CJI Ramana, Surya Kant, Pegasus and SC 
ಸುದ್ದಿಗಳು

[ಪೆಗಸಸ್‌ ಹಗರಣ] ಆರೋಪಗಳು ಗಂಭೀರವಾಗಿದ್ದು, ಕ್ರಿಮಿನಲ್‌ ದೂರು ದಾಖಲಿಸಲಿಲ್ಲವೇಕೆ? ಅರ್ಜಿದಾರರಿಗೆ ಸುಪ್ರೀಂ ಪ್ರಶ್ನೆ

ಎಲ್ಲಾ ಪಕ್ಷಕಾರರು ತಮ್ಮ ಮನವಿಯ ಪ್ರತಿಯನ್ನು ಕೇಂದ್ರ ಸರ್ಕಾರದ ಕಾನೂನು ಅಧಿಕಾರಿಗಳಿಗೆ ಕಳುಹಿಸಿಕೊಡಬೇಕು ಎಂದಿರುವ ಪೀಠವು ಔಪಚಾರಿಕವಾಗಿ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡದೇ ಪ್ರಕರಣವನ್ನು ಮುಂದಿನ ಮಂಗಳವಾರಕ್ಕೆ ಮುಂದೂಡಿತು.

Bar & Bench

ಜಗತ್ತಿನಾದ್ಯಂತ ಸಂಚನಲನ ಮೂಡಿಸಿರುವ ಪೆಗಸಸ್‌ ಬೇಹುಗಾರಿಕಾ ಹಗರಣಕ್ಕೆ ಸಂಬಂಧಿಸಿದಂತೆ ಪ್ರತ್ಯೇಕವಾಗಿ ಸಲ್ಲಿಕೆಯಾಗಿರುವ ಒಂಭತ್ತು ಮನವಿಗಳ ವಿಚಾರಣೆಯನ್ನು ಗುರುವಾರ ನಡೆಸಿದ ಸುಪ್ರೀಂ ಕೋರ್ಟ್‌, ಪೆಗಸಸ್‌ ಕುರಿತು ಮಾಧ್ಯಮಗಳಲ್ಲಿ ಪ್ರಕಟವಾಗಿರುವ ಆರೋಪಗಳು ದಿಟವೇ ಆಗಿದ್ದರೆ ಇದು ಗಂಭೀರವಾದ ಪ್ರಕರಣ. ಆದರೆ, ಇದರಿಂದ ಬಾಧಿತರಾದವರು ನ್ಯಾಯಾಲಯದ ಮೆಟ್ಟಿಲೇರುವುದಕ್ಕೂ ಮುನ್ನ ಪೊಲೀಸರಲ್ಲಿ ಕ್ರಿಮಿನಲ್‌ ಪ್ರಕರಣ ದಾಖಲಿಸುವ ಪ್ರಯತ್ನ ಮಾಡಿಲ್ಲ ಎಂದು ಹೇಳಿದೆ.

ಕೇಂದ್ರ ಸರ್ಕಾರದ ಕಾನೂನು ಅಧಿಕಾರಿಗಳಿಗೆ ಎಲ್ಲಾ ಪಕ್ಷಕಾರರು ತಮ್ಮ ಮನವಿಯ ಪ್ರತಿಯೊಂದನ್ನು ಕಳುಹಿಸಿಕೊಡಲು ಸೂಚಿಸಿದ ಮುಖ್ಯ ನ್ಯಾಯಮೂರ್ತಿ ಎನ್‌ ವಿ ರಮಣ ಮತ್ತು ಸೂರ್ಯಕಾಂತ್‌ ಅವರಿದ್ದ ವಿಭಾಗೀಯ ಪೀಠವು ವಿಚಾರಣೆಯನ್ನು ಮುಂದಿನ ಮಂಗಳವಾರಕ್ಕೆ ಮುಂದೂಡಿತು. ಈ ಮಧ್ಯೆ, ಪೀಠವು ಕೇಂದ್ರ ಸರ್ಕಾರಕ್ಕೆ ಔಪಚಾರಿಕವಾಗಿ ಯಾವುದೇ ನೋಟಿಸ್‌ ಜಾರಿ ಮಾಡಲಿಲ್ಲ.

