Supreme Court of India 
ಸುದ್ದಿಗಳು

ದೋಷಯುಕ್ತ ಅಫಿಡವಿಟ್‌ ಸಲ್ಲಿಸಿದ್ದಕ್ಕೆ ತೆಲಂಗಾಣ ಸರ್ಕಾರಕ್ಕೆ ₹5 ಲಕ್ಷ ದಂಡ ವಿಧಿಸಿದ ಸುಪ್ರೀಂ ಕೋರ್ಟ್‌

ಅರಣ್ಯ ಭೂಮಿ ರಕ್ಷಣೆಯ ಮಹತ್ವದ ಬಗ್ಗೆ ಮಾತನಾಡಿರುವ ಸುಪ್ರೀಂ ಕೋರ್ಟ್‌ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳಿಂದ ದಂಡದ ಹಣವನ್ನು ಸರ್ಕಾರ ವಸೂಲಿ ಮಾಡಿಕೊಳ್ಳಬಹುದು ಎಂದಿದೆ.

Bar & Bench

ಪ್ರಕರಣವೊಂದರ ಸಂಬಂಧ ದೋಷಯುಕ್ತ ಅಫಿಡವಿಟ್‌ ಸಲ್ಲಿಸಿದ್ದಕ್ಕೆ ತೆಲಂಗಾಣ ಸರ್ಕಾರಕ್ಕೆ ₹5 ಲಕ್ಷ ದಂಡ ವಿಧಿಸಿ ಗುರುವಾರ ಸುಪ್ರೀಂ ಕೋರ್ಟ್‌ ಆದೇಶಿಸಿದೆ.

ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳಿಂದ ದಂಡದ ಹಣವನ್ನು ಸರ್ಕಾರ ವಸೂಲಿ ಮಾಡಿಕೊಳ್ಳಬಹುದು ಎಂದು ನ್ಯಾಯಮೂರ್ತಿಗಳಾದ ಎಂ ಎಂ ಸುಂದರೇಶ್‌ ಮತ್ತು ಎಸ್‌ವಿಎನ್‌ ಭಟ್ಟಿ ಅವರ ನೇತೃತ್ವದ ವಿಭಾಗೀಯ ಪೀಠ ಸ್ಪಷ್ಟಪಡಿಸಿದೆ.

ದಾವೆಗೆ ಕಾರಣವಾಗಿರುವ ಭೂಮಿಯು ಅರಣ್ಯಕ್ಕೆ ಸೇರಿದೆಯೋ ಇಲ್ಲವೋ ಎಂಬುದರ ಸಂಬಂಧ ಜಿಲ್ಲಾ ದಂಡಾಧಿಕಾರಿಯ ನಿಲುವನ್ನು ಅರ್ಜಿಯಲ್ಲಿ ಪ್ರಶ್ನಿಸಲಾಗಿತ್ತು.

“ದಾವೆ ಆಸ್ತಿಯನ್ನು ಅರಣ್ಯ ಭೂಮಿ ಎಂದು ವರ್ಗೀಕರಿಸಿದ ಹೊರತಾಗಿಯೂ ರಾಜ್ಯದ ಆಡಳಿತವು ವಿಭಿನ್ನ ನಿಲುವುಗಳನ್ನು ತೆಗೆದುಕೊಂಡಿತ್ತು. ಆದರೆ ಅಂತಿಮವಾಗಿ ಈ ನ್ಯಾಯಾಲಯದ ಮುಂದೆ ಅಫಿಡವಿಟ್ ಸಲ್ಲಿಸುವ ಮೂಲಕ ಸರಿಪಡಿಸಲಾಗಿದೆ” ಎಂದು ನ್ಯಾಯಾಲಯ ಹೇಳಿದೆ.

ಸರ್ಕಾರಿ ಅಧಿಕಾರಿಗಳು ವಿಭಿನ್ನ ನಿಲುವು ತಳೆದಿದ್ದರಿಂದ ಅರಣ್ಯ ಭೂಮಿ ಎಂದು ಅಧಿಸೂಚನೆ ಹೊರಡಿಸಿದ್ದ ಹೊರತಾಗಿಯೂ ನಿರ್ದಿಷ್ಟ ಭೂಮಿಯ ಹಕ್ಕನ್ನು ಖಾಸಗಿ ವ್ಯಕ್ತಿಗೆ ನೀಡಲಾಗಿತ್ತು ಎಂದು ನ್ಯಾಯಾಲಯ ಹೇಳಿದೆ.

ಅರಣ್ಯ ಭೂಮಿಯನ್ನು ಖಾಸಗಿ ವ್ಯಕ್ತಿಗೆ ಮಂಜೂರು ಮಾಡಿದ್ದನ್ನು ಎತ್ತಿ ಹಿಡಿದಿದ್ದ 2021ರ ಹೈಕೋರ್ಟ್‌ ಆದೇಶವನ್ನು ಬದಿಗೆ ಸರಿಸಿರುವ ಸುಪ್ರೀಂ ಕೋರ್ಟ್‌ ಅರಣ್ಯ ಭೂಮಿ ರಕ್ಷಿಸಬೇಕಾದ ಮಹತ್ವವನ್ನು ಒತ್ತಿ ಹೇಳಿದೆ.

“ಅರಣ್ಯಗಳ ಮಹತ್ವದ ವಿಷಯ ಬಂದಾಗ ಮಾನವರು ಬೇಕೆಂದೇ ವಿಸ್ಮೃತಿಗೆ ಜಾರುತ್ತಾರೆ. ಇಂಗಾಲದ ಡೈ ಆಕ್ಸೈಡ್‌ ಪಡೆದು ಆಮ್ಲಜನಕ ನೀಡುವ ಅರಣ್ಯ ಸಂಪನ್ಮೂಲವು ಭೂಮಿಗೆ ಜೀವ ಒದಗಿಸುತ್ತದೆ. ಈ ಮೂಲಕ ವಿಭಿನ್ನ ಜೀವಜಂತುಗಳ ಬೆಳವಣಿಗೆಗೆ ಉತ್ತಮ ವಾತಾವರಣ ಕಲ್ಪಿಸುತ್ತದೆ. ಅರಣ್ಯಗಳ ಚೈತನ್ಯವು ಭೂಮಿಯನ್ನು ಮುನ್ನಡೆಸುತ್ತದೆ. ಇತಿಹಾಸವನ್ನು ಮಾನವರ ಹಳದಿ ಕಣ್ಣಿನಿಂದ ಅರ್ಥಮಾಡಿಕೊಳ್ಳಲಾಗದು ಬದಲಿಗೆ ಪರಿಸರ ದೃಷ್ಟಿಕೋನದಿಂದ ನೋಡಬೇಕು” ಎಂದು ನ್ಯಾಯಾಲಯ ಹೇಳಿದೆ.

ಅರಣ್ಯವು ಮನುಷ್ಯನಿಗೆ ಎಲ್ಲವನ್ನೂ ನೀಡಿದರೂ ಜನರು ಮರಗಳನ್ನು ಕತ್ತರಿಸುತ್ತಾರೆ. ನಮ್ಮನ್ನು ನಾವೇ ನಾಶ ಮಾಡಿಕೊಳ್ಳುತ್ತಿದ್ದೇವೆ ಎಂಬ ಅರಿವೂ ನಮಗೆ ಇಲ್ಲವಾಗಿದೆ ಎಂದು ನ್ಯಾಯಾಲಯ ಹೇಳಿದೆ.