Supreme Court of India
Supreme Court of India  
ಸುದ್ದಿಗಳು

ಕರ್ನಾಟಕದಲ್ಲಿ ಕಬ್ಬಿಣದ ಅದಿರು ಗಣಿಗಾರಿಕೆ, ರಫ್ತು ಪುನಾರಂಭಕ್ಕೆ ಸುಪ್ರೀಂ ಕೋರ್ಟ್‌ ಅನುಮತಿ

Bar & Bench

ಕರ್ನಾಟಕದಲ್ಲಿ ವ್ಯಾಪಕವಾಗಿದ್ದ ಅಕ್ರಮ ಗಣಿಗಾರಿಕೆಗೆ ಅಂಕುಶ ಹಾಕುವ ನಿಟ್ಟಿನಲ್ಲಿ ದಶಕದ ಹಿಂದೆ ಕಬ್ಬಿಣದ ಅದಿರು ಗಣಿಗಾರಿಕೆಗೆ ನಿರ್ಬಂಧ ವಿಧಿಸಿದ್ದ ಸುಪ್ರೀಂ ಕೋರ್ಟ್‌ ಶುಕ್ರವಾರದ ಮಹತ್ವದ ಬೆಳವಣಿಗೆಯಲ್ಲಿ ಮತ್ತೆ ರಾಜ್ಯದಲ್ಲಿ ಕಬ್ಬಿಣದ ಅದಿರು ಗಣಿಗಾರಿಕೆ ಮತ್ತು ರಫ್ತು ಪುನಾರಂಭಕ್ಕೆ ಅನುಮತಿಸಿದೆ.

“ಬಳ್ಳಾರಿ ಇತರೆಡೆ ಗಣಿಗಾರಿಕೆಗೆ ಸಂಬಂಧಿಸಿದಂತೆ ಸಮಾನ ಅವಕಾಶವಿರಬೇಕು. ಕರ್ನಾಟಕದ ಮೂರು ಗಣಿಗಾರಿಕೆ ಪ್ರದೇಶಗಳಲ್ಲಿ ಅನಿಯಂತ್ರಿತ ಉತ್ಖನನ ಸ್ಥಗಿತಗೊಳಿಸಿದ ನಂತರ, ಪರಿಸ್ಥಿತಿಯು ಉತ್ತಮಗೊಂಡಿದೆ. ಆದರೆ ಪ್ರಸಕ್ತ ಪರಿಸ್ಥಿತಿ ಬದಲಾಗಿದೆ” ಎಂದು ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ನೇತೃತ್ವದ ಪೀಠ ಹೇಳಿತು.

ಇ-ಹರಾಜಿಗೆ ಬೇಡಿಕೆ ಕಡಿಮೆಯಾಗಿರುವುದನ್ನು ಪರಿಗಣಿಸಿರುವ ನ್ಯಾಯಾಲಯವು ಕಬ್ಬಿಣದ ಅದಿರು ಗಣಿಗಾರಿಕೆಗೆ 2011ರಲ್ಲಿ ವಿಧಿಸಿದ್ದ ನಿರ್ಬಂಧಗಳನ್ನು ಸಡಿಲಿಸಿದೆ. ಅಲ್ಲದೇ, ಭಾರತ ಸರ್ಕಾರ ವಿಧಿಸಿರುವ ಷರತ್ತುಗಳಿಗೆ ಒಳಪಟ್ಟು ಕಬ್ಬಿಣದ ಅದಿರು ರಫ್ತಿಗೆ ಅನುಮತಿಸಿದೆ.

“ಕರ್ನಾಟಕದ ಮೂರು ಜಿಲ್ಲೆಗಳಲ್ಲಿ ಈಗಾಗಲೇ ಹೊರತೆಗೆದು ಶೇಖರಿಸಿಡಲಾಗಿರುವ ಕಬ್ಬಿಣದ ಅದಿರನ್ನು ಮಾರಾಟ ಮಾಡಲು ನಾವು ಅನುಮತಿಸುತ್ತಿದ್ದೇವೆ. ಇ-ಹರಾಜನ್ನು ಆಶ್ರಯಿಸದೆ ನೇರ ಒಪ್ಪಂದ ಮಾಡಿಕೊಂಡು ಕಬ್ಬಿಣದ ಅದಿರನ್ನು ಹಂಚಿಕೆ ಮಾಡಲು ಅನುಮತಿ ನೀಡಲಾಗಿದೆ” ಎಂದು ಪೀಠ ಹೇಳಿತು.

ಕಬ್ಬಿಣದ ಅದಿರು ಉತ್ಪಾದನೆ, ಗಣಿಗಾರಿಕೆ ಗುತ್ತಿಗೆ ಇತ್ಯಾದಿಗೆ ಸಂಬಂಧಿಸಿದಂತೆ ಈಗಾಗಲೇ ವಿಧಿಸಿರುವ ಷರತ್ತಿನಲ್ಲಿ ಸಡಿಲಿಕೆ ಮಾಡುವುದರ ಕುರಿತಾಗಿ ಮೇಲ್ವಿಚಾರಣಾ ಸಮಿತಿಯ ಅಭಿಪ್ರಾಯವನ್ನು ನ್ಯಾಯಾಲಯ ಕೇಳಿದೆ. ನಾಲ್ಕು ವಾರಗಳಲ್ಲಿ ಶಿಫಾರಸ್ಸುಗಳನ್ನು ಸಲ್ಲಿಸುವಂತೆ ಸಮಿತಿಗೆ ನ್ಯಾಯಾಲಯ ನಿರ್ದೇಶಿಸಿದ್ದು, ಪ್ರಕರಣವನ್ನು ಜುಲೈಗೆ ಮುಂದೂಡಿದೆ.