ವಿಚಾರಣೆಯ ಸಂದರ್ಭದಲ್ಲಿ ಸಿಜೆಐ ರಮಣ ಅವರು “ಮಾಧ್ಯಮ ವರದಿಗಳು ಸತ್ಯವಾಗಿದ್ದರೆ ಆರೋಪಗಳು ಗಂಭೀರವಾಗಿವೆ. ಮನವಿಯಲ್ಲಿ ಏನೂ ಇಲ್ಲ ಎಂದು ನಾವು ಹೇಳಲಾಗದು. ಅರ್ಜಿ ಸಲ್ಲಿಸಿರುವ ಕೆಲವರು ಬಾಧಿತರಾಗಿಲ್ಲ. ಕೆಲವರು ತಮ್ಮ ಫೋನ್‌ಗಳು ಹ್ಯಾಕ್‌ ಆಗಿವೆ ಎಂದು ಹೇಳಿಕೊಂಡಿದ್ದಾರೆ. ಆದರೆ, ಅವರಾರೂ ಕ್ರಿಮಿನಲ್‌ ದೂರು ದಾಖಲಿಸುವ ಪ್ರಯತ್ನ ಮಾಡಿಲ್ಲ” ಎಂದರು.

ಅರ್ಜಿದಾರರೊಬ್ಬರ ಪರ ಹಾಜರಾದ ಹಿರಿಯ ವಕೀಲ ಕಪಿಲ್‌ ಸಿಬಲ್‌ ಅವರು ಪೆಗಸಸ್‌ ಅನ್ನು “ದುಷ್ಟ ತಂತ್ರಜ್ಞಾನ” ಎಂದು ಜರಿದಿದ್ದು, ಅದು “ನಮ್ಮ ರಾಷ್ಟ್ರೀಯ ಇಂಟರ್ನೆಟ್‌ ಬೆನ್ನೆಲುಬಿಗೆ ಸಂಚಕಾರ” ಉಂಟು ಮಾಡಿದೆ ಎಂದಿದ್ದಾರೆ. “ಪೆಗಸಸ್‌ ದುಷ್ಟ ತಂತ್ರಜ್ಞಾನವಾಗಿದ್ದು, ನಮಗೆ ಅರಿವಿಲ್ಲದೇ ಅದು ನಮ್ಮ ಜೀವನದಲ್ಲಿ ನುಸುಳುತ್ತದೆ. ಅದಕ್ಕೆ ಬೇಕಿರುವುದು ಫೋನ್‌ ಮಾತ್ರ. ಅದರ ಮೂಲಕ ಪೆಗಸಸ್‌ ನಮ್ಮ ಬದುಕಿಗೆ ಪ್ರವೇಶಿಸುತ್ತದೆ. ಇದು ಖಾಸಗಿತನ, ಮಾನವನ ಘನತೆ ಮತ್ತು ನಮ್ಮ ಪ್ರಜಾತಂತ್ರದ ಮೇಲೆ ದಾಳಿ ಇಟ್ಟಿದ್ದು, ನಮ್ಮ ರಾಷ್ಟ್ರೀಯ ಇಂಟರ್ನೆಟ್‌ ಬೆನ್ನಲುಬಿಗೆ ಸಂಚಕಾರ ಉಂಟು ಮಾಡಿದೆ” ಎಂದಿದ್ದಾರೆ.

