Rapido, Uber Moto and SC  
ಸುದ್ದಿಗಳು

ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿ ಸೇವೆಗೆ ಸುಪ್ರೀಂ ಕೋರ್ಟ್ ಅಸ್ತು; ರಾಜ್ಯ ಸರ್ಕಾರದ ಮೇಲ್ಮನವಿ ವಜಾ

ಕ್ಯಾಬ್‌ಗಳಿಗಿಂತ ಆಟೋಗಳ ಪ್ರಯಾಣ ದರ ಐದು ಪಟ್ಟು ಹೆಚ್ಚಿದೆ. ಹಣ ಉಳಿಸಲು ಯುವತಿಯರು ಬೈಕ್ ಟ್ಯಾಕ್ಸಿ ಬಳಸುತ್ತಿದ್ದಾರೆ ಎಂದು ವಿಚಾರಣೆ ವೇಳೆ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಅಭಿಪ್ರಾಯ.

Bar & Bench

ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿ ಸೇವೆಗಳನ್ನು ಮುಂದುವರಿಸಲು ಅನುಮತಿ ನೀಡಿದ್ದ ಕರ್ನಾಟಕ ಹೈಕೋರ್ಟ್‌ನ ತೀರ್ಪನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್ ಶುಕ್ರವಾರ ವಜಾಗೊಳಿಸಿ ಮಹತ್ವದ ಆದೇಶ ಮಾಡಿದೆ. ಇದರಿಂದ ರಾಜ್ಯದಲ್ಲಿ ಓಲಾ, ಉಬರ್ ಮತ್ತು ರ‍್ಯಾಪಿಡೊ ಸೇರಿದಂತೆ ಬೈಕ್ ಟ್ಯಾಕ್ಸಿ ಸೇವೆಗಳ ಕಾರ್ಯಾಚರಣೆ ಸರಾಗವಾಗಿ ನಡೆಯಲಿದೆ.

ನ್ಯಾಯಮೂರ್ತಿಗಳಾದ ಸತೀಶ್ ಚಂದ್ರ ಶರ್ಮಾ ಮತ್ತು ಎನ್ ಕೋಟೀಶ್ವರ್ ಸಿಂಗ್ ಅವರನ್ನೊಳಗೊಂಡ ಪೀಠ ಈ ಆದೇಶ ನೀಡಿದೆ.

Justice Satish Chandra Sharma and Justice NK Singh

ತೀರ್ಪು ಪ್ರಕಟಿಸುವ ವೇಳೆ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಅವರು ತಮ್ಮ ಕಚೇರಿಯಲ್ಲಿ ಕೆಲಸ ಮಾಡುವ ಯುವತಿಯರೊಂದಿಗೆ ನಡೆದ ಸಂಭಾಷಣೆಯನ್ನು ಪ್ರಸ್ತಾಪಿಸಿದರು.

“ನಾನು ಅವರನ್ನು, ನೀವು ನನ್ನ ಕಚೇರಿಗೆ ಹೇಗೆ ಬರುತ್ತೀರಿ ಎಂದು ಕೇಳಿದೆ. ಅದಕ್ಕೆ ಅವರು ಬೈಕ್‌ನಲ್ಲಿ ಬರುವುದಾಗಿ ಹೇಳಿದರು. ಕ್ಯಾಬ್‌ನಲ್ಲಿ ಬರಲು ತಮ್ಮ ಬಳಿ ಅಷ್ಟು ಹಣವಿಲ್ಲ ಎಂದರು. ಆಟೋದಲ್ಲಿ ಬರಬಹುದಲ್ಲವೇ ಎಂದು ಕೇಳಿದಾಗ, 'ಸರ್, ಆಟೋ ದರ ಐದು ಪಟ್ಟು ಹೆಚ್ಚಿದೆ' ಎಂದು ಉತ್ತರಿಸಿದರು” ಎಂದು ನ್ಯಾಯಮೂರ್ತಿ ಶರ್ಮಾ ಹೇಳಿದರು.

