CLAT 2020
CLAT 2020 
ಸುದ್ದಿಗಳು

ಸಿಎಲ್‌ಎಟಿ: ಕುಂದುಕೊರತೆ ಪರಿಹಾರ ಸಮಿತಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ; ಕೌನ್ಸೆಲಿಂಗ್ ತಡೆಗೆ ನಿರಾಕರಿಸಿದ ಸುಪ್ರೀಂ

Bar & Bench

ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ನೇತೃತ್ವದ ಕುಂದುಕೊರತೆ ಪರಿಹಾರ ಸಮಿತಿಗೆ ಪ್ರಸಕ್ತ ವರ್ಷದ ಪ್ರವೇಶ ಪರೀಕ್ಷೆಗೆ ಸಂಬಂಧಿಸಿದಂತೆ ಆಕ್ಷೇಪಣೆ ಸಲ್ಲಿಸಲು ಸಾಮಾನ್ಯ ಕಾನೂನು ಪ್ರವೇಶ ಪರೀಕ್ಷೆಯ (ಸಿಎಲ್‌ಎಟಿ-2020) ಆಕಾಂಕ್ಷಿಗಳ ಗುಂಪಿಗೆ ಸುಪ್ರೀಂ ಕೋರ್ಟ್ ಶುಕ್ರವಾರ ಅವಕಾಶ ಕಲ್ಪಿಸಿದೆ.

ಸೆಪ್ಟೆಂಬರ್ 28ರಂದು ನಡೆದ ಸಿಎಲ್‌ಎಟಿ ಪರೀಕ್ಷೆಯಲ್ಲಿ ತಾಂತ್ರಿಕ ಸಮಸ್ಯೆ ಹಾಗೂ ತಪ್ಪಾದ ಉತ್ತರಗಳಿಗೆ ಸಂಬಂಧಿಸಿದಂತೆ 40,000 ಆಕ್ಷೇಪಣೆಗಳನ್ನು ಸಿಎಲ್‌ಎಟಿ ಬರೆದ ಅಭ್ಯರ್ಥಿಗಳು ಸಲ್ಲಿಸಿದ್ದಾರೆ ಎಂದು ಅರ್ಜಿದಾರರನ್ನು ಪ್ರತಿನಿಧಿಸಿರುವ ಹಿರಿಯ ವಕೀಲ ಗೋಪಾಲ್‌ ಶಂಕರನಾರಾಯಣನ್ ವಾದಿಸಿದರು.

“ಹಲವು ಪ್ರಶ್ನೆಗಳಿಗೆ ತಪ್ಪಾದ ಮಾದರಿ ಉತ್ತರಗಳನ್ನು ನೀಡಲಾಗಿದೆ. 40,000 ಆಕ್ಷೇಪಣೆಗಳ ಪೈಕಿ 20,000 ಆಕ್ಷೇಪಣೆಗಳು ಪ್ರಶ್ನೆ ಮತ್ತು ಉತ್ತರಗಳಿಗೆ ಸಂಬಂಧಿಸಿವೆ. ಇನ್ನುಳಿದ 20,000 ಆಕ್ಷೇಪಣೆಗಳನ್ನು ಗಮನಿಸುವುದಾದರೆ, ಈ ಪರೀಕ್ಷೆಯಲ್ಲಿ ಕಟ್‌ ಆಫ್ ಅಂಕ 0 ಅಲ್ಲ, ಬದಲಿಗೆ -4. ಇದು ಈ ಬಾರಿಯ ಪರೀಕ್ಷೆಯಲ್ಲಿ ಮಾತ್ರವಲ್ಲ, ಯಾವುದೇ ಪರೀಕ್ಷಾ ಇತಿಹಾಸದಲ್ಲಿಯೇ ಇದು ಮೊದಲು. ಈ ಪಟ್ಟಿಯಲ್ಲಿ -4 ಅಂಕ ಪಡೆದ ವಿದ್ಯಾರ್ಥಿಗಳೂ ಇದ್ದಾರೆ. ಇಂಥ ವಿದ್ಯಾರ್ಥಿಗಳನ್ನೂ ಕೌನ್ಸೆಲಿಂಗ್‌ಗೆ ಕರೆಯಲಾಗಿದೆ.”

