ನಿರ್ಲಕ್ಷ್ಯದಿಂದ ಚಾಲನೆ ಮಾಡಿ ವ್ಯಕ್ತಿಯ ಸಾವಿಗೆ ಕಾರಣನಾಗಿದ್ದ ತಮಿಳುನಾಡು ರಾಜ್ಯ ಸಾರಿಗೆ ಸಂಸ್ಥೆಗೆ (ಟಿಎನ್‌ಎಸ್‌ಟಿಸಿ) ಸೇರಿದ ಚಾಲಕನ ಅಪರಾಧವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದರೂ ಆತನಿಗೆ ವಿಧಿಸಿದ್ದ ಮೂರು ತಿಂಗಳ ಜೈಲು ಶಿಕ್ಷೆಯನ್ನು ಇತ್ತೀಚೆಗೆ ರದ್ದುಗೊಳಿಸಿದೆ. [ಇಳಂಗೋವನ್ ಮತ್ತು ಪೊಲೀಸ್ ಇನ್‌ಸ್ಪೆಕ್ಟರ್ ಮೂಲಕ ರಾಜ್ಯಸರ್ಕಾರ ನಡುವಣ ಪ್ರಕರಣ].
ಆತನಿಗೆ ಕಾರಾಗೃಹ ಸಜೆ ನೀಡುವ ಬದಲು ವಾಗ್ದಂಡನೆ ವಿಧಿಸಿ ಬಿಡುಗಡೆ ಮಾಡುವುದು ಸೂಕ್ತ ಎಂದು ನ್ಯಾಯಮೂರ್ತಿಗಳಾದ ಅನಿರುದ್ಧ ಬೋಸ್, ಪಿ ವಿ ಸಂಜಯ್ ಕುಮಾರ್ ಹಾಗೂ ಎಸ್ ವಿ ಎನ್ ಭಟ್ಟಿ ಅವರಿದ್ದ ಪೀಠ ಅಭಿಪ್ರಾಯಪಟ್ಟಿತು.
ಚಾಲಕನಿಗೆ ಕ್ರಿಮಿನಲ್ ಹಿನ್ನೆಲೆ ಇಲ್ಲ, ಮೇಲಾಗಿ ಅಪಘಾತದಲ್ಲಿ ಆತನ ಪಾತ್ರದ ಬಗ್ಗೆ ಯಾವುದೇ ಪ್ರತಿಕೂಲ ವರದಿ ಇಲ್ಲ ಎಂಬ ಅಂಶವನ್ನು ಗಮನಿಸಿದ ನ್ಯಾಯಾಲಯ ಈ ಆದೇಶ ನೀಡಿದೆ.
"ನಮ್ಮ ಅಭಿಪ್ರಾಯದಲ್ಲಿ, ಆತನಿಗೆ ಶಿಕ್ಷೆ ವಿಧಿಸುವ ಬದಲು ಎಚ್ಚರಿಕೆ ನೀಡಿ ಬಿಡುಗಡೆಗೊಳಿಸುವುದು ಸೂಕ್ತ ಎನಿಸುತ್ತದೆ. ಇಂತಹ ಸಂದರ್ಭದಲ್ಲಿ ಐಪಿಸಿ ಸೆಕ್ಷನ್ 337 ಮತ್ತು 304-ಎ ಅಡಿ ಶಿಕ್ಷೆಯ ಆದೇಶ ನೀಡುತ್ತೇವಾದರೂ ಮೂರು ತಿಂಗಳ ಅವಧಿಗೆ ಕಾರಾಗೃಹ ಶಿಕ್ಷೆ ವಿಧಿಸುವುದರ ಬದಲು ಭವಿಷ್ಯದಲ್ಲಿ ಕರ್ತವ್ಯ ನಿರ್ವಹಿಸುವಾಗ ಜಾಗರೂಕರಾಗಿರಬೇಕು ಎಂದು ಎಚ್ಚರಿಕೆ ನೀಡುತ್ತೇವೆ" ಎಂಬುದಾಗಿ ನ್ಯಾಯಾಲಯ ತಿಳಿಸಿತು.
ಜೂನ್ 2008ರಲ್ಲಿ ನಡೆದ ರಸ್ತೆ ಅಪಘಾತವೊಂದರಲ್ಲಿ ಸ್ಕೂಟರ್‌ನಲ್ಲಿ ಹಿಂಬದಿ ಕುಳಿತು ಪಯಣಿಸುತ್ತಿದ್ದ ದೂರುದಾರರ ಹೆಂಡತಿ ಮತ್ತು ಮಗು ಮೃತಪಟ್ಟಿದ್ದರು. ಚಾಲಕ ತಪ್ಪಿತಸ್ಥ ಎಂದು ಮದ್ರಾಸ್ ಹೈಕೋರ್ಟ್ ಘೋಷಿಸಿತ್ತಾದರೂ ಆತನಿಗೆ ಕೆಳ ನ್ಯಾಯಾಲಯ ವಿಧಿಸಿದ್ದ ಆರು ತಿಂಗಳ ಶಿಕ್ಷೆಯ ಬದಲಿಗೆ ಮೂರು ತಿಂಗಳ ಶಿಕ್ಷೆ ವಿಧಿಸಿತ್ತು. ಪ್ರಸಕ್ತ ವಿಚಾರಣೆ ವೇಳೆ ಚಾಲಕ ತಪ್ಪಿತಸ್ಥ ಎಂದು ಸುಪ್ರೀಂ ಕೋರ್ಟ್ ಘೋಷಿಸಿದರೂ ಹೈಕೋರ್ಟ್ ವಿಧಿಸಿದ್ದ ಶಿಕ್ಷೆಯನ್ನು ಅದು ಬದಿಗೆ ಸರಿಸಿದೆ.
ಸಂತ್ರಸ್ತರ ಕುಟುಂಬಕ್ಕೆ ₹ 3 ಲಕ್ಷ ಪರಿಹಾರ ನೀಡಬೇಕು ಎಂದು ತಮಿಳುನಾಡು ರಾಜ್ಯ ಸಾರಿಗೆ ನಿಗಮದಲ್ಲಿ ಪುನಃ ಕರ್ತವ್ಯ ಆರಂಭಿಸಿರುವ ಚಾಲಕನಿಗೆ ನ್ಯಾಯಾಲಯ ಆದೇಶಿಸಿದೆ. ಚಾಲಕ ತಪ್ಪಿತಸ್ಥ ಎಂದು ಘೋಷಿಸಲಾಗಿದ್ದರೂ ಆತ ಸಲ್ಲಿಸುತ್ತಿರುವ ಸೇವೆ ಮೇಲೆ ಅದು ಪರಿಣಾಮ ಬೀರುವುದಿಲ್ಲ ಎಂದು ಸ್ಪಷ್ಟಪಡಿಸಿರುವ ಪೀಠ 1958ರ ಅಪರಾಧಿಗಳ ವಿಚಾರಣೆ ಕಾಯಿದೆಯ ಸೆಕ್ಷನ್ 3, 5 ಹಾಗೂ 11 ರ ಅಡಿಯಲ್ಲಿ ಈ ನ್ಯಾಯಾಲಯದ ಅಧಿಕಾರ ವ್ಯಾಪ್ತಿ ಬಳಸಿ ಈ ಆದೇಶ ನೀಡುತ್ತಿರುವುದಾಗಿ ಅದು ವಿವರಿಸಿದೆ.