ಸುದ್ದಿಗಳು

ಹಿರಿಯ ನ್ಯಾಯವಾದಿ ಪದನಾಮ: ಸುಪ್ರೀಂ ಮಾರ್ಗಸೂಚಿ ಉಲ್ಲಂಘಿಸಲಾಗದು ಎಂದು ತನ್ನದೇ ಆದೇಶ ರದ್ದುಪಡಿಸಿದ ಒಡಿಶಾ ಹೈಕೋರ್ಟ್

ಅನುಮತಿ ನೀಡುವ ಮೂಲಕ ಯಾರು ಯಾರಿಗೋ ಆ ಪದನಾಮ ನೀಡಬಾರದು. ನಿರ್ದಿಷ್ಟ ನ್ಯಾಯವಾದಿ ವರ್ಗದ ಒಟ್ಟು ಸಂಖ್ಯೆಯಲ್ಲಿ ಕೆಲ ಪ್ರತಿಶತದಷ್ಟು ಮಂದಿಗೆ ಮಾತ್ರ ಅಪೇಕ್ಷಿತ ಸ್ಥಾನ ನೀಡಬೇಕು ಎಂದು ನ್ಯಾಯಾಲಯ ಹೇಳಿದೆ.

Bar & Bench

ವಕೀಲರನ್ನು 'ಹಿರಿಯ ನ್ಯಾಯವಾದಿ'ಗಳು ಎಂದು ಪರಿಗಣಿಸಲು ಪೂರ್ಣ ನ್ಯಾಯಾಲಯಕ್ಕೆ ಅವಕಾಶ ನೀಡುವ ತನ್ನ ನಿಯಮ ಸುಪ್ರೀಂಕೋರ್ಟ್‌ ಮಾರ್ಗದೂಚಿಗಳನ್ನು ಉಲ್ಲಂಘಿಸುತ್ತದೆ ಎಂದು ಒಡಿಶಾ ಹೈಕೋರ್ಟ್‌ ಸೋಮವಾರ ಅಭಿಪ್ರಾಯಪಟ್ಟಿದ್ದು ನಿಯಮವನ್ನು ರದ್ದುಪಡಿಸಿದೆ.

ವಕೀಲರು ಯಾವುದೇ ಅರ್ಜಿ ಸಲ್ಲಿಸದಿದ್ದರೂ ಹಾಗೂ ನ್ಯಾಯಮೂರ್ತಿಗಳ ಯಾವುದೇ ಪ್ರಸ್ತಾವನೆ ಇಲ್ಲದೆ ಇದ್ದರೂ ಒಡಿಶಾ ಹೈಕೋರ್ಟ್‌ನ 2019ರ (ಹಿರಿಯ ವಕೀಲರ ಹುದ್ದೆ) 6 (9) ನಿಯಮವು ಪೂರ್ಣ ನ್ಯಾಯಾಲಯವು ತಂತಾನೇ ಅಥವಾ ಸ್ವಯಂಪ್ರೇರಿತವಾಗಿ ವಕೀಲರನ್ನು ಹಿರಿಯ ನ್ಯಾಯವಾದಿ ಎಂದು ಹೆಸರಿಸಲು ಅವಕಾಶ ಮಾಡಿಕೊಟ್ಟಿತ್ತು. ನಿಯಮದ ಪ್ರಕಾರ ತಮ್ಮ ಸಾಮರ್ಥ್ಯ ಮತ್ತು ವಕೀಲಿಕೆಯ ಅನುಭವ ಆಧರಿಸಿ ಅಂತಹ ಮಾನ್ಯತೆಗೆ ವಕೀಲರೊಬ್ಬರು ಅರ್ಹರು ಎಂದು ಪೂರ್ಣ ನ್ಯಾಯಾಲಯ ಅಭಿಪ್ರಾಯಪಟ್ಟರೆ ವಕೀಲರೊಬ್ಬರು ತನ್ನಿಂತಾನೇ ಹಿರಿಯ ನ್ಯಾಯವಾದಿ ಪದನಾಮಕ್ಕೆ ಪಾತ್ರರಾಗುತ್ತಾರೆ.