ಮೈನಸ್ ಅಂಕ ಪಡೆದ ವಿದ್ಯಾರ್ಥಿಗಳನ್ನು ಕೌನ್ಸೆಲಿಂಗ್ ಹೇಗೆ ಕರೆಯಲಾಗಿದೆ ಎಂಬುದನ್ನು ವಿವರಿಸುವಂತೆ ನ್ಯಾಯಮೂರ್ತಿಗಳಾದ ಅಶೋಕ್ ಭೂಷಣ್ ಮತ್ತು ಎಂ ಆರ್ ಶಾ ಸೂಚಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಎನ್‌ಎಲ್‌ಯು ಒಕ್ಕೂಟ ಪ್ರತಿನಿಧಿಸುತ್ತಿರುವ ಹಿರಿಯ ವಕೀಲ ಪಿ ಎಸ್ ನರಸಿಂಹ ಅವರು “ಎಸ್‌ಸಿ/ ಎಸ್‌ಟಿ ವಿದ್ಯಾರ್ಥಿಗಳ ಪಟ್ಟಿಯನ್ನು ಓದಲಾಗಿದೆ. ಕೌನ್ಸೆಲಿಂಗ್ ಕರೆದ ಮಾತ್ರಕ್ಕೆ ಆ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗಿದೆ ಎಂದಲ್ಲ” ಎಂದರು.

“ನಿವೃತ್ತ ಮುಖ್ಯ ನ್ಯಾಯಮೂರ್ತಿ (ಕುಂದುಕೊರತೆ ಪರಿಹಾರ ಸಮಿತಿ ಮುಖ್ಯಸ್ಥರು) ಆಕ್ಷೇಪಣೆಗಳ ಬಗ್ಗೆ ಗಮನಹರಿಸಲಿದ್ದಾರೆ. ಓದಲ್ಪಟ್ಟ ಪಟ್ಟಿಯು ಎಸ್‌ಸಿ/ಎಸ್‌ಟಿ ಅಭ್ಯರ್ಥಿಗಳಿಗೆ ಸಂಬಂಧಿಸಿದ್ದು, ಅವರನ್ನು ಸಂದರ್ಶನಕ್ಕೆ ಮಾತ್ರ ಕರೆಯಲಾಗಿದೆ. ಆಹ್ವಾನಿಸಿದ ಮಾತ್ರಕ್ಕೆ ಯಾವುದೇ ವ್ಯತ್ಯಾಸವಾಗುವುದಿಲ್ಲ. ಪ್ರಶ್ನೆಗಳು ಉದ್ದುದ್ದವಾಗಿವೆ ಎಂಬ ಆರೋಪದ ಬಗ್ಗೆ ಗಮನ ನೀಡಬೇಕಿದೆ. ಆದರೆ, ಕಳೆದ ವರ್ಷಗಳಿಗೆ ಹೋಲಿಕೆ ಮಾಡಿದರೆ ಈ ಬಾರಿ ಪ್ರಶ್ನೆಯ ಉದ್ದ ಕಡಿತಗೊಳಿಸಲಾಗಿದೆ. ಸಾಫ್ಟ್‌ವೇರ್ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಈ ಬಾರಿಯ ಪರೀಕ್ಷೆ ಅಸಾಮಾನ್ಯ ಸನ್ನಿವೇಶದಲ್ಲಿ ನಡೆದಿರುವುದಾಗಿದ್ದು, ಈ ಬಾರಿ ವಿದ್ಯಾರ್ಥಿಗಳು ಮೌಸ್ ಚಲನೆ ಮಾಡಿರುವುದೂ ಸಹ ರೆಕಾರ್ಡ್‌ ಆಗಿದೆ,” ಎಂದು ವಿವರಿಸಿದರು.