ಪ್ರಕರಣವು ಬೈಕ್ ಟ್ಯಾಕ್ಸಿ ಸೇವೆಗಳನ್ನು ನಿರ್ಬಂಧಿಸಿದ್ದ ಏಕಸದಸ್ಯ ಪೀಠದ ಆದೇಶಕ್ಕೆ ಸಂಬಂಧಿಸಿದೆ. ರಾಜ್ಯ ಸರ್ಕಾರ ಬೈಕ್ ಟ್ಯಾಕ್ಸಿ ಸೇವೆಗಳಿಗೆ ಅನುಮತಿ ನೀಡುವ ನೀತಿ ರೂಪಿಸುವವರೆಗೆ ಈ ಸೇವೆಗಳನ್ನು ಸ್ಥಗಿತಗೊಳಿಸುವಂತೆ ಹೈಕೋರ್ಟ್‌ನ ಏಕಸದಸ್ಯ ಪೀಠ ಈ ಹಿಂದೆ ಆದೇಶಿಸಿತ್ತು.

ಈ ಆದೇಶವನ್ನು ಪ್ರಶ್ನಿಸಿ ಓಲಾ, ಉಬರ್, ರ‍್ಯಾಪಿಡೊ, ದ್ವಿಚಕ್ರ ವಾಹನಗಳ ಮಾಲೀಕರು ಮತ್ತು ಬೈಕ್ ಟ್ಯಾಕ್ಸಿ ವೆಲ್ಫೇರ್ ಅಸೋಸಿಯೇಷನ್ ಮೇಲ್ಮನವಿ ಸಲ್ಲಿಸಿದ್ದವು.

2026ರ ಜನವರಿ 23ರಂದು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ ಎಂ ಜೋಶಿ ಅವರ ಹೈಕೋರ್ಟ್ ವಿಭಾಗೀಯ ಪೀಠವು ಮೇಲ್ಮನವಿಗಳನ್ನು ಪುರಸ್ಕರಿಸಿ, ಬೈಕ್ ಟ್ಯಾಕ್ಸಿ ಸೇವೆಗಳ ಮೇಲಿನ ನಿರ್ಬಂಧವನ್ನು ತೆರವುಗೊಳಿಸಿತ್ತು.

ಮೋಟಾರ್ ಸೈಕಲ್‌ಗಳನ್ನು ಸಾರಿಗೆ ವಾಹನಗಳಾಗಿ ನೋಂದಾಯಿಸಿ, ಕಾಂಟ್ರಾಕ್ಟ್ ಕ್ಯಾರೇಜ್‌ಗಳಾಗಿ ಕಾರ್ಯಾಚರಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದು ಹೈಕೋರ್ಟ್ ಹೇಳಿತ್ತು. ಮೋಟಾರ್ ಸೈಕಲ್ ಎಂಬ ಕಾರಣಕ್ಕೆ ಮಾತ್ರ ಪರವಾನಗಿ ನಿರಾಕರಿಸುವಂತಿಲ್ಲ. ಆದರೆ, ಇಂತಹ ಸೇವೆಗಳಿಗೆ ಅಗತ್ಯ ನಿಯಂತ್ರಣ ಷರತ್ತುಗಳನ್ನು ವಿಧಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿದೆ ಎಂದು ಸ್ಪಷ್ಟಪಡಿಸಿತ್ತು.

ಅದರಂತೆ, ದ್ವಿಚಕ್ರ ವಾಹನಗಳನ್ನು ಸಾರಿಗೆ ವಾಹನಗಳಾಗಿ ನೋಂದಾಯಿಸುವ ಮತ್ತು ಬೈಕ್ ಟ್ಯಾಕ್ಸಿಗಳಾಗಿ ಕಾರ್ಯಾಚರಿಸಲು ಪರವಾನಗಿ ನೀಡುವ ಅರ್ಜಿಗಳನ್ನು ಪರಿಗಣಿಸುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿತ್ತು.

ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಬೈಕ್ ಟ್ಯಾಕ್ಸಿಗಳಿಂದ ಪ್ರಯಾಣಿಕರ ಸುರಕ್ಷತೆಗೆ ಧಕ್ಕೆಯಾಗಬಹುದು, ವಿಮಾ ಸೌಲಭ್ಯಗಳ ಸ್ಪಷ್ಟತೆ ಇಲ್ಲ ಹಾಗೂ ಪ್ರಯಾಣಿಕರ ರಕ್ಷಣೆಗೆ ಅಗತ್ಯ ಸುರಕ್ಷತಾ ಕ್ರಮಗಳಿಲ್ಲ ಎಂದು ಸರ್ಕಾರ ವಾದಿಸಿತ್ತು.

ಐದು ಆಟೋ ಮತ್ತು ಟ್ಯಾಕ್ಸಿ ಚಾಲಕರ ಸಂಘಟನೆಗಳೂ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿದ್ದವು. ಬೈಕ್ ಟ್ಯಾಕ್ಸಿಗಳಿಗೆ ಸಮಾನ ನಿಯಂತ್ರಣ ಷರತ್ತುಗಳನ್ನು ವಿಧಿಸದೆ ಕಾರ್ಯಾಚರಣೆಗೆ ಅವಕಾಶ ನೀಡುವುದರಿಂದ ಈಗಾಗಲೇ ಸಾರಿಗೆ ಸೇವೆ ಒದಗಿಸುತ್ತಿರುವವರಿಗೆ ಅನ್ಯಾಯವಾಗಲಿದೆ ಎಂದು ವಾದಿಸಿದ್ದವು.

ವಿಚಾರಣೆ ವೇಳೆ ರಾಜ್ಯ ಸರ್ಕಾರವು ಮೋಟಾರ್ ವಾಹನ ಕಾಯಿದೆಯಲ್ಲಿ ಮೋಟಾರ್ ಸೈಕಲ್ ಮತ್ತು ಮೋಟಾರ್ ಕ್ಯಾಬ್‌ಗಳನ್ನು ಪ್ರತ್ಯೇಕವಾಗಿ ವ್ಯಾಖ್ಯಾನಿಸಲಾಗಿದೆ. ರಾಜ್ಯದ ಅಗ್ರಿಗೇಟರ್ ನಿಯಮಗಳಲ್ಲಿಯೂ ಬೈಕ್ ಟ್ಯಾಕ್ಸಿಗಳಿಗೆ ಅವಕಾಶ ಕಲ್ಪಿಸಿಲ್ಲ ಎಂದು ಹೇಳಿತ್ತು.

ಅಲ್ಲದೆ, ಸುರಕ್ಷತೆ, ವಾಹನ ದಟ್ಟಣೆ ಮತ್ತು ಮಾಲಿನ್ಯಕ್ಕೆ ಸಂಬಂಧಿಸಿದಂತೆ 2019ರಲ್ಲಿ ಸಲ್ಲಿಸಲಾದ ತಜ್ಞರ ಸಮಿತಿಯ ವರದಿಯನ್ನೂ ಸರ್ಕಾರ ಉಲ್ಲೇಖಿಸಿತ್ತು. ಬೆಂಗಳೂರಿನಲ್ಲಿ ಬೈಕ್ ಟ್ಯಾಕ್ಸಿ ಸೇವೆಗಳಿಗೆ ವಿರೋಧ ವ್ಯಕ್ತಪಡಿಸಿದ್ದರೂ, ರಾಜ್ಯದ ಇತರ ಭಾಗಗಳಲ್ಲಿ ಇವುಗಳಿಗೆ ಅನುಮತಿ ನೀಡುವ ಬಗ್ಗೆ ಪರಿಶೀಲಿಸಲು ಸಿದ್ಧವಿರುವುದಾಗಿ ತಿಳಿಸಿತ್ತು.

