ನಿರ್ಗತಿಕ ಮಹಿಳೆಯರು ಹೆತ್ತ ಮಕ್ಕಳ ಕಳ್ಳಸಾಗಣೆ ತಡೆ ಮತ್ತು ಪುನರ್ವಸತಿಗಾಗಿ ಸಮಾಜದ ಎಲ್ಲರ ಸಮನ್ವಯ ಮತ್ತು ಸಮಯೋಚಿತ ಬೆಂಬಲ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಹಾಗೂ ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರದ (ನಲ್ಸಾ) ಕಾರ್ಯನಿರ್ವಾಹಕ ಅಧ್ಯಕ್ಷರಾದ ಯು ಯು ಲಲಿತ್ ಶನಿವಾರ ತಿಳಿಸಿದರು.
ಬಾಂಬೆ ಹೈಕೋರ್ಟ್ ನ್ಯಾಯಮೂರ್ತಿಗಳಾದ ಎ ಎ ಸಯದ್ ಮತ್ತು ಎಸ್ ಎಸ್ ಶಿಂಧೆ ಅವರೊಂದಿಗೆ ನ್ಯಾ. ಲಲಿತ್ ಅವರು ಪ್ರೇರಣಾ ಮುನ್ಸಿಪಲ್ ಶಾಲೆಗೆ ಭೇಟಿ ನೀಡಿದ್ದರು. ಲೈಂಗಿಕ ಕಾರ್ಯಕರ್ತೆಯರ ಮಕ್ಕಳಿಗಾಗಿ ದುಡಿಯುವ ಪ್ರೇರಣಾ ಪ್ರತಿಷ್ಠಾನದ ಪ್ರತಿನಿಧಿಗಳೊಂದಿಗೆ ಅವರು ಮಾತುಕತೆ ನಡೆಸಿದರು.
ನ್ಯಾಯ ಮತ್ತು ಪೂರ್ವ ಬಂಧನ, ಬಂಧನ ಹಾಗೂ ರಿಮಾಂಡ್ ಹಂತ ಎಂಬ ವಿಷಯದ ಕುರಿತು ಇಂದು ನಡೆದ ರಾಜ್ಯ ಮಟ್ಟದ ಸಮ್ಮೇಳನದಲ್ಲಿಯೂ ಅವರು ಭಾಗಿಯಾದರು.
ಗುಣಮಟ್ಟದ ಕಾನೂನು ನೆರವು ನೀಡುವ ಮೂಲಕ ಸಮಾಜದಲ್ಲಿ ಧ್ವನಿ ಇಲ್ಲದವರಿಗೆ ಕಾನೂನು ಸಹಾಯದ ಬಾಗಿಲು ತೆರೆಯಿರಿ ಎಂದು ಅವರು ಈ ಸಂದರ್ಭದಲ್ಲಿ ಮನವಿ ಮಾಡಿದರು. ಬಂಧಿತ ವ್ಯಕ್ತಿಗೆ ನ್ಯಾಯ ಮತ್ತು ಗುಣಮಟ್ಟದ ಕಾನೂನು ನೆರವು ಶೀಘ್ರ ಸಮಯದಲ್ಲಿ ಲಭ್ಯವಾಗುವಂತೆ ನೋಡಿಕೊಳ್ಳಬೇಕು ಎಂದು ನ್ಯಾ. ಲಲಿತ್ ಒತ್ತಾಯಿಸಿದರು.