ಆದರೆ, ಹಿರಿಯ ವಕೀಲ ಪದನಾಮಕ್ಕಾಗಿ ನ್ಯಾಯಾಲಯ 2019ರಲ್ಲಿ ಅರ್ಜಿ ಆಹ್ವಾನಿಸಿದ ಬಳಿಕ ವಿವಾದ ಹುಟ್ಟಿಕೊಂಡಿತ್ತು. ಐವರು ವಕೀಲರಿಗೆ ನ್ಯಾಯಾಲಯ ಸ್ವಯಂಪ್ರೇರಿತವಾಗಿ ಹಿರಿಯ ನ್ಯಾಯವಾದಿ ಪದನಾಮ ನೀಡಿದ್ದ ನಿಯಮವನ್ನು ಪ್ರಶ್ನಿಸಲಾಗಿತ್ತು. 43 ವಕೀಲರು ತಮಗೂ ಹಿರಿಯ ನ್ಯಾಯವಾದಿ ಪದನಾಮ ಬೇಕೆಂದು ಸಲ್ಲಿಸಿದ್ದ ಅರ್ಜಿಗಳು ನ್ಯಾಯಾಲಯದಲ್ಲಿ ಬಾಕಿ ಉಳಿದಿದ್ದರೂ, ಅದಾವುದನ್ನೂ ಪರಿಗಣಿಸದೆ ಐದು ವಕೀಲರಿಗೆ ಮಾತ್ರ ಸ್ವಯಂಪ್ರೇರಿತವಾಗಿ ಹಿರಿಯ ನ್ಯಾಯವಾದಿ ಪದನಾಮ ಪ್ರದಾನಿಸಲಾಗಿತ್ತು. ಹೀಗೆ ಸ್ವಯಂಪ್ರೇರಿತವಾಗಿ ಪದನಾಮ ಅನುಮತಿಸುವ ನಿಯಮ ಹಾಗೂ ಹೊಸ ಅರ್ಜಿಯನ್ನು ಆಹ್ವಾನಿಸಿದ ಅಧಿಸೂಚನೆಯನ್ನು ನ್ಯಾಯಾಲಯದಲ್ಲಿ ಪ್ರಶ್ನಿಸಲಾಗಿತ್ತು.

2017ರ ಇಂದಿರಾ ಜೈಸಿಂಗ್‌ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ನೀಡಿದ್ದ ಮಾರ್ಗಸೂಚಿಯನ್ನು 6 (9)ನೇ ನಿಯಮ ಮೀರುತ್ತದೆ ಎಂದು ನ್ಯಾಯಮೂರ್ತಿಗಳಾದ ಚಿತ್ತ ರಂಜನ್ ದಾಸ್‌ ಮತ್ತು ಪ್ರಮಥ್‌ ಪಟ್ನಾಯಕ್ ಅವರಿದ್ದ ಪೀಠ ಹೇಳಿದೆ.

ಅರ್ಜಿದಾರರ ವಾದದಲ್ಲಿ ಹುರುಳಿದೆ ಎನ್ನುವುದನ್ನು ಸ್ಪಷ್ಟಪಡಿಸಿಕೊಂಡ ನ್ಯಾಯಾಲಯ ಹಿರಿಯ ವಕೀಲರು ಎಂಬುದು ʼಬಿರುದುʼ ಅಥವಾ 'ಹುದ್ದೆ' ಅಲ್ಲ. ಅಂತಹ ಪದನಾಮ ನ್ಯಾಯಾಲಯದಲ್ಲಿ ಉನ್ನತ ಸ್ಥಾನ ನೀಡುವ ಮೂಲಕ ವಕೀಲರ ಪ್ರತಿಷ್ಠೆ ಹೆಚ್ಚಿಸುತ್ತದೆ ಎಂದಿತು.

ಅಲ್ಲದೆ, ಅಂತಹ ಅಪೇಕ್ಷಿತ ಪದನಾಮಕ್ಕೆ ನೂಕುನುಗ್ಗಲು ಉಂಟಾಗಬಾರದು. ಅನುಮತಿ ನೀಡುವ ಮೂಲಕ ಯಾರು ಯಾರಿಗೋ ಆ ಪದನಾಮ ನೀಡಬಾರದು. ನಿರ್ದಿಷ್ಟ ನ್ಯಾಯವಾದಿ ವರ್ಗದ ಒಟ್ಟು ಸಂಖ್ಯೆಯಲ್ಲಿ ಕೆಲ ಪ್ರತಿಶತದಷ್ಟು ಮಂದಿಗೆ ಮಾತ್ರ ಅಪೇಕ್ಷಿತ ಸ್ಥಾನ ನೀಡಬೇಕು ಎಂದು ಅದು ಹೇಳಿದೆ.

ಇಷ್ಟಾದರೂ ಐವರು ವಕೀಲರಿಗೆ ನೀಡಿದ್ದ ಸ್ಥಾನವನ್ನು ನ್ಯಾಯಾಲಯ ಹಿಂಪಡೆಯಲಿಲ್ಲ. ಬದಲಿಗೆ, ಇತರ 43 ವಕೀಲರು ಸಲ್ಲಿಸಿದ ಅರ್ಜಿಗಳೊಂದಿಗೆ ಈ ಐವರು ವಕೀಲರನ್ನು 'ಹಿರಿಯ ವಕೀಲ' ಪದನಾಮ ಪ್ರದಾನಕ್ಕೆ ಪರಿಗಣಿಸಬೇಕೆಂದು ಅದು ನಿರ್ದೇಶಿಸಿತು. ಇದೇ ವೇಳೆ, ಹೊಸ ಅರ್ಜಿಗಳನ್ನು ಆಹ್ವಾನಿಸುವ ಎರಡನೇ ಅಧಿಸೂಚನೆಯನ್ನು ರದ್ದುಪಡಿಸಿತು. 'ಹಿರಿಯ ವಕೀಲ'ರೆಂದು ಪದನಾಮ ನೀಡುವ ಪ್ರಕ್ರಿಯೆಯನ್ನು ಜುಲೈ, 2021 ರೊಳಗೆ ಪೂರ್ಣಗೊಳಿಸಲು ಸೂಚಿಸಲಾಯಿತು.