ಸರ್ವೋಚ್ಚ ನ್ಯಾಯಾಲಯ 
ಸುದ್ದಿಗಳು

ಯಾಂತ್ರಿಕವಾಗಿ ಮುಂಜಾಗ್ರತಾ ಬಂಧನ: ತೀರ್ಪು ಗಂಭೀರವಾಗಿ ಪರಿಗಣಿಸುವಂತೆ ಮತ್ತೆ ತೆಲಂಗಾಣದ ಕಿವಿ ಹಿಂಡಿದ ಸುಪ್ರೀಂ

ತೆಲಂಗಾಣ ಸರ್ಕಾರ ತನಗೆ ಮತ್ತೆ ಸಬೂಬು ಹೇಳುವುದಿಲ್ಲ ಎಂದು ಭಾವಿಸುವುದಾಗಿ ಸುಪ್ರೀಂ ಕೋರ್ಟ್‌ ತಿಳಿಸಿದೆ.

Bar & Bench

ವಿವೇಚನೆ ಇಲ್ಲದೆ ಯಾಂತ್ರಿಕ ರೀತಿಯಲ್ಲಿ ಮುಂಜಾಗ್ರತಾ ಕ್ರಮವಾಗಿ ಬಂಧನ ಆದೇಶ ಹೊರಡಿಸುವುದನ್ನು ತೆಲಂಗಾಣ ಸರ್ಕಾರ ತಪ್ಪಿಸಬೇಕು ಮತ್ತು ಅದಕ್ಕೆ ಸಂಬಂಧಪಟ್ಟಂತೆ ನೀಡಲಾದ ತೀರ್ಪುಗಳನ್ನು ಅದು ನಿರ್ಲಕ್ಷಿಸಬಾರದು ಎಂದು ಸುಪ್ರೀಂಕೋರ್ಟ್‌ ಈಚೆಗೆ ಪುನರುಚ್ಚರಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ತಾನು ಈ ಹಿಂದೆ ನೀಡಿರುವ ತೀರ್ಪುಗಳನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ , ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ ಮಾರ್ಚ್ 21ರಂದು ನೀಡಿದ ಆದೇಶದಲ್ಲಿ ಬುದ್ಧಿವಾದ ಹೇಳಿದೆ.

"ಇದು ತೆಲಂಗಾಣ ಸರ್ಕಾರದ ವಿರುದ್ಧದ ಮತ್ತೊಂದು ಮೊಕದ್ದಮೆಯಾಗಿದ್ದು ಮುಂಜಾಗ್ರತಾ ಕ್ರಮದ ಬಂಧನಕ್ಕೆ ಸಂಬಂಧಪಟ್ಟ ನ್ಯಾಯಾಲಯದ ಆದೇಶಗಳನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ಅಂತಹ ಆದೇಶಗಳನ್ನು ವಿವೇಚನಾರಹಿತವಾಗಿ ಮತ್ತು ವಾಡಿಕೆಯಂತೆ ಹೊರಡಿಸದಂತೆ ನೋಡಿಕೊಳ್ಳಬೇಕು. ತೆಲಂಗಾಣ ಸರ್ಕಾರ ನ್ಯಾಯಾಲಯಕ್ಕೆ ಮತ್ತೆ ಸಬೂಬು ಹೇಳುವುದಿಲ್ಲ ಎಂದು ಭಾವಿಸುತ್ತೇವೆ" ಎಂಬುದಾಗಿ ನ್ಯಾಯಾಲಯ ವಿವರಿಸಿದೆ.

ಸಿಜೆಐ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ, ಮನೋಜ್ ಮಿಶ್ರಾ

ರಾಚಕೊಂಡ ಪೊಲೀಸ್ ಆಯುಕ್ತರು ಹೊರಡಿಸಿದ್ದ ಮತ್ತು ತೆಲಂಗಾಣ ಹೈಕೋರ್ಟ್ ಎತ್ತಿಹಿಡಿದಿದ್ದ ಮಂಜಾಗ್ರತಾ ಕ್ರಮದ ಬಂಧನ ಆದೇಶವನ್ನು ಬದಿಗೆ ಸರಿಸಿದ ಸುಪ್ರೀಂ ಕೋರ್ಟ್‌ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

ಸಾರ್ವಜನಿಕ ಸುವ್ಯವಸ್ಥೆಗೆ ಧಕ್ಕೆ ತರುವ ಕಳ್ಳತನಗಳಲ್ಲಿ ಭಾಗಿಯಾಗಿರುವ ಗೂಂಡಾ ಎಂದು ಪರಿಗಣಿತನಾಗಿದ್ದ ಆರೋಪಿಯ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಹೈಕೋರ್ಟ್‌ ತಿರಸ್ಕರಿಸಿತ್ತು. ಹೀಗಾಗಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು.

