ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿ ರದ್ದತಿ ಎತ್ತಿ ಹಿಡಿದಿದ್ದ ತೀರ್ಪಿನ ಸೂಕ್ತತೆ ಪ್ರಶ್ನಿಸಿ ಸಲ್ಲಿಸಲಾಗಿದ್ದ ಮರುಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟ್ ಈಚೆಗೆ ವಜಾಗೊಳಿಸಿದೆ [ಅವಾಮಿ ನ್ಯಾಶನಲ್ ಕಾನ್ಫರೆನ್ಸ್ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].
ಮರುಪರಿಶೀಲನೆಗೆ ಸಂಬಂಧಿಸಿದಂತೆ ಯಾವುದೇ ವಾದ ಮಂಡಿಸಿಲ್ಲ ಎಂದು ಸಿಜೆಐ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಬಿ ಆರ್ ಗವಾಯಿ, ಸೂರ್ಯ ಕಾಂತ್ ಹಾಗೂ ಎ ಎಸ್ ಬೋಪಣ್ಣ ಅವರಿದ್ದ ಪೀಠ ಮೇ 1ರಂದು ನೀಡಿದ್ದ ಆದೇಶದಲ್ಲಿ ತಿಳಿಸಿದೆ.
“ಮರುಪರಿಶೀಲನೆ ಅರ್ಜಿಗಳನ್ನು ಪರಾಮರ್ಶಿಸಿದ ಬಳಿಕ ದಾಖಲೆಗೆ ಸಂಬಂಧಿಸಿದಂತೆ ಯಾವುದೇ ದೋಷ ಕಂಡುಬಂದಿಲ್ಲ. ಸುಪ್ರೀಂ ಕೋರ್ಟ್ ನಿಯಮಾವಳಿ 2013ರ ಆದೇಶ XLVII ನಿಯಮ 1ರ ಅಡಿಯಲ್ಲಿ ಪರಿಶೀಲನೆಗೆ ಯಾವುದೇ ಸಮರ್ಥನೆಗಳನ್ನು ಮಾಡಲಾಗಿಲ್ಲ. ಆದ್ದರಿಂದ ಮರುಪರಿಶೀಲನಾ ಅರ್ಜಿ ವಜಾಗೊಳಿಸಲಾಗುತ್ತಿದೆ” ಎಂದು ನ್ಯಾಯಾಲಯ ವಿವರಿಸಿದೆ.
ಜಮ್ಮು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿ ತಾತ್ಕಾಲಿಕ ನಿಬಂಧನೆ ಎಂದು ತಿಳಿಸಿದ್ದ ಸುಪ್ರೀಂ ಕೋರ್ಟ್ ರದ್ದತಿಯನ್ನು ಎತ್ತಿಹಿಡಿದು 2023ರ ಡಿಸೆಂಬರ್‌ನಲ್ಲಿ ತೀರ್ಪು ನೀಡಿತ್ತು. ಈ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ಅರ್ಜಿ ಸಲ್ಲಿಸಲಾಗಿತ್ತು.
ಅಲ್ಲದೆ, ಸಂವಿಧಾನದ 370ನೇ ವಿಧಿ ರದ್ದತಿಯ ನಂತರ ವಿವಾದಾಸ್ಪದವಾಗಿ ಜಮ್ಮು ಮತ್ತು ಕಾಶ್ಮೀರವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಲಾಗಿತ್ತು. ಇದಕ್ಕೆ ದಾರಿ ಮಾಡಿಕೊಟ್ಟ 2019ರ ಕಾನೂನಿನ ಸಿಂಧುತ್ವ ನಿರ್ಧರಿಸಲು ನ್ಯಾಯಾಲಯ ನಿರಾಕರಿಸಿತ್ತು.
ಬದಲಿಗೆ ಜಮ್ಮು ಕಾಶ್ಮೀರದ ರಾಜ್ಯ ಸ್ಥಾನಮಾನವನ್ನು ಆದಷ್ಟು ಬೇಗ ಪುನಃಸ್ಥಾಪಿಸಲಾಗುವುದು ಎಂದು ಕೇಂದ್ರ ಸರ್ಕಾರದ ಎರಡನೇ ಅತ್ಯುನ್ನತ ಕಾನೂನು ಅಧಿಕಾರಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ನೀಡಿದ್ದ ಭರವಸೆಯನ್ನು ದಾಖಲಿಸಿಕೊಂಡಿತ್ತು.
ತೀರ್ಪಿಗೆ ಹಲವು ವಲಯಗಳಿಂದ ಟೀಕೆ ವ್ಯಕ್ತವಾಗಿತ್ತು. ತೀರ್ಪು ತುಂಬಾ ವಿಚಲಿತಗೊಳಿಸುವಂತಿದ್ದು ಒಕ್ಕೂಟ ವ್ಯವಸ್ಥೆ ಮೇಲೆ ದೊಡ್ಡ ರೀತಿಯಲ್ಲಿ ಪರಿಣಾಮ ಬೀರುತ್ತದೆ. ರಾಜ್ಯದಲ್ಲಿ ಒಂದು ವರ್ಷ ಮಾತ್ರ ರಾಷ್ಟ್ರಪತಿ ಆಡಳಿತ ಜಾರಿಯಲ್ಲಿರಲು ಅವಕಾಶ ಮಾಡಿಕೊಡುವ ಸಂವಿಧಾನದ 356ನೇ ವಿಧಿಯನ್ನು ಮೀರಲು ಕೇಂದ್ರ ಸರ್ಕಾರಕ್ಕೆ ಅವಕಾಶ ಮಾಡಿಕೊಟ್ಟಿದೆ ಎಂದು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಮೂರ್ತಿ ರೋಹಿಂಟನ್ ನಾರಿಮನ್ ತಿಳಿಸಿದ್ದರು.
ನಂತರ ನ್ಯಾ. ರೋಹಿಂಟನ್ ಅವರ ತಂದೆಯವರಾದ, ಈಚೆಗೆ ನಿಧನ ಹೊಂದಿದ ಹಿರಿಯ ನ್ಯಾಯಶಾಸ್ತ್ರಜ್ಞ ಫಾಲಿ ಎಸ್ ನಾರಿಮನ್ ಅವರು ವಿಧಿ 370 ರದ್ದತಿ ಎತ್ತಿಹಿಡಿದ ಸುಪ್ರೀಂ ತೀರ್ಪಿನಲ್ಲಿ ಭಿನ್ನ ತೀರ್ಪು ಇಲ್ಲದೆ ಹೋದದ್ದು ವಿಷಾದಕರ ಎಂದಿದ್ದರು.