ಸುದ್ದಿಗಳು

ಬೆಂಗಳೂರು ವಿವಿ ಉಪಕುಲಪತಿ ಹುದ್ದೆಗೆ ಅರ್ಜಿ ಆಹ್ವಾನ ಪ್ರಶ್ನಿಸಿರುವ ಮನವಿಯ ತುರ್ತು ವಿಚಾರಣೆಗೆ ಸುಪ್ರೀಂ ಸಮ್ಮತಿ

ರಾಜ್ಯ ಸರ್ಕಾರದ ಒಪ್ಪಿಗೆಯಿಲ್ಲದೆ ರಾಜ್ಯಪಾಲರು ಉಪಕುಲಪತಿ ಹುದ್ದೆಗೆ ಪ್ರೊ ವೇಣುಗೋಪಾಲ್ ಅವರನ್ನು ನೇಮಕ ಮಾಡಿದ್ದಾರೆ ಎಂಬ ಕಾರಣಕ್ಕಾಗಿ ಈ ವರ್ಷ ಮಾರ್ಚ್ 16ರಂದು ಕರ್ನಾಟಕ ಹೈಕೋರ್ಟ್ ಅವರ ನೇಮಕ ರದ್ದುಗೊಳಿಸಿತ್ತು.

Bar & Bench

ಬೆಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಹುದ್ದೆಗೆ ಅರ್ಜಿ ಆಹ್ವಾನಿಸಿ ಕರ್ನಾಟಕ ಸರ್ಕಾರ ಹೊರಡಿಸಿರುವ ಅಧಿಸೂಚನೆಯನ್ನು ವಿವಿಯ ಹಾಲಿ ಉಪ ಕುಲಪತಿಗಳು ಪ್ರಶ್ನಿಸಿದ್ದು ಅರ್ಜಿಯನ್ನು ತುರ್ತಾಗಿ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್‌ ಮಂಗಳವಾರ ಸಮ್ಮತಿ ಸೂಚಿಸಿದೆ (ಪ್ರೊ. ವೇಣುಗೋಪಾಲ್ ಕೆ.ಆರ್. ಮತ್ತು ಡಾ. ಸಂಗಮೇಶ್ ಪಾಟೀಲ್ ಇನ್ನಿತರರ ನಡುವಣ ಪ್ರಕರಣ).

ಇದೇ ವೇಳೆ ಹಾಲಿ ಉಪ ಕುಲಪತಿ ಪ್ರೊ. ಕೆ ಆರ್‌ ವೇಣುಗೋಪಾಲ್‌ ಅವರ ಅವಧಿ ಪೂರ್ಣಗೊಳಿಸಲು ಅವಕಾಶ ಮಾಡಿಕೊಟ್ಟಿರುವ ಸುಪ್ರೀಂ ಕೋರ್ಟ್‌ನ ಈ ಹಿಂದಿನ ಆದೇಶವನ್ನು ತೆರವುಗೊಳಿಸುವಂತೆ ಡಾ.ಸಂಗಮೇಶ್ ಪಾಟೀಲ್ ಎಂಬುವವರು ಸಲ್ಲಿಸಿರುವ ಅರ್ಜಿಯನ್ನು ಕೂಡ ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಹಿಮಾ ಕೊಹ್ಲಿ ಅವರಿದ್ದ ರಜಾಕಾಲೀನ ಪೀಠ ಪರಿಗಣಿಸಲಿದೆ.

ಜುಲೈನಲ್ಲಿ ವಿಚಾರಣೆಗೆ ಪಟ್ಟಿ ಮಾಡಲಾಗಿದ್ದ ಪ್ರಮುಖ ಪ್ರಕರಣ ಜೂನ್ 2ರಂದು ಅಂದರೆ ನಾಳೆ ವಿಚಾರಣೆಗೆ ಬರಲಿದೆ. ರಾಜ್ಯ ಸರ್ಕಾರದ ಒಪ್ಪಿಗೆಯಿಲ್ಲದೆ ರಾಜ್ಯಪಾಲರು ಉಪ ಕುಲಪತಿ ಹುದ್ದೆಗೆ ಪ್ರೊ ವೇಣುಗೋಪಾಲ್ ಅವರನ್ನು ನೇಮಕ ಮಾಡಿದ್ದಾರೆ ಎಂಬ ಕಾರಣಕ್ಕಾಗಿ ಏಕಸದಸ್ಯ ಪೀಠ ಅವರ ನೇಮಕಾತಿ ರದ್ದುಗೊಳಿಸಿದ್ದನ್ನು ಈ ವರ್ಷ ಮಾರ್ಚ್ 16 ರಂದು, ಕರ್ನಾಟಕ ಹೈಕೋರ್ಟ್ ಎತ್ತಿ ಹಿಡಿದಿತ್ತು. ಹೈಕೋರ್ಟ್‌ ಆದೇಶಕ್ಕೆ ಸುಪ್ರೀಂ ಕೋರ್ಟ್‌ ಏಪ್ರಿಲ್‌ 4ರಂದು ತಡೆ ನೀಡಿತ್ತು.