ಪ್ರಸ್ತುತ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧನನಕ್ಕೆ ನೀಡಲಾದ ಕಾರಣ ಅನುಚಿತವಾಗಿದೆ. ಅನುಮಾನ ಮತ್ತು ತಪ್ಪೊಪ್ಪಿಗೆ ಹೇಳಿಕೆ ಮೇಲೆ ಪೊಲೀಸರು ಆರೋಪಿಯನ್ನು ಕರೆದೊಯ್ದಿರಬಹುದು ಎಂದು ಮೇಲ್ನೋಟಕ್ಕೆ ತೋರುತ್ತದೆ ಎಂದು ಅದು ಅಭಿಪ್ರಾಯಪಟ್ಟಿತು.

ಬಂಧನ ಆದೇಶವನ್ನು ಯಾಂತ್ರಿಕವಾಗಿ ಎತ್ತಿಹಿಡಿದಿದ್ದಕ್ಕಾಗಿ ಪೀಠ ಸಲಹಾ ಮಂಡಳಿಯನ್ನು ಕೂಡ ತರಾಟೆಗೆ ತೆಗೆದುಕೊಂಡಿತು. ಸಲಹಾ ಮಂಡಳಿ ಇಂತಹ ಬಂಧನ ಆದೇಶ ಎತ್ತಿ ಹಿಡಿಯುವ ರಬ್ಬರ್‌ ಸ್ಟಾಂಪ್‌ ಆಗಿ ವರ್ತಿಸಬಾರದು ಎಂದು ಅದು ನುಡಿಯಿತು. ಸಾಂವಿಧಾನಿಕ ಚೌಕಟ್ಟಿನಲ್ಲಿ ಮಂಡಳಿಗಳ ಮಹತ್ವವನ್ನು ಅದು ಇದೇ ವೇಳೆ ಸುದೀರ್ಘವಾಗಿ ಚರ್ಚಿಸಿತು.

ಸಂಬಂಧಿತ ಕಾಯಿದೆಗೆ ಇಲ್ಲವೇ ಈಗಾಗಲೇ ಇತ್ಯರ್ಥಗೊಂಡ ತೀರ್ಪಿಗೆ ವಿರುದ್ಧವಾಗಿ ಬಂಧನ ಆದೇಶ ಇದೆ ಎಂದು ಮಂಡಳಿಗೆ ಅನ್ನಿಸಿದಾಗ ಅದನ್ನು ತನ್ನ ವರದಿಯಲ್ಲಿ ವ್ಯಕ್ತಪಡಿಸಲು ಅದು ಹಿಂಜರಿಯಬಾರದು ಎಂದು ಪೀಠ ಸ್ಪಷ್ಟಪಡಿಸಿತು.

ಹೀಗಾಗಿ ಹೈಕೋರ್ಟ್ ಆದೇಶದ ವಿರುದ್ಧ ಮೇಲ್ಮನವಿ ಪುರಸ್ಕರಿಸಿದ ನ್ಯಾಯಾಲಯ ಆರೋಪಿಗಳನ್ನು ತಕ್ಷಣ ಬಿಡುಗಡೆ ಮಾಡುವಂತೆ ನಿರ್ದೇಶಿಸಿತು.

ಈ ಹಿಂದೆ ಅಂದರೆ 2022ರಲ್ಲಿ ಕೂಡ ಇಂಥದ್ದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ತೆಲಂಗಾಣ ಸರ್ಕಾರಕ್ಕೆ ಎಚ್ಚರಿಕೆ ನೀಡಿತ್ತು. ವ್ಯಕ್ತಿಯೊಬ್ಬ ಕ್ರಿಮಿನಲ್‌ ಮೊಕದ್ದಮೆಯಲ್ಲಿ ಸಿಲುಕಿದ್ದಾನೆ ಎಂಬ ಕಾರಣಕ್ಕಾಗಿ ಸರ್ಕಾರ ಆತನ ಮೇಲೆ ಮುಂಜಾಗ್ರತಾ ಕ್ರಮವಾಗಿ ಬಂಧಿಸುವ ಅಧಿಕಾರ ಚಲಾಯಿಸಲಾಗದು. ಇಂತಹ ಪ್ರವೃತ್ತಿ ಕೊನೆಗೊಳ್ಳಬೇಕು ಎಂದು ಅಂದಿನ ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್ ಮತ್ತು ಸೂರ್ಯ ಕಾಂತ್ ಅವರಿದ್ದ ಪೀಠ ತಿಳಿಸಿತ್ತು.

ಜೊತೆಗೆ ಈ ಸಂಬಂಧ ಸಾಂವಿಧಾನಿಕ ನ್ಯಾಯಾಲಯಗಳು ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಕೂಡ ಅದು ರೂಪಿಸಿತ್ತು. ಬಂಧನ ಆದೇಶಗಳು ಅಸ್ಪಷ್ಟವಾಗಿರದೆ ಕೈದಿಗಳು ಅರ್ಥಮಾಡಿಕೊಳ್ಳುವಂತಿರಬೇಕು ಎಂದು ಕೂಡ ಅದು ಆಗ ಸಲಹೆ ನೀಡಿತ್ತು.

[ತೀರ್ಪಿನ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]

Nenavath Bujji etc vs State of Telangana and ors.pdf
Preview