A1
A1
ಸುದ್ದಿಗಳು

ಹಾಸ್ಯ ಕಲಾವಿದ ಮುನಾವರ್ ಫಾರೂಖಿಗೆ ಸುಪ್ರೀಂ ಕೋರ್ಟ್ ಜಾಮೀನು; ಎಲ್ಲಾ ಎಫ್ಐಆರ್‌ಗಳನ್ನು ಇಂದೋರ್‌ಗೆ ವರ್ಗಾಯಿಸಲು ಸೂಚನೆ

Bar & Bench

ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಡಿ ಮಧ್ಯಪ್ರದೇಶ ಪೊಲೀಸರು ತಮ್ಮ ವಿರುದ್ಧ ದಾಖಲಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಸ್ಯ ಕಲಾವಿದ ಮುನಾವರ್ ಫಾರೂಖಿ ಅವರಿಗೆ ಸುಪ್ರೀಂ ಕೋರ್ಟ್ ಸೋಮವಾರ ಜಾಮೀನು ನೀಡಿದೆ [ಮುನಾವರ್ ಮತ್ತು ಮಧ್ಯಪ್ರದೇಶ ಸರ್ಕಾರ ನಡುವಣ ಪ್ರಕರಣ].

ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ ಮತ್ತು ಸಂಜಯ್ ಕರೋಲ್ ಅವರಿದ್ದ ಪೀಠ  ಹಾಸ್ಯ ಕಲಾವಿದನ ವಿರುದ್ಧದ ಎಲ್ಲಾ ದೂರುಗಳನ್ನು ಒಟ್ಟುಗೂಡಿಸಿ ಇಂದೋರ್‌ಗೆ ವರ್ಗಾಯಿಸಿತು. ಅಲ್ಲದೆ ಈಗಾಗಲೇ ನೀಡಿರುವ ಮಧ್ಯಂತರ ರಕ್ಷಣೆಯನ್ನು ಅದು ಖಾಯಂಗೊಳಿಸಿದೆ. ಮೂರು ವಾರಗಳ ಕಾಲ ದೆಹಲಿ ಪೊಲೀಸರು ವಾರಂಟ್‌ ನೀಡದಂತೆಯೂ ಮುನಾವರ್‌ ಅವರಿಗೆ ರಕ್ಷಣೆ ನೀಡಲಾಗಿದೆ.

ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದಲ್ಲಿ ತಮ್ಮ ವಿರುದ್ಧ ಹೂಡಲಾಗಿದ್ದ ಕ್ರಿಮಿನಲ್ ಮೊಕದ್ದಮೆ ರದ್ದುಗೊಳಿಸುವಂತೆ ಮುನಾವರ್ ಸಲ್ಲಿಸಿದ್ದ ಮನವಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಈ ಆದೇಶ ನೀಡಿದೆ.

ಇಂದೋರ್‌ನಲ್ಲಿ ನಡೆಸಿಕೊಟ್ಟ ಹಾಸ್ಯ ಕಾರ್ಯಕ್ರಮವೊಂದರಲ್ಲಿ ಹಿಂದೂ ದೇವರುಗಳ ವಿರುದ್ಧ ಅವಹೇಳನಕಾರಿ ಹೇಳಿಕೆಗ ನೀಡಿದ್ದಾರೆ ಎಂಬ ಆರೋಪದ ಮೇಲೆ ಮಧ್ಯಪ್ರದೇಶ ಪೊಲೀಸರು ಮುನಾವರ್‌ ಅವರನ್ನು ಜನವರಿ 1, 2021ರಂದು ಬಂಧಿಸಿದ್ದರು. ಹಿಂದುತ್ವ ಸಂಘಟನೆಯಾದ ಹಿಂದ್ ರಕ್ಷಕ ಸಂಘಟನೆಯ ಮುಖ್ಯಸ್ಥ ಏಕಲವ್ಯ ಸಿಂಗ್ ಗೌರ್ ಈ ಕುರಿತು ದೂರು ದಾಖಲಿಸಿದ್ದರು.

ಮುನಾವರ್‌ ಅವರ ಜಾಮೀನು ಅರ್ಜಿಯನ್ನು ಈ ಹಿಂದೆ ಸೆಷನ್ಸ್ ನ್ಯಾಯಾಲಯ ಮತ್ತು ಮಧ್ಯಪ್ರದೇಶ ಹೈಕೋರ್ಟ್ ತಿರಸ್ಕರಿಸಿದ್ದವು.