Supreme Court
Supreme Court 
ಸುದ್ದಿಗಳು

ಕಾಸರಗೋಡಿನಲ್ಲಿ ಇವಿಎಂ ಅಕ್ರಮ ಆರೋಪ: ಪರಿಶೀಲಿಸುವಂತೆ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಸೂಚನೆ

Bar & Bench

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದ ವೇಳೆ ಭಾರತೀಯ ಜನತಾ ಪಕ್ಷದ (ಬಿಜೆಪಿ) ಪರವಾಗಿ ಎಲೆಕ್ಟ್ರಾನಿಕ್ ಮತಯಂತ್ರಗಳು (ಇವಿಎಂ) ತಪ್ಪಾಗಿ ಮತ ನೀಡುತ್ತಿದ್ದ ಆರೋಪಕ್ಕೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಬೇಕು ಎಂದು ಭಾರತೀಯ ಚುನಾವಣಾ ಆಯೋಗಕ್ಕೆ (ಇಸಿಐ) ಸುಪ್ರೀಂ ಕೋರ್ಟ್‌ ಗುರುವಾರ ನಿರ್ದೇಶನ ನೀಡಿದೆ.

ಅಕ್ರಮ ನಡೆದಿರುವುದನ್ನು ವಕೀಲ ಪ್ರಶಾಂತ್ ಭೂಷಣ್ ಅವರು ಪ್ರಸ್ತಾಪಿಸಿದ ಹಿನ್ನೆಲೆಯಲ್ಲಿ ಸಮಸ್ಯೆ  ಪರಿಶೀಲಿಸುವಂತೆ ಇಸಿಐಗೆ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ದೀಪಂಕರ್ ದತ್ತಾ ಸೂಚಿಸಿದರು.

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನ ನಡೆದಿತ್ತು. ಆಗ  4 ಇವಿಎಂಗಳು ಮತ್ತು ವಿವಿಪ್ಯಾಟ್‌ಗಳು ಬಿಜೆಪಿಗೆ ಒಂದು ಹೆಚ್ಚುವರಿ ಮತವನ್ನು ಮುದ್ರಿಸುತ್ತಿದ್ದವು. ಈ ವಿಚಾರವನ್ನು ಮಲಯಾಳಂ  ಮನೋರಮಾ ವರದಿ ಮಾಡಿತ್ತು ಎಂದು ಪ್ರಶಾಂತ್‌ ಭೂಷಣ್‌‌ ಅವರು ತಿಳಿಸಿದರು.

ಆಗ ಇಸಿಐ ಪರ ವಕೀಲ ಮಣೀಂದರ್‌ ಸಿಂಗ್‌ ಅವರಿಗೆ ಈ ಕುರಿತು ಪರಿಶೀಲಿಸುವಂತೆ ನ್ಯಾಯಾಲಯ ಸೂಚಿಸಿತು.

ಇವಿಎಂಗಳ ಮೂಲಕ ಚಲಾವಣೆಯಾದ ಪ್ರತಿ ಮತವನ್ನು ಚುನಾವಣಾ ಸಮಯದಲ್ಲಿ ವೋಟರ್-ವೆರಿಫೈಬಲ್ ಪೇಪರ್ ಆಡಿಟ್ ಟ್ರಯಲ್ (ವಿವಿಪಿಎಟಿ) ಚೀಟಿಗಳೊಂದಿಗೆ ತಾಳೆ ಮಾಡಲು ನಿರ್ದೇಶನ ನಿಡುವಂತೆಕೋರಿ ಸಲ್ಲಿಸಲಾದ ಅರ್ಜಿಗಳ ವಿಚಾರಣೆ ವೇಳೆ ನ್ಯಾಯಾಲಯ ಈ ವಿಚಾರ ತಿಳಿಸಿದೆ.

ಪ್ರಸ್ತುತ ಪ್ರತಿಯೊಂದು ವಿಧಾನಸಭಾ ಕ್ಷೇತ್ರದಲ್ಲಿ ಯಾದೃಚ್ಛಿಕವಾಗಿ ಆಯ್ಕೆ ಮಾಡಿದ ಐದು ಇವಿಎಂಗಳಲ್ಲಿ ವಿವಿಪ್ಯಾಟ್‌ ಮೂಲಕ ಮತಗಳ ತಾಳೆ ಹಾಕಲಾಗುತ್ತದೆ.  

ಪ್ರತಿಯೊಂದು ಇವಿಎಂ ಮತವನ್ನು ವಿವಿಪ್ಯಾಟ್ ಚೀಟಿಗಳೊಂದಿಗೆ ತಾಳೆ ಹಾಕಬೇಕು ಎಂದು ಅರ್ಜಿದಾರರಲ್ಲಿ ಒಬ್ಬರಾದ ವಕೀಲ ಮತ್ತು ಸಾಮಾಜಿಕ ಹೋರಾಟಗಾರ ಅರುಣ್ ಕುಮಾರ್ ಅಗರವಾಲ್ ಕೋರಿದರು.

ಮತದಾರರು ತಮ್ಮ ಕೈಯಾರೆ ವಿವಿಪ್ಯಾಟ್‌ ಚೀಟಿಯನ್ನು ತೆಗೆದು ಮತಪೆಟ್ಟಿಗೆಯಲ್ಲಿ ಹಾಕಲು ಅವಕಾಶ ಮಾಡಿಕೊಡಬೇಕು ಎಂದು ಕೂಡ ಅವರು ಪ್ರಾರ್ಥಿಸಿದ್ದಾರೆ.