ಪೆಗಸಸ್‌ ಪ್ರಕರಣವು 2019ರಲ್ಲಿ ಬೆಳಕಿಗೆ ಬಂದಿದ್ದು, ಆಗ ಅದರ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಲಾಗಿಲ್ಲ ಎಂದು ಸಿಜೆಐ ಹೇಳಿದ್ದಾರೆ. “ಹೆಚ್ಚಿನ ಜ್ಞಾನ ಹೊಂದಿರುವ ಮತ್ತು ಸಂಪನ್ಮೂಲ ಹೊಂದಿದ್ದವರು ಆಗಲೇ ರಿಟ್‌ ಮನವಿ ಸಲ್ಲಿಸಬೇಕಿತ್ತು. ಹೆಚ್ಚಿನ ಮಾಹಿತಿ ಸಂಗ್ರಹಿಸಲು ಅವರು ಮಗದಷ್ಟು ಶ್ರಮ ಹಾಕಬೇಕಿತ್ತು” ಎಂದು ಸಿಜೆಐ ಹೇಳಿದರು. ಸರ್ಕಾರಗಳಿಗೆ ಮಾತ್ರವೇ ಪೆಗಸಸ್‌ ಮಾರಾಟ ಮಾಡಲಾಗುತ್ತದೆ ಎಂದು ಓದಿದ್ದಾಗಿ ಸಿಜೆಐ ತಿಳಿಸಿದರು.

ಆಗ ಸಿಬಲ್‌ ಅವರು ಪೆಗಸಸ್‌ಗೆ ಸಂಬಂಧಿಸಿದ ಪ್ರಕರಣ ಕ್ಯಾಲಿಫೋರ್ನಿಯಾ ನಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇರುವುದನ್ನು ಉಲ್ಲೇಖಿಸಿದರು.

ಈ ನಡುವೆ, ನ್ಯಾಯಮೂರ್ತಿ ಸೂರ್ಯಕಾಂತ್‌ ಅವರು “ಕ್ಯಾಲಿಫೋರ್ನಿಯಾ ಪ್ರಕರಣದಲ್ಲಿ ಏನಾಯಿತು. ಅಲ್ಲಿ ಸರ್ಕಾರವು ಸಾರ್ವಭೌಮತ್ವದ ವಿನಾಯಿತಿ” ಕೋರಿತು ಎಂದರು. ಆಗ ಸಿಬಲ್‌ ಅವರು “ವಿನಾಯಿತಿ ಮನವಿಯನ್ನು ನ್ಯಾಯಾಲಯ ವಜಾ ಮಾಡಿದೆ” ಎಂದು ಪ್ರತಿಕ್ರಿಯಿಸಿದರು.

ಪೀಠವು “ಆ ಪ್ರಕರಣ ಈಗ ಎಲ್ಲಿಗೆ ಬಂದು ನಿಂತಿದೆ” ಎಂದಿತು. ಸಿಬಲ್‌ ಅವರು “ಆ ಪ್ರಕರಣ ಕ್ಯಾಲಿಫೋರ್ನಿಯಾ ನ್ಯಾಯಾಲಯದಲ್ಲಿ ವಿಚಾರಣೆಗೆ ಬಾಕಿ ಇದೆ” ಎಂದರು.

ಮುಂದುವರಿದು ಸಿಬಲ್‌ ಅವರು ಇಲ್ಲಿರುವ ಪ್ರಶ್ನೆ, ಸರ್ಕಾರವು ಪೆಗಸಸ್‌ ಖರೀದಿಸಿ ಅದನ್ನು ಪರ್ತಕರ್ತರು, ರಾಜಕಾರಣಿಗಳು ಮತ್ತು ಸಾಂವಿಧಾನಿಕ ಹುದ್ದೆಯಲ್ಲಿರುವವರ ಮೇಲೆ ನಿಗಾ ಇರಿಸಿತ್ತೇ ಎಂಬುದಾಗಿದೆ ಎಂದರು. “ಈ ರೀತಿಯಾಗುತ್ತಿದೆ ಎಂದು ಕೇಂದ್ರ ಸರ್ಕಾರ ಹೇಳಿದ್ದರೆ ಅದು ಎಫ್‌ಐಆರ್‌ ಏಕೆ ದಾಖಲಿಸಿಲ್ಲ. ಕೇಂದ್ರ ಸರ್ಕಾರ ಮೌನವಾಗಿರುವುದೇಕೆ. ಇದು ಭಾರತೀಯರ ಖಾಸಗಿತನ ಮತ್ತು ರಕ್ಷಣೆಗೆ ಸಂಬಂಧಿಸಿದ್ದಾಗಿದೆ. ಸರ್ಕಾರ ಅದನ್ನು ಖರೀದಿಸಿಲ್ಲ ಎಂದಾದರೆ ಭಾರತದಲ್ಲಿ ಈ ತಂತ್ರಜ್ಞಾನ ಬಳಸಲಾಗದು” ಎಂದರು.

