ಸುದ್ದಿಗಳು

ದೈಹಿಕ ಕ್ಷಮತೆಯ ಅಸಮಾನ ಅನ್ವಯಿಕೆ ಬದಿಗೆ ಸರಿಸಿ ಮಹಿಳಾ ಸೇನಾಧಿಕಾರಿಗಳ ಶಾಶ್ವತ ಕಮಿಷನ್‌ಗೆ ಅಸ್ತು ಎಂದ ಸುಪ್ರೀಂಕೋರ್ಟ್

Bar & Bench

ದೈಹಿಕ ದೃಢತೆಗೆ ಸಂಬಂಧಿಸಿದ ಮಾನದಂಡಗಳನ್ನು ಅಸಮಾನ ರೀತಿಯಲ್ಲಿ ಅನ್ವಯಿಸಿದ್ದಕ್ಕಾಗಿ ಶಾಶ್ವತ ಕಮಿಷನ್‌ (ಪಿಸಿ) ಸೌಲಭ್ಯದಿಂದ ಹೊರಗುಳಿದಿದ್ದ ಮಹಿಳಾ ಸೇನಾಧಿಕಾರಿಗಳಿಗೆ ಆ ಸೌಲಭ್ಯ ಒದಗಿಸುವಂತೆ ಸುಪ್ರೀಂಕೋರ್ಟ್‌ ಕೇಂದ್ರ ಸರ್ಕಾರಕ್ಕೆ ಗುರುವಾರ ಆದೇಶಿಸಿದೆ.

'ಶೇಪ್‌ 1' ಎಂದು ಕರೆಯಲಾಗುವ ದೈಹಿಕ ಸಾಮರ್ಥ್ಯದ ಮಾನದಂಡಗಳು ಪುರುಷ ಅಧಿಕಾರಿಗಳಿಗೆ ಸೇವೆಯ ಆರಂಭದ ಘಟ್ಟದಲ್ಲಿ ಶಾಶ್ವತ ಕಮಿಷನ್‌ ನೀಡಿದಾಗ ಅನ್ವಯಿಸಲಾಗಿದೆ ಎಂದು ನ್ಯಾಯಾಲಯ ತನ್ನ ತೀರ್ಪಿನಲ್ಲಿ ತಿಳಿಸಿದೆ.

ಆದರೆ, 'ಭದ್ರತಾ ಸಚಿವಾಲಯದ ಕಾರ್ಯದರ್ಶಿ ವರ್ಸಸ್‌ ಬಬಿತಾ ಪುನಿಯಾ' ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಐತಿಹಾಸಿಕ ತೀರ್ಪು ನೀಡಿದ ನಂತರ ಅದರ ಅನುಸಾರ ಕೇವಲ ಹಿಂದಿನ ವರ್ಷವಷ್ಟೇ ಹಿರಿಯ ವಯಸ್ಸಿನ ಸಂತ್ರಸ್ತ ಮಹಿಳಾ ಅಧಿಕಾರಿಗಳಿಗೆ ಶಾಶ್ವತ ಕಮಿಷನ್‌ ನೀಡಲಾಗಿತ್ತು.

ಆದ್ದರಿಂದ ಅವರಿಗೆ ಶೇಪ್‌ 1 ದೈಹಿಕ ಸಾಮರ್ಥ್ಯದ ಮಾನದಂಡ ಅನ್ವಯಿಸುವುದು ಸೂಕ್ತವಾಗುವುದಿಲ್ಲ ಎಂದಿರುವ ನ್ಯಾಯಾಲಯ “ತೋರಿಕೆಯ ಸಮಾನತೆ ಎಂಬುದು ಸಂವಿಧಾನದ ನೈಜ ತತ್ವಗಳಿಗೆ ಸರಿಹೊಂದುವುದಿಲ್ಲ. ಶೇಪ್‌ 1 ಮಾನದಂಡವು ಅನಿಯಂತ್ರಿತವಲ್ಲವಾದರೂ ಅದನ್ನು ಅನ್ವಯಿಸುವುದರಲ್ಲಿ ತಾರತಮ್ಯ ಇದೆ' ಎಂದು ಹೇಳಿದೆ.

