ದೇಶದಲ್ಲಿ ಯಾವ ಆಧಾರದಲ್ಲಿ ಕೋವಿಡ್ ಲಸಿಕೆಗೆ ಬೆಲೆ ನಿಗದಿಪಡಿಸಲಾಗಿದೆ ಎಂಬುದನ್ನು ತಿಳಿಸುವಂತೆ ಸುಪ್ರೀಂಕೋರ್ಟ್ ಕೇಂದ್ರ ಸರ್ಕಾರಕ್ಕೆ ಆದೇಶಿಸಿದೆ. ರಾಷ್ಟ್ರೀಯ ಬಿಕ್ಕಟ್ಟು ಎದುರಾಗಿರುವ ವೇಳೆ ವಿವಿಧ ಲಸಿಕೆ ತಯಾರಕರು ತಮ್ಮ ಉತ್ಪನ್ನಗಳಿಗೆ ಬೇರೆ ಬೇರೆ ಬೆಲೆ ನಿಗದಿಪಡಿಸುತ್ತಿದ್ದಾರೆ ಎಂದು ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್, ಎಲ್ ನಾಗೇಶ್ವರ ರಾವ್ ಹಾಗೂ ರವೀಂದ್ರ ಭಟ್ ಅವರಿದ್ದ ಪೀಠ ಅಸಮಾಧಾನ ವ್ಯಕ್ತಪಡಿಸಿದೆ.
ಆದ್ದರಿಂದ ಅಗತ್ಯವಾದಲ್ಲಿ ಪೇಟೆಂಟ್ ಕಾಯಿದೆಯಡಿಯಲ್ಲಿನ ನಿಯಮಗಳನ್ನು ಜಾರಿಗೊಳಿಸುವ ಅಗತ್ಯತೆಯನ್ನು ಪರಿಶೀಲಿಸುವ ಮೂಲಕ ಬೆಲೆಯ ನಿಯಂತ್ರಣ ಮಾಡುವಂತೆ ಮೌಖಿಕವಾಗಿ ಕೇಂದ್ರ ಸರ್ಕಾರಕ್ಕೆ ಪೀಠ ಒತ್ತಾಯಿಸಿದೆ. 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಚುಚ್ಚುಮದ್ದು ನೀಡುವುದಾಗಿ ಘೋಷಿಸಿದ ವೇಳೆ ಲಸಿಕೆ ಕೊರತೆ ನೀಗಿಸಲು ಕೈಗೊಂಡ ಕ್ರಮಗಳನ್ನು ವಿವರಿಸುವಂತೆಯೂ ಸರ್ಕಾರಕ್ಕೆ ನ್ಯಾಯಾಲಯ ಸೂಚಿಸಿತು.
ಇದೇ ವೇಳೆ, ಕೋವಿಡ್ ಸಂಬಂಧಿ ಪ್ರಕರಣಗಳ ಪರಿಶೀಲನೆಗಾಗಿ ಹೈಕೋರ್ಟ್‌ಗಳು ಚಲಾಯಿಸುತ್ತಿರುವ ತಮ್ಮ ನ್ಯಾಯಿಕ ವ್ಯಾಪ್ತಿಗೆ ತಡೆ ನೀಡುವುದಿಲ್ಲ ಎಂದ ಪೀಠ, ರಾಷ್ಟ್ರೀಯ ಬಿಕ್ಕಟ್ಟಿನ ವೇಳೆ ಸುಪ್ರೀಂಕೋರ್ಟ್ ಮೂಕ ಪ್ರೇಕ್ಷಕನಾಗಿ ಉಳಿಯಲು ಸಾಧ್ಯವಿಲ್ಲ ಎಂದೂ ಸಹ ತಿಳಿಸಿತು.
ಆಮ್ಲಜನಕದ ಪೂರೈಕೆ, ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪಾಲು, ರೆಮ್‌ಡಿಸಿವಿರ್‌ನಂತಹ ಔಷಧಗಳ ಸರಬರಾಜಿಗೆ ಕೈಗೊಂಡ ಕ್ರಮಗಳು, ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್‌ಗಳ ಲಭ್ಯತೆ, ಅಗತ್ಯತೆ, ಬೆಲೆಗಳ ತಾರ್ಕಿಕತೆ, ವೈದ್ಯರ ಸೇವೆ ಜನರಿಗೆ ಲಭ್ಯವಾಗುವಂತೆ ನೋಡಿಕೊಳ್ಳುವುದು ಇತ್ಯಾದಿ ವಿಚಾರಗಳ ಕುರಿತಂತೆ ಕೇಂದ್ರ ಸರ್ಕಾರಕ್ಕೆ ಪೀಠ ಸೂಚನೆಗಳನ್ನು ನೀಡಿದೆ.
ಎರಡು ದಿನಗಳ ಬಳಿಕ ಮತ್ತೆ ವಿಚಾರಣೆ ನಿಗದಿಪಡಿಸಲಾಗಿದೆ. ದಿನನಿತ್ಯದ ಆಧಾರದಲ್ಲಿ ಪ್ರಕರಣದ ವಿಚಾರಣೆ ನಡೆಸಲಾಗುವುದು ಎಂದು ಪೀಠ ತಿಳಿಸಿದೆ. ಪ್ರಕರಣದ ಅಮಿಕಸ್ ಕ್ಯೂರಿಯಾಗಲು ಹಿರಿಯ ವಕೀಲ ಹರೀಶ್ ಸಾಳ್ವೆ ಅವರು ನಿರಾಕರಿಸಿದ ಬಳಿಕ ಜೈದೀಪ್ ಗುಪ್ತ ಮತ್ತು ಮೀನಾಕ್ಷಿ ಅರೋರಾ ಅವರನ್ನು ಅಮಿಕಸ್ ಕ್ಯೂರಿಗಳಾಗಿ ನ್ಯಾಯಾಲಯ ನೇಮಿಸಿದ್ದನ್ನು ಇಲ್ಲಿ ಸ್ಮರಿಸಬಹುದು.