ಸುದ್ದಿಗಳು

ದೆಹಲಿ ಮುಖ್ಯ ಕಾರ್ಯದರ್ಶಿ ಅಧಿಕಾರಾವಧಿ ವಿಸ್ತರಣೆ: ಕೇಂದ್ರಕ್ಕೆ ಸುಪ್ರೀಂ ಕೋರ್ಟ್‌ ಅನುಮತಿ

ಮುಖ್ಯ ಕಾರ್ಯದರ್ಶಿ ಸ್ಥಾನವು ದೆಹಲಿ ಸರ್ಕಾರದ ಒಳಗಿನ ಮತ್ತು ಹೊರಗಿನ ವಿಷಯಗಳಿಗೆ ಜವಾಬ್ದಾರವಾಗಿರುವುದರಿಂದ ವಿಭಿನ್ನವಾಗಿದೆ ಎಂದು ಸಿಜೆಐ ಡಿ ವೈ ಚಂದ್ರಚೂಡ್ ನೇತೃತ್ವದ ನ್ಯಾಯಪೀಠ ಹೇಳಿತು.

Bar & Bench

ದೆಹಲಿಯ ಹಾಲಿ ಮುಖ್ಯ ಕಾರ್ಯದರ್ಶಿ ನರೇಶ್ ಕುಮಾರ್ ಅವರ ಅಧಿಕಾರಾವಧಿ ವಿಸ್ತರಿಸಲು ಸುಪ್ರೀಂ ಕೋರ್ಟ್ ಬುಧವಾರ ಕೇಂದ್ರ ಸರ್ಕಾರಕ್ಕೆ ಅನುಮತಿ ನೀಡಿದೆ.

ಕುಮಾರ್ ಅವರ ಅಧಿಕಾರಾವಧಿ ವಿಸ್ತರಿಸುವ ಕೇಂದ್ರ ಸರ್ಕಾರದ ಕ್ರಮ ಮೇಲ್ನೋಟಕ್ಕೆ ಕಾನೂನುಬದ್ಧವಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಹಾಗೂ ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠ ಹೇಳಿದೆ.

"ಈ ಹಂತದಲ್ಲಿ ಸಂವಿಧಾನ ಪೀಠದ ತೀರ್ಪಿನ ನಿಬಂಧನೆಗಳು ಮತ್ತು ನಂತರದ ಸೇವಾ ಕಾಯಿದೆಯ ನಿಯಮಾವಳಿಗಳನ್ನು ಗಮನದಲ್ಲಿಟ್ಟುಕೊಂಡು, ಹಾಲಿ ಮುಖ್ಯ ಕಾರ್ಯದರ್ಶಿ ಸೇವೆಯನ್ನು 6 ತಿಂಗಳವರೆಗೆ ವಿಸ್ತರಿಸುವ ಕೇಂದ್ರ ಸರ್ಕಾರದ ನಿರ್ಧಾರ ಕಾನೂನಿನ ಉಲ್ಲಂಘನೆ ಎನ್ನಲಾಗದು" ಎಂದು ನ್ಯಾಯಾಲಯ ತನ್ನ ಆದೇಶದಲ್ಲಿ ತಿಳಿಸಿದೆ.

ಹಾಲಿ ಮುಖ್ಯ ಕಾರ್ಯದರ್ಶಿಯ ಅಧಿಕಾರಾವಧಿ ವಿಸ್ತರಿಸುವುದನ್ನು ವಿರೋಧಿಸಿ ಆಮ್ ಆದ್ಮಿ ಪಕ್ಷ (ಎಎಪಿ) ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ ಈ ವಿಚಾರ ತಿಳಿಸಿದೆ.

ಮುಖ್ಯ ಕಾರ್ಯದರ್ಶಿ ಸ್ಥಾನವು ದೆಹಲಿ ಸರ್ಕಾರದ ಒಳಗಿನ ಮತ್ತು ಹೊರಗಿನ ವಿಷಯಗಳಿಗೆ ಜವಾಬ್ದಾರವಾಗಿರುವುದರಿಂದ ಮುಖ್ಯ ಕಾರ್ಯದರ್ಶಿ ಪಾತ್ರ ವಿಭಿನ್ನವಾಗಿದೆ ಎಂದು ಸಿಜೆಐ ಡಿ ವೈ ಚಂದ್ರಚೂಡ್ ನೇತೃತ್ವದ ನ್ಯಾಯಪೀಠ ಹೇಳಿದೆ.

ಹೀಗಾಗಿ, ಎಜಿಎಂಯುಟಿ ಕೇಡರ್‌ನ ಐಎಎಸ್ ಅಧಿಕಾರಿಗಳಿಗೆ ಅನ್ವಯವಾಗುವ ಅಧಿಕಾರಾವಧಿ ವಿಸ್ತರಣೆ ನಿಯಮಗಳು ದೆಹಲಿ ಮುಖ್ಯ ಕಾರ್ಯದರ್ಶಿಗೆ ಅನ್ವಯಿಸುವುದಿಲ್ಲ. ಏಕೆಂದರೆ ಆ ನಿಯಮಗಳು ದೆಹಲಿ ಸರ್ಕಾರದ ನಿಯಂತ್ರಣಕ್ಕೆ ಹೊರತಾದ ವಿಷಯಗಳಿಗೆ ವಿಸ್ತರಿಸಲಾಗದ ಅಧಿಕಾರಿಗಳಿಗೆ ಮಾತ್ರ ಅನ್ವಯಿಸುತ್ತವ ಎಂದು ನ್ಯಾಯಾಲಯ ನುಡಿಯಿತು.

ಆದ್ದರಿಂದ, ನರೇಶ್ ಕುಮಾರ್ ಅವರ ಅಧಿಕಾರಾವಧಿಯನ್ನು ವಿಸ್ತರಿಸುವ ಕೇಂದ್ರ ಸರ್ಕಾರದ ಕ್ರಮವು ಕಾನೂನಿನ ಉಲ್ಲಂಘನೆಯಲ್ಲ ಎಂದು ನ್ಯಾಯಾಲಯ ತೀರ್ಮಾನಿಸಿತು.

ಆದರೂ ನ್ಯಾಯಾಲಯದ ಸಾಂವಿಧಾನಿಕ ಪೀಠದ ಮುಂದೆ ಬಾಕಿ ಇರುವ ವಿಷಯಗಳ ನಿರ್ಣಾಯಕ ತೀರ್ಮಾನಕ್ಕೆ ಹೋಗದೆ ತನ್ನ ಈಗಿನ ತೀರ್ಮಾನ ಮೇಲ್ನೋಟದ ಅಂಶಗಳಿಗೆ ಮಾತ್ರ ಸೀಮಿತವಾಗಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.