“ವಯಸ್ಸಿಗೆ ಸಂಬಂಧಿಸಿದ ಅಂಶಗಳನ್ನು ಗಣನೆಗೆ ತೆಗೆದುಕೊಂಡು ವೈದ್ಯಕೀಯ ಪ್ರವರ್ಗ ಅನ್ವಯಿಸಲಾಗಿದೆ ಎಂದು ಸೇನೆ ಹೇಳಿದೆ. ಆದರೆ ಹೀಗೆ ಮಾಡಿರುವುದರಲ್ಲಿ ತಾರತಮ್ಯ ಮತ್ತು ಹೊರಗಿಡುವಿಕೆ ಇದೆ. ಅದೇ ರೀತಿ ಮೊದಲ ಶಾಶ್ವತ ಕಮಿಷನ್‌ ಪಡೆದ ವಯಸ್ಸಾದ ಪುರುಷ ಪಿಸಿ ಅಧಿಕಾರಿಗಳು ಈಗ ಶೇಪ್ 1 ದೈಹಿಕ ಸಾಮರ್ಥ್ಯ ನಿರ್ವಹಿಸಲಾಗದು "ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.

ಆದ್ದರಿಂದ, ಶೇಪ್‌ 1 ದೈಹಿಕ ಸಾಮರ್ಥ್ಯದ ಮಾನದಂಡಗಳನ್ನು ಅನ್ವಯವಾಗದಿರುವ ಆಧಾರದ ಮೇಲೆ ನವೆಂಬರ್ 2020 ರಲ್ಲಿ ಶಾಶ್ವತ ಕಮಿಷನ್‌ನಿಂದ ಹೊರಗುಳಿದ ಮಹಿಳಾ ಅಧಿಕಾರಿಗಳಿಗೆ ಸೇವೆಯಲ್ಲಿ ಮುಂದುವರೆಯಲು ಅಗತ್ಯ ದೈಹಿಕ ಸಾಮರ್ಥ್ಯದ ಮಾನದಂಡಗಳನ್ನು ಪೂರೈಸುವವರೆಗೆ ಅವರನ್ನು ಹೊರಗಿಡದೆ, ಶಾಶ್ವತ ಕಮಿಷನ್ ಪಡೆಯಾಗಿ ಮುಂದುವರೆಸಬೇಕು ಎಂದು ಅದು ತೀರ್ಪು ನೀಡಿತು.

ಬಬಿತಾ ಪುನಿಯಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ಚಾರಿತ್ರಿಕ ತೀರ್ಪನ್ನು ಗಮನದಲ್ಲಿಟ್ಟುಕೊಂಡು ವರ್ಷಕ್ಕೆ 250 ಶಾಶ್ವತ ಕಮಿಷನ್‌ಗಳ ಗರಿಷ್ಠ ಮಿತಿಯನ್ನು ಈ ಬಾರಿ ಅನುಸರಿಸದ ಕಾರಣ ಇಂತಹ ಹೆಚ್ಚುವರಿ ಮಾನದಂಡಗಳನ್ನು ನಿಗದಿಪಡಿಸಲಾಗಿದೆ ಎಂಬ ಕೇಂದ್ರ ಸರ್ಕಾರದ ವಾದವನ್ನು ನ್ಯಾಯಾಲಯ ತಿರಸ್ಕರಿಸಿತು.

