Supreme Court of India
Supreme Court of India 
ಸುದ್ದಿಗಳು

ಆಸ್ತಿ ಮಾರಾಟಕ್ಕೆ ಮಾಡಿಕೊಂಡ ಒಪ್ಪಂದ ಮಾಲೀಕತ್ವವನ್ನು ವರ್ಗಾಯಿಸದು ಅಥವಾ ಯಾವುದೇ ಸ್ವಾಮ್ಯತ್ವ ನೀಡದು: ಸುಪ್ರೀಂ

Bar & Bench

ಆಸ್ತಿ ಮಾರಾಟಕ್ಕೆ ಮಾಡಿಕೊಳ್ಳಲಾದ ಒಪ್ಪಂದ (ಅಗ್ರಿಮೆಂಟ್‌) ಮಾಲೀಕತ್ವದ ಹಕ್ಕುಗಳನ್ನು ವರ್ಗಾಯಿಸುವುದಿಲ್ಲ ಅಥವಾ ಆಸ್ತಿಯ ಖರೀದಿದಾರರಿಗೆ ಯಾವುದೇ ಸ್ವಾಮ್ಯತ್ವ ನೀಡುವುದಿಲ್ಲ ಎಂದು ಸುಪ್ರೀಂ ಕೋರ್ಟ್‌ ಈಚೆಗೆ ಹೇಳಿದೆ  [ಮುನಿಶಾಮಪ್ಪ ಮತ್ತು ಎಂ. ರಾಮಾ ರೆಡ್ಡಿ ಇನ್ನಿತರರ ನಡುವಣ ಪ್ರಕರಣ].

ಆಸ್ತಿ ವಿವಾದಕ್ಕೆ ಸಂಬಂಧಿಸಿದ ಸಿವಿಲ್‌ ಮೇಲ್ಮನವಿಯನ್ನು ನಿರ್ಧರಿಸುವ ಸಂದರ್ಭದಲ್ಲಿ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ರಾಜೇಶ್ ಬಿಂದಾಲ್ ಅವರಿದ್ದ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು.

“ಆಸ್ತಿ ಮಾರಾಟದ ಒಪ್ಪಂದ ವರ್ಗಾವಣೆ ಆಗುವುದಿಲ್ಲ; ಇದು ಮಾಲೀಕತ್ವದ ಹಕ್ಕುಗಳನ್ನು ವರ್ಗಾಯಿಸುವುದಿಲ್ಲ ಇಲ್ಲವೇ ಯಾವುದೇ ಸ್ವಾಮ್ಯತ್ವವನ್ನು ನೀಡುವುದಿಲ್ಲ” ಎಂದು ನ್ಯಾಯಾಲಯ ಹೇಳಿದೆ.

ಕರ್ನಾಟಕದವರಾದ ಪಕ್ಷಕಾರರು 1990 ರಲ್ಲಿ ಕ್ರಯ ಒಪ್ಪಂದ ಮಾಡಿಕೊಂಡ ಆಸ್ತಿಯ ವಿವಾದ ಇದಾಗಿದ್ದು ಮಾರಾಟಗಾರ ಬಳಿಕ ಕ್ರಯ ಪತ್ರ ಕಾರ್ಯಗತಗೊಳಿಸಲು ನಿರಾಕರಿಸಿದ್ದರು.

ಆದರೆ ಮಾರಾಟ ಒಪ್ಪಂದ ಖುದ್ದು ಕರ್ನಾಟಕ ಆಸ್ತಿ ವಿಘಟೀಕರಣ ತಡೆ ಮತ್ತು ಹಿಡುವಳಿ ವಿಲೀನ ಕಾಯಿದೆಯನ್ನು (Karnataka Prevention of Fragmentation and Consolidation of Holdings Act) ಉಲ್ಲಂಘಿಸುತ್ತದೆಯೇ ಎಂಬುದು ನ್ಯಾಯಾಲಯದ ಮುಂದಿದ್ದ ಪ್ರಶ್ನೆಯಾಗಿತ್ತು. ಕೆಲವು ಕ್ರಯ ಪತ್ರಗಳ ನೋಂದಣಿಯನ್ನು ಈ ಕಾಯಿದೆ ನಿಷೇಧಿಸುತ್ತದೆ. ಕಾಯಿದೆಯ ಅಡಿಯ ನಿರ್ಬಂಧದಿಂದಾಗಿ ಕ್ರಯ ಪತ್ರ ಜಾರಿಗೊಳಿಸುವುದನ್ನು ಪ್ರಕರಣದ ಮಾರಾಟಗಾರ ಮುಂದೂಡಿದ್ದರು.

ಕಾಲಾನಂತರ ಕಾನೂನು ರದ್ದುಗೊಂಡಿತ್ತು. ಆದರೆ ಮಾರಾಟಗಾರ ಕ್ರಯ ಪತ್ರ ಜಾರಿಗೊಳಿಸಲು ನಿರಾಕರಿಸಿದ್ದರು. ಇದರಿಂದಾಗಿ ಖರೀದಿದಾರ 2001ರಲ್ಲಿ ಪ್ರಸ್ತುತ ಮೊಕದ್ದಮೆ ದಾಖಲಿಸಿದ್ದರು.

ವಿಚಾರಣಾ ನ್ಯಾಯಾಲಯ ಮಾರಾಟ ಒಪ್ಪಂದ ಜಾರಿಗೊಳಿಸುವುದು ಅನುಮಾನಾಸ್ಪದವಾಗಿದ್ದು ಕಾಲಮಿತಿಯ ಅವಧಿ ಮೀರಿ ಪ್ರಕರಣ ದಾಖಲಿಸಲಾಗಿದೆ ಎಂದು ವಿಚಾರಣಾ ನ್ಯಾಯಾಲಯ 2004ರಲ್ಲಿ ತೀರ್ಪು ನೀಡಿತ್ತು. ಆದರೆ ಅವೆರಡೂ ಮನವಿಗಳ ಸಂದರ್ಭದಲ್ಲಿ ಖರೀದಿದಾರರ ಪರ ತೀರ್ಪಿತ್ತಿತ್ತು.

ಮಾರಾಟಗಾರ ಸಲ್ಲಿಸಿದ್ದ ಎರಡನೇ ಮೇಲ್ಮನವಿಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್‌ ʼಈ ಒಪ್ಪಂದ ವಿಘಟನಾ ಕಾಯಿದೆಯ ಉಲ್ಲಂಘನೆಯಾಗಿರುವುದರಿಂದ ಅನೂರ್ಜಿತವಾಗಿದೆ' ಎಂದು ತೀರ್ಪು ನೀಡಿತ್ತು. ಪರಿಣಾಮ  2011ರಲ್ಲಿ ಪ್ರಕರಣ ಸುಪ್ರೀಂ ಕೋರ್ಟ್‌ ಅಂಗಳ ತಲುಪಿತ್ತು.