ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಜಾಮೀನು ಕೋರಿ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸಲ್ಲಿಸಿರುವ ಅರ್ಜಿಗೆ ಸಂಬಂಧಿಸಿದಂತೆ ಗಣನೀಯವಾಗಿ ನ್ಯಾಯಾಲಯದ ಸಮಯ ವಿನಿಯೋಗವಾಗಿರುವ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಕಳವಳ ವ್ಯಕ್ತಪಡಿಸಿದೆ [ಅರವಿಂದ್ ಕೇಜ್ರಿವಾಲ್ ಮತ್ತು ಸಿಬಿಐ ನಡುವಣ ಪ್ರಕರಣ].
ಸಿಬಿಐ ನಡೆಸಿದ ಅಕ್ರಮ ಬಂಧನದ ಬಗ್ಗೆ ಕೇಜ್ರಿವಾಲ್ ಪರವಾಗಿ ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಅವರು ವಿವರವಾಗಿ ವಾದ ಮಂಡಿಸುತ್ತಿದ್ದಾಗ ನ್ಯಾಯಮೂರ್ತಿಗಳಾದ ಸೂರ್ಯ ಕಾಂತ್ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠ ಈ ರೀತಿ ಅಭಿಪ್ರಾಯಪಡಿಸಿತು.
ಸಾಮಾನ್ಯ ಜಾಮೀನು ಅರ್ಜಿಗಳಲ್ಲಿ ಹೀಗೆ ಸುದೀರ್ಘ ವಿಚಾರಣೆ ನಡೆಯುವುದು ಅಪರೂಪ ಎಂದು ನ್ಯಾಯಾಲಯ ಹೇಳಿತು. “ಎರಡೂ ಕಡೆಯ ವಾದ ಆಲಿಸಿದ್ದೇವೆ. ಇನ್ನೂ ಎಷ್ಟು ದಿನ ಆಲಿಸಬೇಕು ಎಂದು ಅಚ್ಚರಿಯಾಗುತ್ತಿದೆ. ಸಾಮಾನ್ಯರಿಗೆ ಇಷ್ಟು ಕಾಲಾವಕಾಶ ಸಿಗುತ್ತದೆಯೇ?” ಎಂದು ಅದು ಪ್ರಶ್ನಿಸಿತು.
ತಮ್ಮನ್ನು ಸಿಬಿಐ ಬಂಧಿಸಿರುವುದರ ಕಾನೂನುಬದ್ಧತೆ ಪ್ರಶ್ನಿಸಿ ಮತ್ತು ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಜಾಮೀನು ಕೋರಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಸಲ್ಲಿಸಿರುವ ಅರ್ಜಿಗಳನ್ನು ಇಂದು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿತು.
ಕೇಜ್ರಿವಾಲ್ ಅವರು ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆಯಾದರೆ, ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ನಡೆಯುತ್ತಿರುವ ತನಿಖೆಗೆ ಅಡ್ಡಿಪಡಿಸುವ ಸಾಧ್ಯತೆಯಿದೆ ಎಂದು ಸಿಬಿಐ ಈ ಹಿಂದೆ ಹೇಳಿತ್ತು.
ದೆಹಲಿ ಹೈಕೋರ್ಟ್ ಆಗಸ್ಟ್ 5 ರಂದು ಕೇಜ್ರಿವಾಲ್ ಅವರ ಮನವಿಯನ್ನು ತಿರಸ್ಕರಿಸಿತ್ತು. ಜಾಮೀನಿಗಾಗಿ ವಿಚಾರಣಾ ನ್ಯಾಯಾಲಯವನ್ನು ಸಂಪರ್ಕಿಸುವಂತೆ ಆಗ ಸೂಚಿಸಿತ್ತು. ಹೀಗಾಗಿ ಕೇಜ್ರಿವಾಲ್ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.
ಪ್ರಕರಣಕ್ಕೆ ಸಂಬಂಧಿಸಿದಂತೆ ಆಗಸ್ಟ್ 14ರಂದು ಸುಪ್ರೀಂ ಕೋರ್ಟ್ ಪ್ರತಿಕ್ರಿಯೆ ಕೇಳಿದ ಸಿಬಿಐ ಆ ಹಂತದಲ್ಲಿ ಜಾಮೀನು ನಿರಾಕರಿಸಿತ್ತು.