Sabarimala Temple  
ಸುದ್ದಿಗಳು

ಶಬರಿಮಲೆಗೆ ಮಹಿಳೆಯರ ಪ್ರವೇಶಕ್ಕೆ ತಕರಾರು: ಏಪ್ರಿಲ್ 7ರಿಂದ ವಿಚಾರಣೆ ನಡೆಸಲಿದೆ 9 ನ್ಯಾಯಮೂರ್ತಿಗಳ ಸುಪ್ರೀಂ ಪೀಠ

ದೇವಾಲಯಕ್ಕೆ ಮಹಿಳೆಯರ ಪ್ರವೇಶ ಕುರಿತು 2018ರಲ್ಲಿ ನೀಡಿದ ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸುವ ಮರುಪರಿಶೀಲನಾ ಅರ್ಜಿಗಳಿಗೆ ತನ್ನ ಬೆಂಬಲ ಇದೆ ಎಂದು ಕೇಂದ್ರ ಸರ್ಕಾರ ಇಂದು ತಿಳಿಸಿತು.

Bar & Bench

ಕೇರಳದ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಮಹಿಳೆಯರ ಪ್ರವೇಶ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಗಳನ್ನು ಒಂಬತ್ತು ನ್ಯಾಯಮೂರ್ತಿಗಳ ಸಾಂವಿಧಾನಿಕ ಪೀಠ ಏಪ್ರಿಲ್ 7ರಿಂದ ವಿಚಾರಣೆ ನಡೆಸಲಿದೆ ಎಂದು ಸುಪ್ರೀಂ ಕೋರ್ಟ್‌ ತಿಳಿಸಿದೆ.

ಧಾರ್ಮಿಕ ಹಕ್ಕುಗಳು ಮತ್ತು ಸ್ವಾತಂತ್ರ್ಯಗಳಿಗೆ ಸಂಬಂಧಿಸಿದ ಏಳು ಪ್ರಮುಖ ಕಾನೂನು ಪ್ರಶ್ನೆಗಳನ್ನು ಆ ವೇಳೆ ನ್ಯಾಯಾಲಯವು ಪರಿಶೀಲನೆ ನಡೆಸಲಿದೆ. ಈ ಪ್ರಶ್ನೆಗಳಿಗೆ ದೊರೆಯುವ ಉತ್ತರದ ಆಧಾರದಲ್ಲಿ ಶಬರಿಮಲೆ ದೇವಾಲಯಕ್ಕೆ ಮಹಿಳೆಯರಿಗೆ ಪ್ರವೇಶ  ಕುರಿತ ವಿವಾದದ ದಿಕ್ಕು ನಿರ್ಣಯವಾಗಲಿದೆ.

ಇದಲ್ಲದೆ ಹೊರಬೀಳಲಿರುವ ತೀರ್ಪು ದರ್ಗಾ ಇಲ್ಲವೇ ಮಸೀದಿಗೆ ಮುಸ್ಲಿಂ ಮಹಿಳೆಯರ ಪ್ರವೇಶ, ಪಾರ್ಸಿ ಮಹಿಳೆಯರು ಪಾರ್ಸಿಯಲ್ಲದವರೊಂದಿಗೆ ವಿವಾಹವಾದ ಬಳಿಕ ಅಗ್ಯಾರಿಗೆ ಪಡೆಯುವ ಪ್ರವೇಶ, ಹಾಗೂ ದಾವೂದಿ ಬೊಹ್ರಾ ಸಮುದಾಯದಲ್ಲಿ ಸ್ತ್ರೀಯರ ಗುಪ್ತಾಂಗ ಕತ್ತರಿಸುವ (ಎಫ್‌ಜಿಎಂ) ಪದ್ಧತಿ ಸೇರಿದಂತೆ ಬಾಕಿ ಇರುವ ಇತರೆ ಪ್ರಕರಣಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.

ಸಿಜೆಐ ಸೂರ್ಯ ಕಾಂತ್‌ ನೇತೃತ್ವದ ಪೀಠದಲ್ಲಿ ನ್ಯಾಯಮೂರ್ತಿಗಳಾದ ಜೊಯಮಲ್ಯ ಬಾಗ್ಚಿ ಹಾಗೂ ವಿಪುಲ್‌ ಎಂ ಪಂಚೋಲಿ ಅವರೂ ಇರಲಿದ್ದು ಪಕ್ಷಕಾರರು ಮಾರ್ಚ್ 14ರೊಳಗೆ ಲಿಖಿತ ವಾದಗಳನ್ನು ಸಲ್ಲಿಸಲು ಸೂಚಿಸಲಾಗಿದೆ. ವಿಚಾರಣೆ ಏಪ್ರಿಲ್ 22ರಂದು ಪೂರ್ಣಗೊಳ್ಳುವಂತೆ ಸುಪ್ರೀಂ ಕೋರ್ಟ್‌ ವೇಳಾಪಟ್ಟಿಯನ್ನು ನಿಗದಿಪಡಿಸಿದೆ. ಅದರಲ್ಲಿ ಪಕ್ಷಕಾರರು ಎಷ್ಟು ಅವಧಿಯಲ್ಲಿ ವಾದ ಮಂಡಿಸಬೇಕು ಎಂಬ ವಿವರ ಇದ್ದು ಅದನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಅದು ಸೂಚಿಸಿದೆ.