ರಾಜ್ಯ ಸರ್ಕಾರಗಳೂ ಇದನ್ನು ಖರೀದಿಸಬಹುದಾಗಿದೆ ಎಂದು ಸಿಜೆಐ ರಮಣ ಹೇಳಿದರು. ಆಗ ಸಿಬಲ್‌ ಅವರು “ಈ ವಿಚಾರವನ್ನು ಕೇಂದ್ರ ಸರ್ಕಾರ ಸ್ಪಷ್ಟಪಡಿಸಬೇಕಿದೆ. ಇದು ಆಂತರಿಕ ವಿಚಾರವಲ್ಲ. ಎಲ್ಲದಕ್ಕೂ ನಾವು ಉತ್ತರಿಸಲಾಗದು. ಈ ಸಂಬಂಧ ನಮಗೆ ಯಾವುದೇ ಮಾಹಿತಿ ಇಲ್ಲ. ಸರ್ಕಾರಕ್ಕೆ ಮಾತ್ರ ಇದರ ಬಗ್ಗೆ ತಿಳಿದಿದೆ. ಈ ಕುರಿತು ಕ್ರಮಕೈಗೊಂಡಿಲ್ಲವೇಕೆ ಎಂದು ಕೇಂದ್ರ ಸರ್ಕಾರ ಉತ್ತರಿಸಬೇಕು” ಎಂದು ಪ್ರತಿಕ್ರಿಯಿಸಿದರು.

ಸದರಿ ಪ್ರಕರಣವನ್ನು ನ್ಯಾಯಾಲಯಕ್ಕೆ ತರಲು ಎರಡು ವರ್ಷಗಳು ಏಕೆ ಹಿಡಿದವು ಎಂದು ಸಿಜೆಐ ಮತ್ತೊಮ್ಮೆ ಒತ್ತಿ ಕೇಳಿದರು. “ಎರಡು ವರ್ಷಗಳ ಬಳಿಕ ಇದ್ದಕ್ಕಿದ್ದ ಹಾಗೆ ಈ ಪ್ರಕರಣ ಮೇಲೆ ಬಂದಿದ್ದೇಕೆ” ಎಂಬ ಸಿಜೆಐ ರಮಣ ಅವರ ಪ್ರಶ್ನೆಗೆ ಸಿಬಲ್‌ ಅವರು “ವಾಷಿಂಗ್ಟನ್‌ ಪೋಸ್ಟ್‌ ಮತ್ತು ಇತರೆ ಮಾಧ್ಯಮಗಳಿಂದ ಈ ವಿಚಾರ ನಮ್ಮ ಗಮನಕ್ಕೆ ಬಂದಿತು. ಇಷ್ಟರ ಮಟ್ಟಿಗೆ ಬೇಹುಗಾರಿಕೆ ನಡೆಸಲಾಗಿದೆ ಎಂಬುದು ನಮಗೆ ತಿಳಿದಿರಲಿಲ್ಲ. ಅದು ತಿಳಿಯದೆ ನಾವು ಈ ಮನವಿಯನ್ನು ಹೇಗೆ ಸಲ್ಲಿಸಲು ಸಾಧ್ಯವಿತ್ತು...” ಎಂದರು.