ಸಮಿತಿಯ ಶಿಫಾರಸಿನ ಮೇರೆಗೆ 146 ಮತ್ತು 150ನೇ ಪ್ರಶ್ನೆಗಳನ್ನು ಕೈಬಿಡಲಾಗಿದೆ ಎಂದು ಹೇಳಿದ ನರಸಿಂಹ ಅವರು “2,600 ಸೀಟುಗಳ ಪೈಕಿ 1,800 ಸೀಟುಗಳು ಭರ್ತಿಯಾಗಿವೆ. ಉಳಿದ ಸೀಟುಗಳಿಗೆ ಕೌನ್ಸೆಲಿಂಗ್ ನಡೆಸಲಾಗುತ್ತಿದೆ. ಪರೀಕ್ಷೆಯನ್ನು ಅತ್ಯುತ್ತಮವಾಗಿ ನಡೆಸಲಾಗಿದ್ದು, ಎಲ್ಲಾ ಉಪಕುಲಪತಿಗಳು ಭಾಗವಹಿಸಿದ್ದರು" ಎಂದು ನರಸಿಂಹ ಪೀಠಕ್ಕೆ ವಿವರಿಸಿದರು. ಇದೇ ವೇಳೆ, ಯಾವೆಲ್ಲ ಬಗೆಯ ಆಕ್ಷೇಪಣೆಗಳು ಸಲ್ಲಿಕೆಯಾಗಿವೆ ಎನ್ನವುದಕ್ಕೆ ಉದಾಹರಣೆಯೊಂದನ್ನು ನೀಡಿದ ಅವರು, "ಮಾನಹಾನಿಯು ಅಪರಾಧವೇ ಅಥವಾ ಅಲ್ಲವೇ ಎನ್ನುವ ಪ್ರಶ್ನೆಯೊಂದಿತ್ತು. ಗೂಗಲ್ ಪ್ರಕಾರ ಇದಕ್ಕೆ ಉತ್ತರ ಇಲ್ಲ ಎಂದಿದೆ," ಎನ್ನುವಂತಹ ಆಕ್ಷೇಪಣೆಗಳನ್ನೂ ಸಲ್ಲಿಸಲಾಗಿದೆ ಎಂದರು.

ಉಭಯ ವಾದಗಳನ್ನು ಆಲಿಸಿದ ನ್ಯಾಯಪೀಠವು ಪರೀಕ್ಷೆಗೆ ಸಂಬಂಧಿಸಿದಂತೆ ಯಾವುದೇ ಸಮಸ್ಯೆಗಳಿದ್ದರೂ ಎರಡು ದಿನಗಳ ಒಳಗೆ ಕುಂದುಕೊರತೆ ಪರಿಹಾರ ಸಮಿತಿಯನ್ನು ಸಂಪರ್ಕಿಸಲು ಅರ್ಜಿದಾರರಿಗೆ ಅವಕಾಶ ಮಾಡಿಕೊಟ್ಟಿದೆ. ಆಕ್ಷೇಪಣೆಗಳಿಗೆ ಸಂಬಂಧಿಸಿದ ನಿರ್ಧಾರವನ್ನು ಆದಷ್ಟು ಬೇಗ ತೆಗೆದುಕೊಳ್ಳಬೇಕು ಎಂದು ಪೀಠ ಹೇಳಿದೆ.

ಕುಂದುಕೊರತೆ ಪರಿಹಾರ ಸಮಿತಿಯ ಬಗ್ಗೆ ತನಗೆ ಅಗಾಧ ವಿಶ್ವಾಸವಿರುವುದಾಗಿ ನ್ಯಾಯಾಲಯ ಹೇಳಿದೆ. ಆದರೆ, ಕೌನ್ಸೆಲಿಂಗ್ ತಡೆಯುವುದಕ್ಕೆ ಸಂಬಂಧಿಸಿದಂತೆ ಯಾವುದೇ ತೆರನಾದ ಮಧ್ಯಂತರ ಆದೇಶ ನೀಡುವುದಿಲ್ಲ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.