ಇದೇ ವೇಳೆ ದೇವಾಲಯಕ್ಕೆ ಮಹಿಳೆಯರ ಪ್ರವೇಶ ಕುರಿತು 2018ರಲ್ಲಿ ನೀಡಿದ ಸರ್ವೋಚ್ಚ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸುವ ಮರುಪರಿಶೀಲನಾ ಅರ್ಜಿಗಳಿಗೆ ತನ್ನ ಬೆಂಬಲ ಇದೆ ಎಂದು ಕೇಂದ್ರ ಸರ್ಕಾರ ಇಂದು ತಿಳಿಸಿತು. ಕೇಂದ್ರವನ್ನು ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಪ್ರತಿನಿಧಿಸಿದ್ದರು. “ಪ್ರಕರಣದ ವಿಚಾರಣೆ ವೇಳೆ ನಾವು ದಾಟಬೇಕಾಗುವ ಕೆಲವು ಅನಿರೀಕ್ಷಿತ ಅಡೆತಡೆಗಳು ಇರಬಹುದು,” ಎಂದು ಪೀಠ ಹೇಳಿದೆ.

9 ನ್ಯಾಯಮೂರ್ತಿಗಳ ಪೀಠ ಪರಿಶೀಲಿಸಲಿರುವ ಕಾನೂನು ಪ್ರಶ್ನೆಗಳು ಇಂತಿವೆ:

  • ಧಾರ್ಮಿಕ ಸ್ವಾತಂತ್ರ್ಯದ ವ್ಯಾಪ್ತಿ ಮತ್ತು ವ್ಯಾಪಕತೆ ಏನು?

  • ಸಂವಿಧಾನದ ವಿಧಿ 25ರಡಿ ವ್ಯಕ್ತಿಗಳ ಹಕ್ಕುಗಳು ಮತ್ತು ವಿಧಿ 26ರಡಿ ಧಾರ್ಮಿಕ ಪಂಥಗಳ ಹಕ್ಕುಗಳ ನಡುವಿನ ಪರಸ್ಪರ ಸಂಬಂಧ ಹೇಗೆ?

  • ಧಾರ್ಮಿಕ ಪಂಥಗಳ ಹಕ್ಕುಗಳು ಸಂವಿಧಾನದ ಭಾಗ IIIರ ಇತರ ವಿಧಾನಗಳಿಗೆ ಅಧೀನವೇ?

  • ವಿಧಿ 25 ಮತ್ತು 26ರಡಿ ‘ನೈತಿಕತೆʼ ಎಂಬುದರ ವ್ಯಾಪ್ತಿ ಮತ್ತು ಅರ್ಥ ಏನು? ಅದು ಸಂವಿಧಾನಾತ್ಮಕ ನೈತಿಕತೆಯನ್ನು ಒಳಗೊಂಡಿದೆಯೇ?

  • ಧಾರ್ಮಿಕ ಪಂಥಗಳಿಗೆ ಮೂಲಭೂತ ಹಕ್ಕುಗಳಿವೆಯೇ?

  • ವಿಧಿ 25(2)(ಬಿ)ಯಲ್ಲಿನ “ಹಿಂದೂಗಳ ಒಂದು ವರ್ಗ”ಎಂಬ ಪದಪ್ರಯೋಗದ ಅರ್ಥ ಏನು?

  • ಯಾವುದೇ ಧಾರ್ಮಿಕ ಗುಂಪಿಗೆ ಸೇರಿದವನು ಅಲ್ಲದ ವ್ಯಕ್ತಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ ಆ ಧಾರ್ಮಿಕ ಗುಂಪಿನ ಆಚರಣೆಗಳನ್ನು ಪ್ರಶ್ನಿಸಬಹುದೇ?

2018ರ ಸೆಪ್ಟೆಂಬರ್‌ನಲ್ಲಿ ಐವರು ನ್ಯಾಯಮೂರ್ತಿಗಳ ಪೀಠ 4:1 ಬಹುಮತದೊಂದಿಗೆ ಶಬರಿಮಲೆ ದೇವಾಲಯಕ್ಕೆ ಎಲ್ಲಾ ವಯೋಮಾನದ ಮಹಿಳೆಯರು ಪ್ರವೇಶಿಸಲು ಹಸಿರು ನಿಶಾನೆ ತೋರಿತ್ತು. ತೀರ್ಪಿನ ಬಳಿಕ ಕೇರಳದಾದ್ಯಂತ ವ್ಯಾಪಕ ಪ್ರತಿಭಟನೆಗಳು ಭುಗಿಲೆದ್ದವು. ಹಲವಾರು ವ್ಯಕ್ತಿಗಳು ಮತ್ತು ಸಂಘಟನೆಗಳು ಉನ್ನತ ನ್ಯಾಯಾಲಯದ ಮುಂದೆ ಮರುಪರಿಶೀಲನಾ ಅರ್ಜಿಗಳನ್ನು ಸಲ್ಲಿಸಿದರು.