“ಈ ನ್ಯಾಯಾಲಯದ ರಿಜಿಸ್ಟ್ರಾರ್‌ಗಳ ಮೊಬೈಲ್‌ ಸಂಖ್ಯೆಗಳ ಮೇಲೆ ನಿಗಾ ಇಡಲಾಗಿದೆ ಎಂಬುದು ನಮಗೆ ಇಂದು ಬೆಳಗ್ಗೆಯಷ್ಟೇ ತಿಳಿದಿದೆ. ಅವರ ಫೋನ್‌ಗಳನ್ನೂ ಶೋಧಿಸಲಾಗಿದೆ. ನ್ಯಾಯಾಂಗದ ಕೆಲವು ಸದಸ್ಯರ ಹೆಸರನ್ನೂ ಉಲ್ಲೇಖಿಸಲಾಗಿದೆ” ಎಂದರು. ಅದಾಗ್ಯೂ, ನ್ಯಾಯಾಲಯದ ಕದತಟ್ಟುವುದಕ್ಕೂ ಮುನ್ನ ಕ್ರಿಮಿನಲ್‌ ಪ್ರಕರಣ ದಾಖಲಿಸಬೇಕಿತ್ತು ಎಂದು ಪೀಠ ಹೇಳಿತು. “ನಿಮ್ಮ ಫೋನ್‌ ಹ್ಯಾಕ್‌ ಮಾಡಲಾಗಿದೆ ಎಂಬುದು ನಿಮಗೆ ತಿಳಿದಿದ್ದರೆ ಎಫ್‌ಐಆರ್‌ ಏಕೆ ದಾಖಲಿಸಲಿಲ್ಲ. ಇದೊಂದೇ ನನ್ನ ಪ್ರಶ್ನೆ” ಎಂದು ಅರ್ಜಿದಾರರೊಬ್ಬರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲೆ ಮೀನಾಕ್ಷಿ ಅರೋರಾ ಅವರಿಗೆ ಸಿಜೆಐ ರಮಣ ಪ್ರಶ್ನಿಸಿದರು.

ಸ್ವತಂತ್ರ ತನಿಖೆ ನಡೆಸಬೇಕಿರುವುದರಿಂದ ದೂರು ದಾಖಲಿಸುವ ಗೋಜಿಗೆ ಹೋಗಲಿಲ್ಲ ಎಂದು ಅರ್ಜಿದಾರ ಜಗದೀಪ್‌ ಚೊಕ್ಕರ್‌ ಅವರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಶ್ಯಾಮ್‌ ದಿವಾನ್‌ ಹೇಳಿದರು. “ವಸ್ತುಸ್ಥಿತಿ ಶೋಧನಾ ಸಮಿತಿಯು ಈ ಹಗರಣದ ಕುರಿತು ತನಿಖೆ ನಡೆಸಬೇಕಿದೆ. ಇದಕ್ಕೆ ಕಾರ್ಯಾಂಗದ ಅತ್ಯುನ್ನತ ಮಟ್ಟದ ಅಧಿಕಾರಿ, ಸಂಪುಟ ಕಾರ್ಯದರ್ಶಿಯವರು ಪ್ರತಿಕ್ರಿಯಿಸಬೇಕು” ಎಂದರು.