"ಈ ನಿರ್ಬಂಧ ಹೇರುವುದರಿಂದ ಮಹಿಳಾ ಅಧಿಕಾರಿಗಳ ಹಾದಿಗೆ ತೊಂದರೆ ಉಂಟು ಮಾಡಿದಂತಾಗುತ್ತದೆ. ಪಿಸಿಗೆ (ಶಾಶ್ವತ ಕಮಿಷನ್) ಮಹಿಳಾ ಎಸ್‌ಎಸ್‌ಸಿ ಅಧಿಕಾರಿಗಳನ್ನು ಪರಿಗಣಿಸುವ ಪ್ರಕ್ರಿಯೆಯು ಬಬಿತಾ ಪುನಿಯಾ ತೀರ್ಪಿನ ತಡವಾಗಿ ಸಲ್ಲಿಸಿದ ಅರ್ಜಿಯನ್ನು ಆಧರಿಸಿದೆ. ಅತ್ಯುತ್ತಮ ಮಹಿಳಾ ಅಧಿಕಾರಿಗಳು ತಮ್ಮ 5 ಮತ್ತು 10 ನೇ ವರ್ಷದ ಸೇವೆಯಲ್ಲಿ ಪುರಸ್ಕಾರ ಮತ್ತು ಅರ್ಹತೆ ಪಡೆದಿಲ್ಲ ಎಂಬ ಕಾರಣಕ್ಕೆ ನಿರ್ಲಕ್ಷಿಸಲಾಗಿದೆ.

ಸಾಮಾಜಿಕ ಸಂರಚನೆಗಳು " ಪುರುಷರಿಂದ ಪುರುಷರಿಗಾಗಿ ರೂಪಿತವಾಗಿವೆ, ಕೆಲವು ನಿರುಪದ್ರವಕಾರಿಯಾಗಿ ಕಾಣಿಸಬಹುದು ಆದರೆ ಇದು ನಮ್ಮ ಸಮಾಜದ ಪಿತೃಪ್ರಧಾನತೆಯ ಪ್ರತಿಬಿಂಬವಾಗಿದೆ. ತೋರಿಕೆಯ ಸಮಾನತೆ ಎಂಬುದು ಸಂವಿಧಾನದ ನೈಜ ತತ್ವಗಳಿಗೆ ಸರಿಹೊಂದುವುದಿಲ್ಲ" ಎಂದು ನ್ಯಾಯಾಲಯ ಇದೇ ಸಂದರ್ಭದಲ್ಲಿ ತಿಳಿಸಿದೆ.

ಕಳೆದ ವರ್ಷ ಫೆಬ್ರವರಿಯಲ್ಲಿ ನೀಡಿದ ಐತಿಹಾಸಿಕ ತೀರ್ಪಿನಲ್ಲಿ, ಸೈನ್ಯದ ಮಹಿಳಾ ಅಧಿಕಾರಿಗಳಿಗೆ ತಮ್ಮ ಪುರುಷ ಸಹೋದ್ಯೋಗಿಗಳಿಗೆ ಸಮನಾಗಿ ಶಾಶ್ವತ ಆಯೋಗ ನೀಡಬೇಕೆಂದು ಸುಪ್ರೀಂ ಕೋರ್ಟ್ ನಿರ್ದೇಶಿಸಿತ್ತು. ಪುರುಷರು ದೈಹಿಕವಾಗಿ ಬಲಶಾಲಿಯಾಗಿದ್ದರೆ ಮಹಿಳೆಯರು ದುರ್ಬಲರು ಮತ್ತು ಅಧೀನರೂ ಆಗಿದ್ದಾರೆ ಎಂಬ ಕೇಂದ್ರದ ನಿಲುವು ಲಿಂಗ ಏಕರೂಪತೆ ಮತ್ತು ಲಿಂಗ ಪಾತ್ರಗಳ ಬಗೆಗಿನ ಸಾಮಾಜಿಕ ಕಲ್ಪನೆಗಳನ್ನು ಆಧರಿಸಿದೆ ಎಂದು ನ್ಯಾಯಾಲಯ ಆಗ ಅಭಿಪ್ರಾಯಪಟ್ಟಿತ್ತು. ಅಲ್ಲದೆ, ಮೂರು ತಿಂಗಳೊಳಗೆ ಅದನ್ನು ಜಾರಿಗೊಳಿಸುವಂತೆ ಸೂಚಿಸಿತ್ತು.