Justice BR Gavai and Justice KV Viswanathan 
ಸುದ್ದಿಗಳು

ವೈದ್ಯಕೀಯ ಕಾಲೇಜಿಗೆ ಕಿರುಕುಳ: ರಾಷ್ಟ್ರೀಯ ವೈದ್ಯಕೀಯ ಆಯೋಗಕ್ಕೆ ₹ 10 ಲಕ್ಷ ದಂಡ ವಿಧಿಸಿದ ಸುಪ್ರೀಂ

ಸೀಟು ಹೆಚ್ಚಳಕ್ಕೆ ಅನುಪತಿ ಪಡೆಯುವುದಕ್ಕಾಗಿ ಸಂಸ್ಥೆಯೊಂದನ್ನು ನ್ಯಾಯಾಲಯದಿಂದ ನ್ಯಾಯಾಲಯಕ್ಕೆ ಅಲೆಯುವಂತೆ ಮಾಡಿದ ಎನ್ಎಂಸಿ ಮಾದರಿ ದಾವೆದಾರನಲ್ಲ ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿತು.

Bar & Bench

ಕಾಲೇಜಿನ ವೈದ್ಯಕೀಯ ಸೀಟುಗಳ ಸಂಖ್ಯೆ ಹೆಚ್ಚಿಸುವಂತೆ ಕೋರಿದ್ದ ವೈದ್ಯಕೀಯ ಕಾಲೇಜೊಂದಕ್ಕೆ ʼಕಿರುಕುಳʼ ನೀಡಿದ ರಾಷ್ಟ್ರೀಯ ವೈದ್ಯಕೀಯ ಆಯೋಗಕ್ಕೆ (ಎನ್‌ಎಂಸಿ) ಸುಪ್ರೀಂ ಕೋರ್ಟ್‌ ಸೋಮವಾರ ₹ 10 ಲಕ್ಷ ದಂಡ ವಿಧಿಸಿದೆ [ಎನ್‌ಎಂಸಿ ಮತ್ತು ಕೆಎಂಸಿಟಿ ಕಾಲೇಜು ಪ್ರಾಂಶುಪಾಲರ ನಡುವಣ ಪ್ರಕರಣ].

ಕೆೇರಳದ ಕೆಎಂಸಿಟಿ ವೈದ್ಯಕೀಯ ಕಾಲೇಜಿಗೆ ಸೀಟು ಹೆಚ್ಚಳಕ್ಕೆ ಅನುಮತಿ ನೀಡಿದ ಕೇರಳ ಹೈಕೋರ್ಟ್‌ ತೀರ್ಪಿನ ವಿರುದ್ಧ ಎನ್‌ಎಂಸಿ ಸಲ್ಲಿಸಿದ್ದ ಮೇಲ್ಮನವಿಗೆ ಸಂಬಂಧಿಸಿದಂತೆ ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಕೆ ವಿ ವಿಶ್ವನಾಥನ್ ಅವರಿದ್ದ ಪೀಠ ಈ ಆದೇಶ ನೀಡಿದೆ.

“ಮೇಲ್ನೋಟಕ್ಕೆ ಎನ್‌ಎಂಸಿ ವರ್ತನೆ ಮಾದರಿ ದಾವರೆದಾರನಂತೆ ಇಲ್ಲ ಎಂದು ನಮಗೆ ಅನ್ನಿಸಿದೆ. ಎನ್‌ಎಂಸಿ ಸರ್ಕಾರದ ಅಂಗವಾಗಿದ್ದು ಅದು ನ್ಯಾಯಯುತ ಮತ್ತು ಸಮಂಜಸವಾದ ರೀತಿಯಲ್ಲಿ ಕಾರ್ಯನಿರ್ವಹಬೇಕೆಂಬ ನಿರೀಕ್ಷೆ ಇದೆ. ಕಳೆದ 18 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಸಂಸ್ಥೆಯೊಂದು ಹೊಸ ಸಂಸ್ಥೆಯಲ್ಲದಿರುವಾಗ ಅದನ್ನು ನ್ಯಾಯಾಲಯದಿಂದ ನ್ಯಾಯಾಲಯಕ್ಕೆ ಅಲೆಯುವಂತೆ ಮಾಡಿರುವುದು ನಮ್ಮ ದೃಷ್ಟಿಯಲ್ಲಿ ಕಿರುಕುಳ ನೀಡುವ ಯತ್ನ” ಎಂದು ಸರ್ವೋಚ್ಚ ನ್ಯಾಯಾಲಯ ಕಿಡಿಕಾರಿತು.

ವೈದ್ಯಕೀಯ ಮೌಲ್ಯಮಾಪನ ಮತ್ತು ಮೌಲ್ಯಾಂಕ ಮಂಡಳಿ (MARB) ಆರಂಭದಲ್ಲಿ ಕಾಲೇಜಿಗೆ 2023-24 ರ ಶೈಕ್ಷಣಿಕ ಸಾಲಿಗೆ ಸಂಬಂಧಿಸಿದಂತೆ ಸೀಟು ಮಿತಿಯನ್ನು 150ರಿಂದ 250ಕ್ಕೆ ಹೆಚ್ಚಿಸಲು ಅನುಮೋದನೆ ನೀಡಿತ್ತು. ಆದರೆ ಈ ಅನುಮೋದನೆಯನ್ನು ಕೆಲ ಕಾರಣ ನೀಡಿ ಎನ್‌ಎಂಸಿ ನಿರಾಕರಿಸಿದ್ದರಿಂದ ಹೈಕೋರ್ಟ್‌ನಲ್ಲಿ ಪ್ರಕರಣ ಬಾಕಿ ಉಳಿದಿತ್ತು.  

ಎನ್‌ಎಂಸಿಯ ಯಾವುದೇ ಸಂದೇಹಗಳನ್ನು ಹೈಕೋರ್ಟ್‌ನಲ್ಲಿ ಸ್ಪಷ್ಟಪಡಿಸಿಕೊಳ್ಳಬಹುದಿತ್ತು ಎಂದಿರುವ ನ್ಯಾಯಾಲಯ ಎನ್‌ಎಂಸಿ ಸಲ್ಲಿಸಿರುವ ವಿಶೇಷ ಅನುಮತಿ ಅರ್ಜಿ ಕಾನೂನು ಪ್ರಕ್ರಿಯೆಯ ದುರುಪಯೋಗವಾಗಿದ್ದು ಅದು ರೂ. 10,00,000/- ದಂಡವನ್ನು ನಾಲ್ಕು ವಾರಗಳಲ್ಲಿ ಪಾವತಿಸಬೇಕು ಎಂದು ನ್ಯಾಯಾಲಯ ತಾಕೀತು ಮಾಡಿದೆ.

ಸುಪ್ರೀಂ ಕೋರ್ಟ್ ವಕೀಲರ ಸಂಘದ ಕ್ಷೇಮಾಭಿವೃದ್ಧಿ ನಿಧಿ ಮತ್ತು ಗ್ರಂಥಾಲಯದ ಉಪಯೋಗಕ್ಕಾಗಿ ಸುಪ್ರೀಂ ಕೋರ್ಟ್ ಅಡ್ವೊಕೇಟ್ ಆನ್-ರೆಕಾರ್ಡ್ ಸಂಘಕ್ಕೆ ತಲಾ ₹5 ಲಕ್ಷ ಪಾವತಿಸಲು ಪೀಠ ಸೂಚಿಸಿದೆ.