ರಾಜ್ಯದ ಮುಖ್ಯಮಂತ್ರಿಗಳು ತಮ್ಮ ಹೆಸರನ್ನು ಶಿಪಾರಸು ಮಾಡಿದ್ದು ತಮ್ಮನ್ನು ಉಪಕುಲಪತಿಯಾಗಿ ನೇಮಿಸಬೇಕಿತ್ತು ಎಂದು ಪಾಟೀಲ ಅವರು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ತುರ್ತು ಅರ್ಜಿಯಲ್ಲಿ ಪ್ರತಿಪಾದಿಸಿದ್ದಾರೆ.

ಪಾಟೀಲ್ ಅವರ ಪರ ಮಂಗಳವಾರ ವಾದ ಮಂಡಿಸಿದ ವಕೀಲೆ ಫರ್ಹೀನ್‌ ಪೆನ್ವಾಲೆ “ಹೊಸ ಉಪಕುಲಪತಿ ಹುದ್ದೆಗೆ ಅರ್ಜಿ ಆಹ್ವಾನಿಸಿ ವಿಶ್ವವಿದ್ಯಾಲಯವು ಈಗಾಗಲೇ ಹೊಸ ಅಧಿಸೂಚನೆ ಹೊರಡಿಸಿದೆ. ಅಪೀಲುದಾರರ (ಪ್ರೊ. ವೇಣುಗೋಪಾಲ್) ವಿರುದ್ಧ ದೊಡ್ಡ ಪ್ರಮಾಣದ ಆರೋಪಗಳಿವೆ. ಈ ಅರ್ಜಿಯನ್ನು ಜುಲೈ 15ರಂದು ಪಟ್ಟಿ ಮಾಡಲಾಗಿದ್ದು ಇನ್ನು 10 ದಿನಗಳಲ್ಲಿ ಉಪಕುಲಪತಿ ತಮ್ಮ ಹುದ್ದೆಯಿಂದ ನಿರ್ಗಮಿಸಲಿದ್ದಾರೆ. ಇದು ನಮ್ಮ ಮನವಿಯನ್ನು ನಿಷ್ಪ್ರಯೋಜಕಗೊಳಿಸುತ್ತದೆ. ನಾವು ಕರ್ನಾಟಕ ಸರ್ಕಾರ ಹೊರಡಿಸಿರುವ ಹೊಸ ಅಧಿಸೂಚನೆಗೆ ಮತ್ತು ಮಧ್ಯಂತರ ಆದೇಶದ ಮೂಲಕ ಈ ಹಿಂದೆ ನೀಡಲಾದ ತಡೆಯಾಜ್ಞೆಯನ್ನು ತೆರವುಗೊಳಿಸುವಂತೆ ಕೋರಿರುವ ಅರ್ಜಿಗೆ ತಡೆ ನೀಡುವಂತೆ ಕೋರುತ್ತಿದ್ದೇವೆ” ಎಂದು ವಾದಿಸಿದ್ದಾರೆ.

ಪ್ರಕರಣವನ್ನು ನಾಳಿದ್ದು (ಗುರುವಾರಕ್ಕೆ) ಪಟ್ಟಿ ಮಾಡಲಾಗುವುದು ಎಂದು ನ್ಯಾ. ಗವಾಯಿ ತಿಳಿಸಿದರು. ಪಾಟೀಲ್ ಪರ ವಕೀಲರಾದ ಫರ್ಹೀನ್ ಪೆನ್ವಾಲೆ, ಆರ್ ಕೊತ್ವಾಲ್, ಸಿದ್ದಿಖಾ ಆಯೇಷಾ ಮತ್ತು ಮಂಜು ಜೆಟ್ಲಿ ವಾದ ಮಂಡಿಸಿದರು. ಪ್ರೊ. ವೇಣುಗೋಪಾಲ್ ಅವರನ್ನು ವಕೀಲ ಗೋಪಾಲ್ ಝಾ ಪ್ರತಿನಿಧಿಸಿದ್ದರು.

[ಆದೇಶದ ಪ್ರತಿಯನ್ನು ಇಲ್ಲಿ ಓದಿ]

Prof_Venugopal_KR_vs_Dr_Sangamesh_Patil.pdf
Preview