Lawyers 
ಸುದ್ದಿಗಳು

ಬಡ್ಡಿರಹಿತ ಸಾಲಕ್ಕೆ ಸುಪ್ರೀಂ ಕೋರ್ಟ್ ವಾದಮಂಡನಾ ವಕೀಲರ ಒಕ್ಕೂಟದ ಮನವಿ; ಒಕ್ಕೂಟದ ಆಧಾರ ಪ್ರಶ್ನಿಸಿದ ನ್ಯಾಯಾಲಯ

“ಇದು ನೋಂದಾಯಿತ ಪರಿಷತ್ತೇ? ಪರಿಷತ್ತಿನ ಕಾರ್ಯಚಟುವಟಿಕೆಗಳು ಏನು? ಯಾರು ಇದನ್ನು ಮುನ್ನಡೆಸುತ್ತಿದ್ದಾರೆ, ಯಾರೆಲ್ಲಾ ಸದಸ್ಯರಾಗಿದ್ದಾರೆ, ಯಾರು ಇದರ ಮುಂದಾಳು?” ಎಂದು ಪ್ರಶ್ನಿಸಿದ ಸಿಜೆಐ ಬೊಬ್ಡೆ.

Bar & Bench

ವಕೀಲರಿಗೆ ಬಡ್ಡಿರಹಿತ ಸಾಲ ಯೋಜನೆ ಕಲ್ಪಿಸಬೇಕು ಎಂದು ಮನವಿ ಸಲ್ಲಿಸಿರುವ ಸುಪ್ರೀಂ ಕೋರ್ಟ್ ವಾದಮಂಡನಾ ವಕೀಲರ ಒಕ್ಕೂಟ ಯಾವ ಆಧಾರಗಳನ್ನು ಹೊಂದಿದೆ ಎಂದು ಗುರುವಾರ ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ.

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ ನ್ಯಾಯಮೂರ್ತಿಗಳಾದ ಎ ಎಸ್ ಬೋಪಣ್ಣ ಮತ್ತು ವಿ ರಾಮಸುಬ್ರಮಣಿಯನ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ಪರಿಷತ್ತಿನ ಆಧಾರಗಳನ್ನು ಒಳಗೊಂಡ ಅಫಿಡವಿಟ್ ಸಲ್ಲಿಸಲು ಕಾಲಾವಕಾಶ ಕಲ್ಪಿಸಿದೆ.

ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡಾಗ ಸಿಜೆಐ ಎಸ್ ಎ ಬೊಬ್ಡೆ ಅವರು ಹೀಗೆ ಕೇಳಿದರು:

“ಇದು ನೋಂದಾಯಿತ ಒಕ್ಕೂಟವೇ? ಈ ಒಕ್ಕೂಟದ ಚಟುವಟಿಕೆಗಳು ಏನು, ಇದನ್ನು ಯಾರು ಮುನ್ನಡೆಸುತ್ತಿದ್ದಾರೆ, ಯಾರೆಲ್ಲಾ ಸದಸ್ಯರಾಗಿದ್ದಾರೆ, ಇದರ ಹಿಂದಿನ ಶಕ್ತಿ ಯಾರು? ಪರಿಚ್ಛೇದ 32ರ ಅಡಿ ಅರ್ಜಿ ಸಲ್ಲಿಸಿರುವುದರಿಂದ ಈ ವಿಚಾರಗಳ ಬಗ್ಗೆ ನಾವು ತಿಳಿದುಕೊಳ್ಳಬೇಕಿದೆ”.
ಸುಪ್ರೀಂ ಕೋರ್ಟ್

ಇದಕ್ಕೆ ಪ್ರತಿಕ್ರಿಯಿಸಿದ ಪರಿಷತ್ತಿನ ಪರ ವಕೀಲ ವೀರೇಂದ್ರ ಕುಮಾರ್ ಶರ್ಮಾ “ಕೋವಿಡ್ ಸಾಂಕ್ರಾಮಿಕತೆಯ ಈ ಸಂದರ್ಭದಲ್ಲಿ ಸದಸ್ಯರಿಗೆ ನಾವು ಸಾಕಷ್ಟು ಕೆಲಸ ಮಾಡಿದ್ದೇವೆ” ಎಂದರು

“ನಿಮ್ಮ ಸದಸ್ಯರ ಒಳಿತಿಗೆ ನೀವು ಒಳ್ಳೆಯ ಕೆಲಸ ಮಾಡುತ್ತಿರುವುದು ನಮಗೆ ಖುಷಿ ತಂದಿದೆ,” ಎಂದ ಸಿಜೆಐ ಬೊಬ್ಡೆ ಅವರು ಆಧಾರಗಳನ್ನು ದಾಖಲೆಯಲ್ಲಿ ಉಲ್ಲೇಖಿಸಿ ಅಫಿಡವಿಟ್ ಸಲ್ಲಿಸಬೇಕು ಎಂದು ಸೂಚಿಸಿದರು.

ಒಕ್ಕೂಟವು ಕೋವಿಡ್‌ ಸಾಂಕ್ರಾಮಿಕತೆಯ ಹಿನ್ನೆಲೆಯಲ್ಲಿ ತನ್ನ ಸದಸ್ಯರು ಪಡೆದಿರುವ ಸಾಲದ ಮೇಲಿನ ಬಡ್ಡಿಯನ್ನು ಕೇಂದ್ರವು ಮನ್ನಾ ಮಾಡಬೇಕು ಎಂದು ನಿರ್ದೇಶಿಸುವಂತೆ ನ್ಯಾಯಾಲಯವನ್ನು ಕೋರಿದೆ. ಅಲ್ಲದೆ, ತನ್ನ ಸದಸ್ಯರಿಗೆ ರೂ.20 ಲಕ್ಷದವರೆಗೆ ಬಡ್ಡಿ ರಹಿತ ಸಾಲವನ್ನು ವಿತರಿಸಲು ಯೋಜನೆಯೊಂದನ್ನು ರೂಪಿಸುವಂತೆ ಮನವಿ ಮಾಡಿದೆ.