ಸುದ್ದಿಗಳು

ಮುಂಬೈ ಪೊಲೀಸರು ವಾಹಿನಿಯನ್ನು ಗುರಿಯಾಗಿಸಿದ್ದಾರೆ ಎನ್ನುವ ಅರ್ನಾಬ್‌ ಮನವಿ ವಜಾಗೊಳಿಸಿದ ಸುಪ್ರೀಂ ಕೋರ್ಟ್‌

Bar & Bench

ಮಹಾರಾಷ್ಟ್ರ ಪೊಲೀಸರು ರಿಪಬ್ಲಿಕ್‌ ಟಿವಿ ಚಾನೆಲ್‌ನ ಸಿಬ್ಬಂದಿಯ ವಿರುದ್ಧ ದಬ್ಬಾಳಿಕೆಯ ಕ್ರಮ ಅನುಸರಿಸದ ಹಾಗೆ ರಕ್ಷಣೆ ಒದಗಿಸುವಂತೆ ಕೋರಿ ರಿಪಬ್ಲಿಕ್‌ ಟಿವಿ ಮತ್ತು ಅದರ ಪ್ರಧಾನ ಸಂಪಾದಕ ಅರ್ನಾಬ್‌ ಗೋಸ್ವಾಮಿ ಸೋಮವಾರ ಸಲ್ಲಿಸಿದ್ದ ಮನವಿ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್‌ ನಿರಾಕರಿಸಿದೆ.

ಮಹಾರಾಷ್ಟ್ರ ಪೊಲೀಸರು ನಿರಂತರವಾಗಿ ರಿಪಬ್ಲಿಕ್‌ ಟಿವಿ ಮತ್ತು ಅದರ ಸಿಬ್ಬಂದಿಯನ್ನು ಬೆನ್ನತ್ತಿದ್ದು, ಪ್ರಕರಣದ ಸಂಬಂಧ ಕೇಂದ್ರೀಯ ತನಿಖಾ ದಳದಿಂದ (ಸಿಬಿಐ) ತನಿಖೆ ನಡೆಸುವಂತೆ ಕೋರಿದ್ದ ಮನವಿಯನ್ನು ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್‌ ನೇತೃತ್ವದ ಪೀಠವು “ಮಹಾತ್ವಾಕಾಂಕ್ಷೆಯ ಸ್ವರೂಪ ಹೊಂದಿರುವಂತಹದ್ದು” ಎಂದು ಹೇಳಿದ ಹಿನ್ನೆಲೆಯಲ್ಲಿ ಹಿಂಪಡೆಯಲಾಗಿದೆ.

“ಈ ಮನವಿಯು ಮಹಾತ್ವಾಕಾಂಕ್ಷೆಯ ಸ್ವರೂಪದಿಂದ ಕೂಡಿದೆ. ಮಹಾರಾಷ್ಟ್ರ ಪೊಲೀಸರು ಯಾವುದೇ ಸಿಬ್ಬಂದಿಯನ್ನು ಬಂಧಿಸದೇ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸುವುದು ನಿಮಗೆ ಬೇಕಿದೆ. ನೀವು ಈ ಮನವಿಯನ್ನು ಹಿಂಪಡೆಯುವುದು ಉತ್ತಮ” ಎಂದು ನ್ಯಾಯಮೂರ್ತಿ ಚಂದ್ರಚೂಡ್‌ ಅಭಿಪ್ರಾಯಪಟ್ಟರು.

ಸೂಕ್ತ ವೇದಿಕೆಯಲ್ಲಿ ಮನವಿ ಸಲ್ಲಿಸುವ ಸ್ವಾತಂತ್ರ್ಯವನ್ನು ನ್ಯಾಯಮೂರ್ತಿ ಚಂದ್ರಚೂಡ್‌ ಅವರಿದ್ದ ಪೀಠ ನೀಡಿದ ಹಿನ್ನೆಲೆಯಲ್ಲಿ ಗೋಸ್ವಾಮಿ ಪರ ಹಿರಿಯ ವಕೀಲ ಮಿಲಿಂದ್‌ ಸಾಥೆ ಅವರು ಮನವಿಯನ್ನು ಹಿಂಪಡೆದರು.