ಇದು ಅಪರಾಧೀಕರಣ ಮಾತ್ರವಲ್ಲ ಸಂವಿಧಾನಕ್ಕೆ ಸಂಬಂಧಪಟ್ಟ ವಿಚಾರವಾಗಿದೆ ಎಂದು ಹಿರಿಯ ವಕೀಲ ರಾಕೇಶ್‌ ದ್ವಿವೇದಿ ಹೇಳಿದರು. “ಭಯೋತ್ಪಾದಕರು, ಮತ್ತಿತರರ ಫೋನ್‌ಗಳ ಮೇಲೆ ನಿಗಾ ಇಟ್ಟರೆ ನಮಗೆ ಅರ್ಥವಾಗುತ್ತದೆ. ಆದರೆ, ಸಾಮಾನ್ಯ ಜನರ ಮೇಲೆ ನಿಗಾ ಇಡುವುದನ್ನು ಒಪ್ಪಲಾಗದು. ಇದು ಅಪರಾಧೀಕರಣ ಮಾತ್ರವಲ್ಲ ಸಂವಿಧಾನಕ್ಕೆ ಸಂಬಂಧಪಟ್ಟ ವಿಚಾರವಾಗಿದೆ. ಕೇಂದ್ರ ಸರ್ಕಾರ ಪೆಗಸಸ್‌ ಅನ್ನು ಬಳಸಿದೆಯೇ ಎಂಬುದಕ್ಕೆ ಉತ್ತರಬೇಕಿದೆ. ಈ ಸಂಬಂಧ ಕೇಂದ್ರ ಸರ್ಕಾರ ಸ್ವಯಂಪ್ರೇರಣೆಯಿಂದ ಪ್ರತಿಕ್ರಿಯಿಸಬೇಕಿತ್ತು” ಎಂದು ವಾದಿಸಿದರು.

ಪೆಗಸಸ್‌ ಮೂಲಕ ಮೊಬೈಲ್‌ಗಳ ಮೇಲೆ ನಿಗಾ ಇಡಲಾಗಿದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಮತ್ತೊಬ್ಬ ಹಿರಿಯ ವಕೀಲ ಅರವಿಂದ್‌ ದಾತಾರ್‌ ಹೇಳಿದರು. “ಪೆಗಸಸ್‌ ಮೂಲಕ ನಿಗಾ ಇಡಲಾಗಿದೆ ಎಂಬುದು ನಮಗೆ ತಿಳಿದಿದೆ. ಆದರೆ, ಯಾರು ಮತ್ತು ಯಾವಾಗ ಅದನ್ನು ಬಳಸಲಾಗಿದೆ ಎಂಬುದು ತಿಳಿದಿಲ್ಲ” ಎಂದರು. ನಷ್ಟಕ್ಕೆ ಪರಿಹಾರ ಹುಡುಕಬೇಕಿದ್ದು, ಇದನ್ನು ಯಾರು ಮಾಡಿದ್ದಾರೆ ಎಂಬುದು ಅರಿಯಬೇಕಿದೆ ಎಂದರು.

ಆಗ ಸಿಜೆಐ ಅವರು “ಸೆಕ್ಷನ್‌ 66ಎ ಅನ್ವಯಿಸಬಹುದೇ” ಎಂದರು. ಇದನ್ನು ವಜಾ ಮಾಡಲಾಗಿದೆ ಎಂದು ದಾತಾರ್‌ ಪೀಠದ ಗಮನಸೆಳೆದರು.

“ಇಂದು 300 ಜನರ ವಿಚಾರ ಬೆಳಕಿಗೆ ಬಂದಿದೆ. ಇದು 300 ಅಥವಾ 3000 ಎಂಬುದು ನಮಗೆ ತಿಳಿದಿಲ್ಲ. ನ್ಯಾಯಾಂಗ ಹೊರತುಪಡಿಸಿ ಇದನ್ನು ಪರಿಗಣಿಸುವವರು ಯಾರು” ಎಂದರು. ವಾದ ಆಲಿಸಿದ ಪೀಠವು ಎಲ್ಲಾ ಪಕ್ಷಕಾರರು ತಮ್ಮ ಮನವಿಯ ಪ್ರತಿಯನ್ನು ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಂಡುವಂತೆ ಸೂಚಿಸಿದ್ದು, ವಿಚಾರಣೆಯನ್ನು ಆಗಸ್ಟ್‌ 10ಕ್ಕೆ ಮುಂದೂಡಿತು.