ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಯನ್ನು ದೋಷಿ ಎಂದು ತೀರ್ಮಾನಿಸಲು ವಿಶೇಷವಾಗಿ ಮೃತ್ಯುಪೂರ್ವ ಘೋಷಣೆಯ ಅಸಲಿಯತ್ತಿನ ಬಗ್ಗೆ ಅನುಮಾನಗಳಿದ್ದರೆ ಅದರ ಮೇಲೆ ನಂಬಿಕೆ ಇರಿಸುವುದರ ಬಗ್ಗೆ ಸುಪ್ರೀಂ ಕೋರ್ಟ್ ಈಚೆಗೆ ಎಚ್ಚರಿಸಿದೆ [ಇರ್ಫಾನ್ @ ನಾಕಾ ವರ್ಸಸ್ ಉತ್ತರ ಪ್ರದೇಶ]. ಮೃತ್ಯುಪೂರ್ವ ಘೋಷಣೆಯು ಸಾಯುವ ವ್ಯಕ್ತಿಯು ತನ್ನ ಸಾವಿಗೆ ಕಾರಣ ಮತ್ತು ಸಂದರ್ಭ ವಿವರಿಸುವ ಹೇಳಿಕೆಯಾಗಿರುತ್ತದೆ.
ಮೃತ್ಯುಪೂರ್ವ ಘೋಷಣೆಯ ಅಸಲಿಯತ್ತಿನ ಬಗ್ಗೆ ಅನುಮಾನಗಳು ಮೂಡಿದರೆ ಶಿಕ್ಷೆ ವಿಧಿಸಲು ಅದೊಂದನ್ನೇ ಆಧರಿಸಲಾಗದು ಎಂದು ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ, ಜೆ ಬಿ ಪರ್ದಿವಾಲಾ ಮತ್ತು ಪಿ ಕೆ ಮಿಶ್ರಾ ಅವರ ನೇತೃತ್ವದ ತ್ರಿಸದಸ್ಯ ಪೀಠ ಹೇಳಿದೆ.
“ಮೃತ್ಯುಪೂರ್ವ ಘೋಷಣೆಯ ಸತ್ಯಾಸತ್ಯತೆಯ ಬಗ್ಗೆ ಅನುಮಾನಗಳು ಇದ್ದರೆ ಅಥವಾ ಮೃತ್ಯುಪೂರ್ವ ಘೋಷಣೆಯು ನೈಜವಲ್ಲ ಎಂದು ತೋರಿಸಲು ಸಾಕ್ಷಿಗಳು ಇದ್ದರೆ ಅದನ್ನು ಒಂದು ಸಾಕ್ಷಿಯನ್ನಾಗಿ ಪರಿಗಣಿಸಿಬೇಕೆ ವಿನಾ ಅದೊಂದನ್ನೇ ದೋಷಿ ಎಂದು ತೀರ್ಮಾನಿಸಲು ಬಳಸಲಾಗದು” ಎಂದು ನ್ಯಾಯಾಲಯ ಹೇಳಿದೆ.
ಆರೋಪಿಯನ್ನು ದೋಷಿ ಎಂದು ತೀರ್ಮಾನಿಸುವುದಕ್ಕೂ ಮುನ್ನ ಮೃತ್ಯುಪೂರ್ವ ಘೋಷಣೆಯನ್ನು ಎಷ್ಟು ಆಧರಿಸಬೇಕು ಎಂಬುದಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು 11 ವಿಚಾರಗಳನ್ನು ರೂಪಿಸಿದೆ. ಅವುಗಳೆಂದರೆ:
ಹೇಳಿಕೆ ನೀಡಿರುವ ವ್ಯಕ್ತಿಯು ಸಾವು ನಿರೀಕ್ಷಿಸುತ್ತಿದ್ದನೇ?
ಆರಂಭಿಕ ಅವಕಾಶದಲ್ಲಿ ಮೃತ್ಯು ಘೋಷಣೆ ಮಾಡಲಾಗಿದೆಯೇ? (ಮೊದಲ ಅವಕಾಶ ನಿಯಮ ಎಂದು ಕರೆಯಲ್ಪಡುತ್ತದೆ)
ಸಾಯುತ್ತಿರುವ ವ್ಯಕ್ತಿಯಿಂದ ಮೃತ್ಯುಪೂರ್ವ ಹೇಳಿಕೆ ನೀಡಿಸಲಾಗಿದೆ ಎಂಬುದಕ್ಕೆ ನಂಬಲರ್ಹ ಅನುಮಾನಗಳು ಇವೆಯೇ?