ಇದಕ್ಕೆ ಪ್ರತಿಯಾಗಿ, ಕರ್ನಾಟಕದಲ್ಲಿ ಸುಮಾರು 4.5 ಲಕ್ಷ ಪ್ರಯಾಣಿಕರು ಬೈಕ್ ಟ್ಯಾಕ್ಸಿ ಸೇವೆಗಳಿಂದ ಪ್ರಯೋಜನ ಪಡೆಯುತ್ತಿದ್ದಾರೆ ಎಂದು ಅಗ್ರಿಗೇಟರ್‌ಗಳು ವಾದಿಸಿದ್ದರು. ಈ ಸೇವೆಗಳಿಗೆ ಸಂಬಂಧಿಸಿದಂತೆ ಈ ಹಿಂದೆ ಹೈಕೋರ್ಟ್ ನೀಡಿದ್ದ ಪ್ರಶ್ನಿಸದ ತೀರ್ಪು ಮತ್ತು ಕೇಂದ್ರ ಸರ್ಕಾರ 2004 ಹಾಗೂ 2024ರಲ್ಲಿ ಹೊರಡಿಸಿದ್ದ ಅಧಿಸೂಚನೆಗಳನ್ನು ಉಲ್ಲೇಖಿಸಿದ್ದರು.

ಮೋಟಾರ್ ಸೈಕಲ್‌ಗಳನ್ನು ಟ್ಯಾಕ್ಸಿಗಳಾಗಿ ಬಳಸಲು ಕೇಂದ್ರ ಸರ್ಕಾರದ ಅಧಿಸೂಚನೆಗಳು ಅವಕಾಶ ಕಲ್ಪಿಸಿವೆ ಎಂಬುದನ್ನು ಕೇಂದ್ರ ಸರ್ಕಾರವೂ ಸುಪ್ರೀಂ ಕೋರ್ಟ್‌ಗೆ ದೃಢಪಡಿಸಿತ್ತು.

ವಿಚಾರಣೆ ವೇಳೆ ಸುಪ್ರೀಂ ಕೋರ್ಟ್, ಕಾರುಗಳಿಗೆ ಹೋಲಿಸಿದರೆ ಮೋಟಾರ್ ಸೈಕಲ್‌ಗಳು ರಸ್ತೆಯಲ್ಲಿ ಕಡಿಮೆ ಜಾಗವನ್ನು ಆಕ್ರಮಿಸುತ್ತವೆ ಎಂದು ಹೇಳಿ, ವಾಹನ ದಟ್ಟಣೆಯ ಕುರಿತ ರಾಜ್ಯ ಸರ್ಕಾರದ ಆತಂಕವನ್ನೂ ಪ್ರಶ್ನಿಸಿತ್ತು. ಬೈಕ್ ಟ್ಯಾಕ್ಸಿಗಳ ಕೈಗೆಟುಕುವ ಪ್ರಯಾಣ ದರವನ್ನೂ ಪೀಠ ಗಮನಿಸಿತ್ತು.

ಇದೀಗ ರಾಜ್ಯ ಸರ್ಕಾರದ ಮೇಲ್ಮನವಿಯನ್ನು ವಜಾಗೊಳಿಸಿರುವ ಸುಪ್ರೀಂ ಕೋರ್ಟ್, ಕರ್ನಾಟಕದಲ್ಲಿ ಬೈಕ್ ಟ್ಯಾಕ್ಸಿ ಸೇವೆಗಳ ಕಾರ್ಯಾಚರಣೆ ಮುಂದುವರಿಸಲು ಹೈಕೋರ್ಟ್ ನೀಡಿದ್ದ ಅನುಮತಿಯನ್ನು ಎತ್ತಿಹಿಡಿದಿದೆ.