ಪಶ್ಚಿಮ ಬಂಗಾಳ ರಾಜ್ಯಪಾಲ ಸಿ ವಿ ಆನಂದ್ ಬೋಸ್ ವಿರುದ್ಧದ ಲೈಂಗಿಕ ಕಿರುಕುಳ ಆರೋಪಕ್ಕೆ ಸಂಬಂಧಿಸಿದಂತೆ ಕ್ರಮಕೈಗೊಳ್ಳಲು ಕೋರಿ ಮಹಿಳೆಯೊಬ್ಬರು ಸಲ್ಲಿಸಿರುವ ಅರ್ಜಿಯ ಸಂಬಂಧ ಸುಪ್ರೀಂ ಕೋರ್ಟ್ ಶುಕ್ರವಾರ ಪಶ್ಚಿಮ ಬಂಗಾಳ ಸರ್ಕಾರ ಮತ್ತು ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್, ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರ ನೇತೃತ್ವದ ತ್ರಿಸದಸ್ಯ ಪೀಠವು ಮಹಿಳೆಯ ಅರ್ಜಿಗೆ ಸಂಬಂಧಿಸಿದಂತೆ ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಅವರಿಗೆ ನ್ಯಾಯಾಲಯಕ್ಕೆ ಕಾನೂನಾತ್ಮಕ ಸಲಹೆ, ಸೂಚನೆ ನೀಡುವ ಮೂಲಕ ನೆರವಾಗಲು ಸೂಚಿಸಿದೆ.
ʼಸಂವಿಧಾನದ 361ನೇ ವಿಧಿಯಡಿ ರಾಜ್ಯಪಾಲರಿಗೆ ರಕ್ಷಣೆ ಒದಗಿಸಿರುವುದಕ್ಕೆ ಸಂಬಂಧಿಸಿದ ಪ್ರಶ್ನೆಯನ್ನು ಅರ್ಜಿಯಲ್ಲಿ ಎತ್ತಲಾಗಿದೆ (ರಾಜ್ಯಪಾಲರ ಅವಧಿಯಲ್ಲಿ ಅವರ ವಿರುದ್ಧ ಕ್ರಿಮಿನಲ್ ಪ್ರಕ್ರಿಯೆ ಆರಂಭಿಸುವಂತಿಲ್ಲ ಅಥವಾ ನಡೆಸುವಂತಿಲ್ಲ). ಯಾವಾಗ ಕ್ರಿಮಿನಲ್ ಪ್ರಕ್ರಿಯೆ ನಡೆಸಬೇಕು ಎಂಬುದುಕ್ಕೆ ಸಂಬಂಧಿಸಿದ ವಿಚಾರವನ್ನು ಎತ್ತಲಾಗಿದೆ. ಕೇಂದ್ರ ಸರ್ಕಾರವನ್ನು ಪಕ್ಷಕಾರರನ್ನಾಗಿ ಮಾಡಬೇಕು. ನೋಟಿಸ್ ಜಾರಿ ಮಾಡಲಾಗಿದ್ದು, ಅಟಾರ್ನಿ ಜನರಲ್ ಅವರು ನಮಗೆ ವಿಚಾರಣೆಗೆ ಸಹಕರಿಸಬೇಕು” ಎಂದಿದೆ.
ರಾಜ್ಯಪಾಲ ಸಿ ವಿ ಆನಂದ್ ಬೋಸ್ ಅವರು ತಮಗೆ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಮಹಿಳಾ ಸಿಬ್ಬಂದಿ ಆರೋಪಿಸಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸಿತು.
ರಾಜಭವನಕ್ಕೆ ಏಪ್ರಿಲ್ 24 ಮತ್ತು ಮೇ 2ರಂದು ಉತ್ತಮ ಉದ್ಯೋಗ ಕೊಡುವುದಾಗಿ ಭರವಸೆ ನೀಡಿ ಕೆಲಸದ ಸಂದರ್ಭದಲ್ಲಿ ಕರೆಯಿಸಿಕೊಂಡು ಬೋಸ್ ಅವರು ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಆಕೆ ಆರೋಪಿಸಿದ್ದಾರೆ.
ರಾಜ್ಯಪಾಲರು ತಮ್ಮ ಕರ್ತವ್ಯ ನಿಭಾಯಿಸಲು ಸಂವಿಧಾನದ 361ನೇ ವಿಧಿಯಡಿ ಒದಗಿಸಲಾಗಿರುವ ಪೂರ್ಣ ರಕ್ಷಣೆಯು ಅವರು ಲೈಂಗಿಕ ಕಿರುಕುಳ ಅಥವಾ ದೌರ್ಜನ್ಯ ಎಸಗುವುದನ್ನು ಕರ್ತವ್ಯದ ಭಾಗವೆಂದು ಪರಿಗಣಿಸುತ್ತದೆಯೇ ಎನ್ನುವುದನ್ನು ನಿರ್ಧರಿಸುವಂತೆ ಅವರು ಕೋರಿದ್ದಾರೆ.
ಮಹಿಳೆಯ ಪರವಾಗಿ ವಾದಿಸಿದ ಹಿರಿಯ ವಕೀಲ ಶ್ಯಾಮ್ ದಿವಾನ್ ಅವರು "ಯಾವುದೇ ವಿಚಾರಣೆ ನಡೆಸಲೇಬಾರದು ಎಂಬ ಪ್ರಕರಣ ಇದಲ್ಲ. ಸಾಕ್ಷ್ಯ ಸಂಗ್ರಹಿಸಬೇಕಿದ್ದು, ಈ ಅರ್ಜಿಯ ವಿಚಾರಣೆಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗದು” ಎಂದರು.
ಆಗ ಪೀಠವು ಕೇಂದ್ರ ಸರ್ಕಾರವನ್ನು ಪಕ್ಷಕಾರರನ್ನಾಗಿಸಿ ಎಂದು ನೋಟಿಸ್ ಜಾರಿ ಮಾಡಿ, ವಿಚಾರಣೆ ಮುಂದೂಡಿತು.