ಮೃತ್ಯುಪೂರ್ವ ಘೋಷಣೆಯು ಹೇಳಿಸಲ್ಪಟ್ಟಿರುವಂತಹದ್ದೇ, ಹೇಳಿಕೊಟ್ಟಿರುವಂತಹದ್ದೇ ಅಥವಾ ಪೊಲೀಸರ ಸೂಚನೆ ಅಥವಾ ಸ್ಥಾಪಿತ ಹಿತಾಸಕ್ತಿಗಳಿಂದ ಬರೆದಿರುವುದೇ?
ಹೇಳಿಕೆಯನ್ನು ಸೂಕ್ತವಾದ ರೀತಿಯಲ್ಲಿ ದಾಖಲಿಸಿಲ್ಲವೇ?
ಇಡೀ ಪ್ರಕರಣವನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳುವ ಅವಕಾಶ ಮೃತ್ಯುಪೂರ್ವ ಘೋಷಣೆಗಾರನಿಗೆ ಇತ್ತೇ?
ಮೃತ್ಯುಪೂರ್ವ ಘೋಷಣೆಯಲ್ಲಿ ಮೊದಲಿನಿಂದ ಕೊನೆಯವರೆಗೆ ಸಮಂಜಸತೆ ಇದೆಯೇ?
ಮೃತ್ಯುಪೂರ್ವ ಘೋಷಣೆಯು ಏನಾಯಿತು ಎನ್ನುವುದರ ಬಗ್ಗೆ ಸ್ವತಃ ಸಾಯುತ್ತಿರುವ ವ್ಯಕ್ತಿಯು ಹೊಂದಿರುವ ಕಲ್ಪನೆಯ ಅಭಿವ್ಯಕ್ತಿಯೇ ಅಥವಾ ಕಾಲ್ಪನಿಕತೆಯೇ?
ಮೃತ್ಯುಪೂರ್ವ ಘೋಷಣೆಯು ಸ್ವಇಚ್ಛೆಯಿಂದ ಬರೆದಿರುವುದೇ?
ಹಲವು ಮೃತ್ಯು ಘೋಷಣೆಗಳು ಇದ್ದಾಗ ಮೊದಲನೆಯದು ನೈಜತೆಯ ವಿಶ್ವಾಸ ಹುಟ್ಟಿಸುತ್ತದೆಯೇ, ಅದು ಇತರೆ ಮೃತ್ಯುಪೂರ್ವ ಘೋಷಣೆಗಳಿಗೆ ಪೂರಕವಾಗಿದೆಯೇ?
ದೈಹಿಕ ಹಾನಿಯಾಗಿರುವುದರಿಂದ ಸಂತ್ರಸ್ತರಿಗೆ ಮೃತ್ಯುಪೂರ್ವ ಘೋಷಣೆ ಮಾಡಲು ಅಸಾಧ್ಯವಾಗಿದೆಯೇ?
ಯಾವಾಗ ಮೃತ್ಯುಪೂರ್ವ ಘೋಷಣೆಗೆ ಒಪ್ಪಬೇಕು ಎಂಬುದಕ್ಕೆ ಸಂಬಂಧಿಸಿದಂತೆ ಯಾವುದೇ ಕಠಿಣ ಅಥವಾ ತುರ್ತು ನಿಯಮಗಳಿಲ್ಲ. ಪ್ರತಿ ಪ್ರಕರಣದ ಸತ್ಯ ಆಧರಿಸಿ ಮತ್ತು ಅದರ ಸತ್ಯಾಸತ್ಯತೆ ಮನವರಿಕೆಯಾದ ನಂತರ ಮೃತ್ಯುಪೂರ್ವ ಘೋಷಣೆಯನ್ನು ಅವಲಂಬಿಸಬೇಕೆ ಎಂದು ನಿರ್ಧರಿಸುವ ಕರ್ತವ್ಯ ಹೊಣೆ ನ್ಯಾಯಾಲಯಗಳ ಮೇಲಿದೆ ಎಂದು ಹೇಳಲಾಗಿದೆ.