಖೆ ಮುಂದುವರಿಸಲು ಮುಖ್ಯ ನ್ಯಾಯಮೂರ್ತಿಗಳ ಪೀಠವು ಸ್ವಾತಂತ್ರ್ಯ ಕಲ್ಪಿಸಿದೆ. ಹೀಗಾಗಿ, ಮಧ್ಯಂತರ ಪರಿಹಾರ ನೀಡುವುದನ್ನು ಪರಿಗಣಿಸುವುದಾದರೆ ನಮ್ಮ ವಾದವನ್ನು ಆಲಿಸಬೇಕು. ವಿನಯ್‌ ಪರ ವಕೀಲರು ಇಂದಿನ ತುರ್ತಿನ ಅಗತ್ಯತೆಯನ್ನು ಪೀಠಕ್ಕೆ ಮನವರಿಕೆ ಮಾಡಿಕೊಡಬೇಕಿತ್ತು. ವಿನಯ್‌ಗೆ ಸಮನ್ಸ್‌ ಜಾರಿ ಮಾಡಿದ್ದೆವು, ಅವರು ಹಾಜರಾಗಿದ್ದರು. ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಅಲ್ಲಿಗೆ ಮುಗಿಯಿತು. ಈಗ ಮತ್ತೆ ಹೊಸದಾಗಿ ಸಮನ್ಸ್‌ ಜಾರಿ ಮಾಡಿಲ್ಲ” ಎಂದರು.

“ಹೀಗಿರುವಾಗ ಈ ಪೀಠದ (ರಜಾಕಾಲೀನ) ಮುಂದೆ ಏಕೆ ಬಂದಿದ್ದಾರೆ? ಇಲ್ಲಿ ತುರ್ತು ಇರಲಿಲ್ಲ. ತುರ್ತಿನ ಕುರಿತು ಪೀಠಕ್ಕೆ ಮನವರಿಕೆ ಮಾಡಿಕೊಡುವ ಬದಲು, ಮೆರಿಟ್‌ ಮೇಲೆ ವಿನಯ್‌ ಪರ ವಕೀಲರು ವಾದಿಸಿದ್ದಾರೆ. ಈ ಅರ್ಜಿಯನ್ನು ರಜಾಕಾಲದ ಬಳಿಕ ಪರಿಗಣಿಸಬಹುದು. ಆದರೆ, ಪೀಠವು ಮಧ್ಯಂತರ ಪರಿಹಾರ ನೀಡಲು ಪರಿಗಣಿಸುವುದಾದರೆ, ನಮ್ಮ ವಾದವನ್ನೂ ದಯಮಾಡಿ ಆಲಿಸಬೇಕು” ಎಂದು ಮನವಿ ಮಾಡಿದರು.

ಇದಕ್ಕೂ ಮುನ್ನ, ವಿನಯ್‌ ಪರ ಹಿರಿಯ ವಕೀಲ ಸಂದೇಶ್‌ ಚೌಟ ಅವರು “ಪಿಎಂಎಲ್‌ಎ ಅಡಿ ಅಧಿಕಾರ ಹೊಂದಿರುವ ಅಧಿಕಾರಿ ವಿನಯ್‌ ಕುಲಕರ್ಣಿಗೆ ಸಮನ್ಸ್‌ ಜಾರಿ ಮಾಡಿಲ್ಲ. ಜಫ್ತಿಯ ಸಂದರ್ಭದಲ್ಲಿ ವಿನಯ್‌ ಮನೆಯಲ್ಲಿ ಇ ಡಿ ಅಧಿಕಾರಿಗಳಿಗೆ ಏನೂ ದೊರೆತಿಲ್ಲ. ಹೀಗಿರುವಾಗ ವಿನಯ್‌ ಹೇಳಿಕೆ ದಾಖಲಿಸಿಕೊಳ್ಳುವಂತಿರಲಿಲ್ಲ. ಸಮನ್ಸ್‌ನಲ್ಲಿ ಮೂಲ ಅಪರಾಧ (ಪ್ರೆಡಿಕೇಟ್‌ ಅಪರಾಧ) ಯಾವುದು ಎಂದು ಹೇಳಲಾಗಿಲ್ಲ. ಐಶ್ವರ್ಯಾ ಗೌಡ ರಿಮ್ಯಾಂಡ್‌ ಅರ್ಜಿಯಲ್ಲಿಯೂ ವಿನಯ್‌ ಕುಲಕರ್ಣಿ ಬಗ್ಗೆ ಯಾವುದೇ ಉಲ್ಲೇಖವಿಲ್ಲ” ಎಂದು ಆಕ್ಷೇಪಿಸಿದರು.

ವಿನಯ ಕುಲಕರ್ಣಿ ಪರ ಹಿರಿಯ ವಕೀಲ ಅಶೋಕ್‌ ಹಾರನಹಳ್ಳಿ ಅವರು “ಅಪರಾಧ ಪ್ರಕ್ರಿಯೆ ಇಲ್ಲದಿದ್ದರೂ ಪಿಎಂಎಲ್‌ಎ ಅಡಿ ವಿನಯ್‌ಗೆ ಸಮನ್ಸ್‌ ಜಾರಿ ಮಾಡಿರುವುದು ಕಾನೂನು ಬಾಹಿರ ಕ್ರಮ” ಎಂದು ವಾದಿಸಿದರು.

ಅರ್ಜಿದಾರರ ಪರ ಹಿರಿಯ ವಕೀಲರ ವಾದ ಆಲಿಸಿ, ಮೇ 15ಕ್ಕೆ ಮಧ್ಯಂತರ ಕೋರಿಕೆಗೆ ಸಂಬಂಧಿಸಿದ ಆದೇಶ ಬರೆಸಲಾಗುವುದು ಎಂದು ಪೀಠ ಹೇಳಿತು. ಇದಕ್ಕೆ ಎಎಸ್‌ಜಿ ಆಕ್ಷೇಪಿಸಿದ ಹಿನ್ನೆಲೆಯಲ್ಲಿ ಇ ಡಿ ವಾದ ಆಲಿಸಲು ವಿಚಾರಣೆಯನ್ನು ಮೇ 15ಕ್ಕೆ ಮುಂದೂಡಲಾಗಿದೆ.